ಮಣಿಪುರ ಭೇಟಿ ನೀಡಿದ್ದ ವಿಪಕ್ಷಗಳ ಸಂಸದರ ಸಭೆ: ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಭಾಗಿ
ನವದೆಹಲಿ, ಜುಲೈ. 31: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಎರಡು ದಿನಗಳ ಭೇಟಿ ನೀಡಿದ್ದ ವಿಪಕ್ಷಗಳ ಸಂಸದರ ನಿಯೋಗವು ಸೋಮವಾರ ಸಂಸತ್ತಿನ ಅಧಿವೇಶನಕ್ಕೆ ಮುಂಚಿತವಾಗಿ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಲು ಇಂಡಿಯಾ (ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್)ದ ಸದಸ್ಯರನ್ನು ಭೇಟಿ ಮಾಡಿ ಸಭೆ ನಡೆಸಿದೆ.
ಸಂಸತ್ ಭವನದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಭಾಗವಹಿಸಿದ್ದರು. ಒಟ್ಟು 21 ಸಂಸದರು ಮಣಿಪುರಕ್ಕೆ ಭೇಟಿ ನೀಡಿದ್ದು, ಮೇ 3 ರಿಂದ ಜನಾಂಗೀಯ ಘರ್ಷಣೆಗೆ ಒಳಗಾಗಿರುವ ಈಶಾನ್ಯ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ಸಂಸದರ ನಿಯೋಗವು ಸಂತ್ರಸ್ತರನ್ನು ಭೇಟಿ ಮಾಡಿತು. ಜೊತೆಗೆ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದೆ. ನಿಯೋಗದ ಭಾಗವಾಗಿದ್ದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಮಣಿಪುರದ ಪರಿಸ್ಥಿತಿಯನ್ನು "ಸಮಾಧಿ" ಎಂದು ಕಿಡಿಕಾರಿದ್ದಾರೆ. "ನಮ್ಮ ಬೇಡಿಕೆ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಸುವುದು ಮಾತ್ರ. ಮಣಿಪುರದ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ದೇಶವನ್ನು ಉಳಿಸಬೇಕಾಗಿದೆ. ಬಿಜೆಪಿ ಮತ್ತು ಅದರ ಮೈತ್ರಿಕೂಟಗಳು ಕೂಡ ಮಣಿಪುರ ಪ್ರವಾಸ ಮಾಡಬೇಕು. ಮಣಿಪುರದ ಪರಿಸ್ಥಿತಿಯನ್ನು ಎಲ್ಲರೂ ವಿಶ್ಲೇಷಿಸಬೇಕಾಗಿದೆ" ಎಂದು ಸಭೆಯ ಮೊದಲು ಮಾಧ್ಯಮಗಳಿಗೆ ತಿಳಿಸಿದ್ದರು.
ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಮಾತನಾಡಿ, ಸಭೆ ಮುಗಿದ ನಂತರ ಮಣಿಪುರದಲ್ಲಿ ಪ್ರತಿಪಕ್ಷಗಳ ಮುಂದಿನ ನಡೆಯ ಬಗ್ಗೆ ಬಣವು ತಿಳಿಸುತ್ತದೆ. "ಇಂದು, I.N.D.I.A ಬ್ಲಾಕ್‌ನ ಸಂಸದರು ಸಭೆಯಲ್ಲಿ ಮಣಿಪುರದ ಪರಿಸ್ಥಿತಿಯನ್ನು ವಿವರಿಸಲಿದ್ದಾರೆ, ನಂತರ ಮಣಿಪರದ ಬಗ್ಗೆ ನಾವು ತೆಗೆದುಕೊಳ್ಳುವ ನಮ್ಮ ಮುಂದಿನ ನಡೆಯ ಬಗ್ಗೆ ನಿಮಗೆ ತಿಳಿಸುತ್ತೇವೆ" ಎಂದು ಹೇಳಿದ್ದಾರೆ.

ಮಣಿಪುರ ರಾಜ್ಯಪಾಲರನ್ನು ಭೇಟಿ ಮಾಡಿದ ಸಂಸದರ ನಿಯೋಗ
ಮಣಿಪುರ ಭೇಟಿಯ ಎರಡನೇ ದಿನವಾದ ಭಾನುವಾರ ಮಣಿಪುರದ ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರನ್ನು ಭೇಟಿಯಾದ ನಿಯೋಗವು ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸುವಂತೆ ಮನವಿ ಮಾಡಿತ್ತು. "140 ಕ್ಕೂ ಹೆಚ್ಚು ಸಾವುಗಳು, 500 ಕ್ಕೂ ಹೆಚ್ಚು ಗಾಯಾಳುಗಳು, 5,000 ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಮತ್ತು 60,000 ಕ್ಕಿಂತ ಹೆಚ್ಚು ಜನರ ಆಂತರಿಕ ಸ್ಥಳಾಂತರದ ಅಂಕಿ ಅಂಶಗಳಿಂದ ಎರಡು ಸಮುದಾಯಗಳ ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯವು ಸ್ಪಷ್ಟವಾಗಿದೆ" ಎಂದು ಕಿಡಿಕಾರಿತ್ತು.
"ಕಳೆದ 89 ದಿನಗಳಿಂದ ಮಣಿಪುರದಲ್ಲಿ ಶಾಂತಿ ಮತ್ತು ಸಹಜತೆಯನ್ನು ಪುನಃಸ್ಥಾಪಿಸಲು ಮಣಿಪುರದ ಅನಿಶ್ಚಿತ ಪರಿಸ್ಥಿತಿಯಲ್ಲಿ ಮಧ್ಯಪ್ರವೇಶಿಸಿ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿಳಿಸಲು ನಿಮ್ಮನ್ನು ವಿನಂತಿಸಲಾಗಿದೆ" ಎಂದು ಜ್ಞಾಪಕ ಪತ್ರದಲ್ಲಿ ತಿಳಿಸಿ ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು. ಈ ವೇಳೆ ಹಿಂಸಾಚಾರದ ಬಗ್ಗೆ "ಉದಾಸೀನತೆ" ಎಂದು ಪ್ರಧಾನಿ ನರೇಂದ್ರ ಮೋದಿಯವರ ಮೌನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ.












Click it and Unblock the Notifications