ತನಿಖಾ ಸಂಸ್ಥೆಗಳ ದುರುಪಯೋಗ: ಕೇಜ್ರಿವಾಲ್, ಮಮತಾ ಸೇರಿದಂತೆ 9 ವಿಪಕ್ಷಗಳ ನಾಯಕರಿಂದ ಪ್ರಧಾನಿ ಮೋದಿಗೆ ಪತ್ರ
ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಕುರಿತು ಎಂಟು ಗಂಟೆಗಳ ವಿಚಾರಣೆ ನಡೆಸಿದ್ದ ಕೇಂದ್ರೀಯ ತನಿಖಾ ದಳ ಫೆಬ್ರವರಿ 26 ರಂದು ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿತ್ತು
ನವದೆಹಲಿ, ಮಾರ್ಚ್ 05: ದೆಹಲಿ ಉಪಮುಖ್ಯಮಂತ್ರಿ ಮನೀರ್ಶ ಸಿಸೋಡಿಯಾ ಬಂಧನ ಖಂಡಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ಶಿವಸೇನೆಯ (ಯುಬಿಟಿ) ಉದ್ಧವ್ ಠಾಕ್ರೆ, ಎನ್‌ಸಿಪಿಯ ಶರದ್ ಪವಾರ್ ಮತ್ತು ಬಿಆರ್‌ಎಸ್‌ನ ಕೆ ಚಂದ್ರಶೇಖರ ರಾವ್ ಸೇರಿದಂತೆ ಒಂಬತ್ತು ಪ್ರತಿಪಕ್ಷ ನಾಯಕರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ದೆಹಲಿ ಅಬಕಾರಿ ಹಗರಣದಲ್ಲಿ ಕೇಂದ್ರೀಯ ತನಿಖಾ ದಳ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದೆ. ಈ ಹಿನ್ನೆಲೆ ಪತ್ರ ಬರೆದಿರುವ ವಿಪಕ್ಷಗಳು, ಕೇಂದ್ರೀಯ ಸಂಸ್ಥೆಗಳ ದುರುಪಯೋಗವಾಗುತ್ತಿವೆ ಎಂದು ಟೀಕಿಸಿವೆ. ಜೊತೆಗೆ ಅದಾನಿ ಗ್ರೂಪ್‌ನ "ಹಣಕಾಸಿನ ಅಕ್ರಮಗಳ" ಬಗ್ಗೆ ಏಕೆ ತನಿಖೆ ಮಾಡಿಲ್ಲ ಎಂದು ಕಿಡಿಕಾರಿವೆ.

ದೆಹಲಿಯ ಶಾಲಾ ಶಿಕ್ಷಣವನ್ನು ಉತ್ತಮ ಸ್ಥಿತಿಗೆ ತಂದು ಮನೀಶ್ ಸಿಸೋಡಿಯಾ ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದಾರೆ. ಅವರ ಬಂಧನವನ್ನು ವಿಶ್ವಾದ್ಯಂತ ರಾಜಕೀಯ ದ್ವೇಷಕ್ಕೆ ಉದಾಹರಣೆಯಾಗಿ ಉಲ್ಲೇಖಿಸಲಾಗುತ್ತಿದೆ. ಭಾರತದ ಪ್ರಜಾಪ್ರಭುತ್ವದ ಮೌಲ್ಯಗಳು ನಿರಂಕುಶ ಬಿಜೆಪಿ ಆಡಳಿತದಲ್ಲಿ ಅಪಾಯದಲ್ಲಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಮಾಜಿ ಟಿಎಂಸಿ ನಾಯಕ ಸುವೇಂದು ಅಧಿಕಾರಿ ಅವರ ಉದಾಹರಣೆಗಳನ್ನು ಉಲ್ಲೇಖಿಸಿ, ವಿವಿಧ ವಿರೋಧ ಪಕ್ಷಗಳ ನಾಯಕರು ಬಿಜೆಪಿಗೆ ಸೇರುವವರ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳ ಪಾತ್ರವಿದೆ ಎಂದು ಆರೋಪಿಸಿವೆ.
"ಈ ಏಜೆನ್ಸಿಗಳು ತಮ್ಮ ಆದ್ಯತೆಗಳನ್ನು ತಪ್ಪಾಗಿ ಇರಿಸಿಕೊಂಡಿರುವುದು ಸ್ಪಷ್ಟವಾಗಿದೆ. ಅಂತತಾರಾಷ್ಟ್ರೀಯ ವಿಧಿವಿಜ್ಞಾನ ಹಣಕಾಸು ಸಂಶೋಧನಾ ವರದಿಯ ಪ್ರಕಟಣೆಯ ನಂತರ, ಎಸ್‌ಬಿಐ ಮತ್ತು ಎಲ್‌ಐಸಿ ಒಂದು ನಿರ್ದಿಷ್ಟ ಸಂಸ್ಥೆ ಜೊತೆಗೆ ತೋಡಗಿಸಿಕೊಂಡ ಕಾರಣ ತಮ್ಮ ಷೇರುಗಳ ಮಾರುಕಟ್ಟೆ ಬಂಡವಾಳದಲ್ಲಿ 78,000 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿವೆ ಎಂದು ವರದಿಯಾಗಿದೆ. ಸಾರ್ವಜನಿಕರ ಹಣವನ್ನು ಪಣಕ್ಕಿಟ್ಟಿದ್ದರೂ ಸಂಸ್ಥೆಯ ಹಣಕಾಸು ಅವ್ಯವಹಾರಗಳ ತನಿಖೆಗೆ ಕೇಂದ್ರ ಏಜೆನ್ಸಿಗಳನ್ನು ಏಕೆ ನೇಮಿಸಿಲ್ಲ?" ಎಂದು ಅದಾನಿ ಸಮೂಹವನ್ನು ಉಲ್ಲೇಖೀಸದೆ ಪ್ರಶ್ನೆ ಮಾಡಲಾಗಿದೆ.

ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಕುರಿತು ಎಂಟು ಗಂಟೆಗಳ ವಿಚಾರಣೆ ನಡೆಸಿದ್ದ ಕೇಂದ್ರೀಯ ತನಿಖಾ ದಳ ಫೆಬ್ರವರಿ 26 ರಂದು ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿತ್ತು. ಶನಿವಾರ, 5 ದಿನಗಳ ಬಂಧನ ಪೂರ್ಣಗೊಂಡ ನಂತರ ದೆಹಲಿ ನ್ಯಾಯಾಲಯವು ಅವರ ಸಿಬಿಐ ಕಸ್ಟಡಿಯನ್ನು ಎರಡು ದಿನಗಳವರೆಗೆ ವಿಸ್ತರಿಸಿದೆ.












Click it and Unblock the Notifications