INDIA VS NDA: ‘ಜಾತಿ ಗಣತಿ’ಗೆ ವಿರೋಧ ಪಕ್ಷಗಳ ಜಂಟಿ ನಿರ್ಣಯ!
ಪ್ರಧಾನಿ ಮೋದಿ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ವಿರೋಧ ಪಕ್ಷಗಳು ತೊಡೆ ತಟ್ಟಿವೆ. ಅದರಲ್ಲೂ 'ಇಂಡಿಯಾ' (INDIA) VS 'ಎನ್‌ಡಿಎ' (NDA) ಘೋಷವಾಕ್ಯದಡಿ 2024ರ ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿವೆ. ಇದರ ಜತೆಗೆ ಕೇಂದ್ರದ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗ ಮಾಡಲಾಗಿದ್ದು, 'ಜಾತಿ ಗಣತಿ'ಗೆ 26 ವಿರೋಧ ಪಕ್ಷಗಳು ಜಂಟಿ ನಿರ್ಣಯ ಕೈಗೊಂಡಿವೆ.
ಅಂದಹಾಗೆ 'ಅಲ್ಪಸಂಖ್ಯಾತರ ವಿರುದ್ಧ ಹೆಚ್ಚಾಗುತ್ತಿರುವ ದ್ವೇಷ, ಮಹಿಳೆಯರು & ದಲಿತರು ಸೇರಿ ಆದಿವಾಸಿಗಳು ಹಾಗೂ ಕಾಶ್ಮೀರಿ ಪಂಡಿತರ ಮೇಲೆ ಹೆಚ್ಚುತ್ತಿರುವ ಅಪರಾಧ ತಡೆಯಲು ನಾವು ಒಗ್ಗೂಡಿದ್ದೇವೆ' ಎಂದು ಪ್ರತಿಪಾದಿಸಿದೆ 'ಇಂಡಿಯಾ' (INDIA) ಒಕ್ಕೂಟ. ಹೀಗೆ 26 ವಿರೋಧ ಪಕ್ಷಗಳ ಹೊಸ ಮೈತ್ರಿಕೂಟ ಜಾತಿ ಗಣತಿಯ ಜಾರಿಗಾಗಿ ಒತ್ತಾಯಿಸಿ ಇಂದು ಜಂಟಿ ನಿರ್ಣಯ ಕೈಗೊಂಡಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ವಿರುದ್ಧ ಸ್ಪರ್ಧಿಗೆ ಇಂಡಿಯನ್ ನ್ಯಾಶನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲಯನ್ಸ್ (ಇಂಡಿಯಾ) ಎಂದು ನಾಮಕರಣ ಮಾಡಿವೆ ವಿಪಕ್ಷಗಳು. ಹಾಗೇ ಇದೇ ಸಭೆಯಲ್ಲಿ ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ವಿರೋಧ ಪಕ್ಷಗಳ ಆರೋಪ ಏನು?
ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿರುವ ವಿಪಕ್ಷ ನಾಯಕರು, 'ನಮ್ಮ ಗಣರಾಜ್ಯದ ಸ್ವರೂಪವನ್ನ ಬಿಜೆಪಿ ವ್ಯವಸ್ಥಿತವಾಗಿ ನಾಶ ಮಾಡ್ತಿದೆ. ನಮ್ಮ ರಾಷ್ಟ್ರದ ಇತಿಹಾಸದಲ್ಲಿ ನಾವು ಅತ್ಯಂತ ನಿರ್ಣಾಯಕ ಘಟ್ಟದಲ್ಲಿದ್ದೇವೆ. ಭಾರತ ಸಂವಿಧಾನದ ಆಧಾರ ಸ್ತಂಭಗಳಾದ ಜಾತ್ಯತೀತ ಪ್ರಜಾಪ್ರಭುತ್ವ, ಆರ್ಥಿಕ ಸಾರ್ವಭೌಮತ್ವ, ಸಾಮಾಜಿಕ ನ್ಯಾಯ & ಫೆಡರಲಿಸಂ ಅನ್ನು ಕ್ರಮಬದ್ಧವಾಗಿ ದುರ್ಬಲಗೊಳಿಸಲಾಗುತ್ತಿದೆ' ಎಂದು ಆರೋಪಿಸಿದ್ದಾರೆ ವಿಪಕ್ಷ ನಾಯಕರು. ಅಲ್ಲದೆ ಮಣಿಪುರ ಹಿಂಸಾಚಾರದ ಬಗ್ಗೆಯೂ ವಿರೋಧ ಪಕ್ಷಗಳು ಸಭೆ ವೇಳೆ ಪ್ರಸ್ತಾಪ ಮಾಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿವೆ.
'ಇಂಡಿಯಾ' ಒಕ್ಕೂಟದ 26 ಪಕ್ಷಗಳು ಇವು?
ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಜೆಡಿ(ಯು), ಆರ್‌ಜೆಡಿ, ಎನ್‌ಸಿಪಿ, ರಾಷ್ಟ್ರೀಯ ಲೋಕದಳ, ಜಮ್ಮು ಕಾಶ್ಮೀರ್ ನ್ಯಾಷನಲ್ ಕಾನ್ಫರೆನ್ಸ್, ಅಪ್ನಾ ದಳ್ (ಕಮೆರಾವಾಡಿ), ಎಸ್‌ಪಿ, ಶಿವಸೇನಾ (ಉದ್ಧವ್ ಠಾಕ್ರೆ), ಜೆಎಂಎಂ, ಪಿಡಿಪಿ, ಸಿಪಿಐ, ಸಿಪಿಐ (ಎಂ), ಸಿಪಿಐ (ಎಂಎಲ್), ರೆವೆಲ್ಯುಷನರಿ ಸೋಷಿಯಲಿಸ್ಟ್ ಪಾರ್ಟಿ, ಆಲ್ ಇಂಡಿಯಾ ಫಾರ್ವಡ್ ಬ್ಲಾಕ್, ಎಂಡಿಎಂಕೆ, ವಿಸಿಕೆ (ವಿಡುದಲೈ ಚಿರುತೈಗಳ್ ಕಚ್ಚಿ), ಕೆಎಂಡಿಕೆ (ಕೊಂಗುನಾಡು ಮಕ್ಕಳ್ ದೇಸಿಯಾ ಕಚ್ಚಿ), ಎಂಎಂಕೆ (ಮಣಿತನೆಯ ಮಕ್ಕಳ್ ಕಚ್ಚಿ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸೇರಿದಂತೆ ಕೇರಳ ಕಾಂಗ್ರೆಸ್ (ಮಣಿ) ಹಾಗೂ ಕೇರಳ ಕಾಂಗ್ರೆಸ್ (ಜೋಸೆಫ್) ಪಕ್ಷಗಳು 'ಇಂಡಿಯಾ' ಒಕ್ಕೂಟದ ಭಾಗವಾಗಲಿವೆ.

ಮುಂದಿನ ಸಭೆ ಮುಂಭೈನಲ್ಲಿ ಫಿಕ್ಸ್
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇಂದು ನಡೆದ ಮಹತ್ವದ ಸಭೆಯ ನಂತರ ವಿಪಕ್ಷಗಳಲ್ಲಿ ಹಲವು ನಿರ್ಣಯ ಕೈಗೊಳ್ಳಲಾಗಿದೆ. ಪ್ರಮುಖವಾಗಿ 11 ಜನರ ಸಮನ್ವಯ ಸಮಿತಿಯನ್ನೂ ರಚಿಸಲು ತೀರ್ಮಾನ ಮಾಡಲಾಗಿದೆ. ಹಾಗೇ ಮುಂದಿನ ಸಭೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆಯಲಿದೆ. ಮುಂಬೈ ಸಭೆಯಲ್ಲಿ ಸಮಿತಿ ಬಗ್ಗೆ ಅಂತಿಮ ಚರ್ಚೆ ನಡೆಸಿ, ಸಮಿತಿಯಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುದನ್ನು ಹೇಳಲಾಗುವುದು ಅಂತಾ ಎಐಸಿಸಿ ಅಧ್ಯಕ್ಷರಾದ ಖರ್ಗೆ ತಿಳಿಸಿದ್ದಾರೆ. ಇದು ಮುಂಬರುವ ಲೋಕಸಭೆ ಚುನಾವಣೆ ಮೇಲಿನ ನಿರೀಕ್ಷೆಯನ್ನ ಡಬಲ್ ಮಾಡುತ್ತಿದೆ.
ಒಟ್ನಲ್ಲಿ ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷಗಳ ನಡುವೆ ಚುನಾವಣೆಗೆ ಮುನ್ನ ಭಾರಿ ಫೈಟ್ ಶುರುವಾಗಿದೆ. ಅತ್ತ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಒಂದಾಗುತ್ತಿವೆ. ಆದ್ರೆ ಈ ಸಂದರ್ಭದಲ್ಲೇ ಬಿಜೆಪಿ ಕೂಡ ಅಲರ್ಟ್ ಆಗಿದೆ. ಇಂದು ಬೆಂಗಳೂರಿನಲ್ಲಿ ನಡೆದಿರುವ ಪ್ರತಿಪಕ್ಷಗಳ ಸಭೆ ಮುಗಿದ ಬೆನ್ನಲ್ಲೇ ದೆಹಲಿ ಖಾಸಗಿ ಹೋಟೆಲ್‌ನಲ್ಲಿ ಎನ್‌ಡಿಎ ಮೀಟಿಂಗ್ ಶುರುವಾಗಿದೆ. ಹೀಗಾಗಿ ಮತದಾರ ಪ್ರಭುವನ್ನು ಒಲಿಸಿಕೊಳ್ಳಲು ಎರಡೂ ಕಡೆಯಿಂದಲೂ ಭರ್ಜರಿ ಪ್ರಯತ್ನ ಶುರುವಾಗಿದೆ.











Click it and Unblock the Notifications