ಪ್ರಧಾನಿ ಪ್ರಕಾರ ಕೂಲಿ ಕಾರ್ಮಿಕರಿಗೆ ಆಹಾರ, ವಸತಿ ನೀಡುವುದು ತಪ್ಪೇ: ಶಿವಸೇನೆ ಪ್ರಶ್ನೆ
ನವದೆಹಲಿ, ಫೆಬ್ರವರಿ 8: ಭಾರತದಲ್ಲಿ ಕೊವಿಡ್-19 ಲಾಕ್‌ಡೌನ್ ವೇಳೆ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಪ್ರಚೋದನೆ ನೀಡಿವೆ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಆರೋಪಕ್ಕೆ ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕೊವಿಡ್-19 ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿದವರನ್ನು ನೋಡಿಕೊಳ್ಳುವುದು ತಪ್ಪಾಗಿದ್ದರೆ, ಅಂಥ ತಪ್ಪನ್ನು 100 ಬಾರಿ ಮಾಡುವುದಾಗಿ ತಿರುಗೇಟು ನೀಡಿದ್ದಾರೆ.
ದೇಶದಲ್ಲಿ ಕೊರೊನಾವೈರಸ್ ಕಾರಣದಿಂದಾಗಿ ಲಾಕ್‌ಡೌನ್ ಘೋಷಿಸುವ ನಾಲ್ಕು ಗಂಟೆಗಳಿಗೂ ಮೊದಲೇ ರೈಲು ಮತ್ತು ಅಂತರರಾಜ್ಯ ಪ್ರಯಾಣವನ್ನು ನಿರ್ಬಂಧಿಸಲಾಯಿತು. "ವಲಸಿಗರು, ಅದರಲ್ಲೂ ಪ್ರಮುಖವಾಗಿ ದಿನಕೂಲಿ ಕಾರ್ಮಿಕರು, ಸಂಕಷ್ಟಕ್ಕೆ ಸಿಲುಕಿದ್ದರು. ಅಂಥವರಿಗೆ ವಸತಿ ಮತ್ತು ಆಹಾರವನ್ನು ನೀಡುವುದು ಪ್ರಧಾನಿಯ ದೃಷ್ಟಿಯಲ್ಲಿ ತಪ್ಪಾಗಿದ್ದರೆ, ಮಾನವೀಯತೆಗಾಗಿ ನಾವು ಈ ತಪ್ಪನ್ನು 100 ಪಟ್ಟು ಹೆಚ್ಚು ಮಾಡುತ್ತೇವೆ," ಎಂದು ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.
ಶ್ರಮಿಕ್ ರೈಲುಗಳು ಪ್ರಾರಂಭವಾದ ಸಮಯವನ್ನು ಈ ದೇಶ ಮರೆಯಲು ಸಾಧ್ಯವೇ ಎಂದು ಚತುರ್ವೇದಿ ಪ್ರಶ್ನಿಸಿದ್ದಾರೆ. ಬಡ ಕೂಲಿ ಕಾರ್ಮಿಕರಿಗೆ ಆದಾಯವಿಲ್ಲದ ಸಮಯದಲ್ಲಿ ರೈಲುಗಳ ಪ್ರಯಾಣಕ್ಕೆ ಸರ್ಕಾರವು ದರ ನಿಗದಿ ಮಾಡಿತು, ಅಂದು ರಾಜ್ಯ ಸರ್ಕಾರವೇ ಈ ಹಣವನ್ನು ಪಾವತಿಸಲು ಮುಂದಾಯಿತು. ಇದು ಪ್ರಧಾನಿಯವರ ಕಣ್ಣಿಗೆ ತಪ್ಪಾಗಿ ಗೋಚರಿಸಿದರೆ ಅಂಥ ತಪ್ಪನ್ನು ನಾವು 100 ಬಾರಿ ಮಾಡಲು ಸಿದ್ಧರಿದ್ದೇವೆ," ಎಂದಿದ್ದಾರೆ.

ಕೂಲಿ ಕಾರ್ಮಿಕರಿಗೆ ಊಟ ಮತ್ತು ಆಹಾರವಿರಲಿಲ್ಲ:
ಶ್ರಮಿಕ್ ರೈಲುಗಳು ನಿಗದಿತ ಪ್ರದೇಶದ ಹೊರತಾಗಿಯೂ ಬೇರೆ ದಿಕ್ಕುಗಳಲ್ಲಿ ಪ್ರಯಾಣಿಸಲು ಆರಂಭಿಸಿದ ವೇಳೆ ಈ ಕೂಲಿ ಕಾರ್ಮಿಕರಿಗೆ ನೀರು ಮತ್ತು ಆಹಾರವೇ ಸಿಗುತ್ತಿರಲಿಲ್ಲ ಎಂದು ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ದೂಷಿಸಿದ್ದಾರೆ. "ತಾಯಿ ಸಾವಿನಿಂದ ಅವಳ ಇಬ್ಬರು ಚಿಕ್ಕ ಮಕ್ಕಳ ಅರಿವಿಲ್ಲದೆ ಇರುವ ದೃಶ್ಯವನ್ನು ಯಾರಾದರೂ ಮರೆಯಬಹುದೇ, ಅವರಿಗೆ ಪರಿಹಾರ ನೀಡುವುದು ತಪ್ಪಾಗಿದ್ದರೆ ಇದನ್ನು 100 ಬಾರಿ ಮಾಡುತ್ತೇನೆ," ಎಂದು ಅವರು ಹೇಳಿದರು.
"ರಾಜ್ಯಗಳು ಕೇಳಿದ ರೈಲುಗಳನ್ನು ಅವರಿಗೆ ನೀಡದಿದ್ದಾಗ ಮತ್ತು ಅಂದಿನ ರೈಲ್ವೆ ಸಚಿವರು ಈ ಸಮಸ್ಯೆಯನ್ನು ನಿಯಂತ್ರಿಸುವ ಬದಲಿಗೆ ದುರಹಂಕಾರದಲ್ಲಿ ರಾಜಕೀಯಗೊಳಿಸಿದರು. ಅಂಥ ಸಂದರ್ಭದಲ್ಲಿ ದೇಶದ ನಾಗರಿಕರ ಕೈ ಬಿಡಬೇಕೇ?, ಪ್ರಧಾನಮಂತ್ರಿಗಳು ಇಂಥ ಹೇಳಿಕೆಗಳನ್ನು ನೀಡುವುದಕ್ಕೂ ಮೊದಲು ಕೆಲವು ಸೂಕ್ಷ್ಮತೆ, ನಮ್ರತೆ ಹಾಗೂ ಮಾನವೀಯತೆ ಬಗ್ಗೆ ತಿಳಿದುಕೊಳ್ಳಬೇಕು," ಎಂದು ಪ್ರಿಯಾಂಕಾ ಚತುರ್ವೇದಿ ತಿಳಿಸಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿಯವರು ಸೂಕ್ಷ್ಮವಾಗಿ ಗಮನಿಸಿದ್ದರೆ, ಈ ವಲಸೆ ಕಾರ್ಮಿಕರು ತಮ್ಮ ಮನೆಗಳನ್ನು ತಲುಪಿದಾಗ ಮೊದಲು ಅವರನ್ನು ಹೇಗೆ ಪ್ರತ್ಯೇಕವಾಗಿರಿಸಿ ಹೀನವಾಗಿ ಅವಮಾನಿಸಲಾಯಿತು ಎಂಬುದನ್ನು ಅವರು ನೋಡುತ್ತಿದ್ದರು. ನೋವಿನ ವಿರುದ್ಧ ಧ್ವನಿ ಎತ್ತುವುದು ತಪ್ಪೇ? ಹೌದು ಎಂದಾದರೆ, ಅಂತಹ ತಪ್ಪುಗಳನ್ನು 100 ಬಾರಿ ಮಾಡುತ್ತೇನೆ," ಎಂದಿದ್ದಾರೆ.
ಪ್ರಧಾನಿ ಮೋದಿ ಆರೋಪ ಮಾಡಿದ್ದೇನು?:
ಸಂಸತ್ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಲವು ರಾಜ್ಯಗಳಿಗೆ ಹರಡಲು ಮುಂಬೈ ಮತ್ತು ದೆಹಲಿ ಕಾರಣ ಎಂದು ಆರೋಪಿಸಿದ್ದರು. ಮುಂಬೈ ತೊರೆಯುವುದಕ್ಕಾಗಿ ಕಾಂಗ್ರೆಸ್ ಸರ್ಕಾರವು ವಲಸೆ ಕಾರ್ಮಿಕರಿಗೆ ಉಚಿತ ಟಿಕೆಟ್ ನೀಡಿತು. ಇದೇ ವೇಳೆ ದೆಹಲಿಯ ಕೊಳಚೆ ಪ್ರದೇಶಗಳಲ್ಲಿ ವಾಸವಿದ್ದ ವಲಸೆ ಕಾರ್ಮಿಕರು ದೆಹಲಿಯಿಂದ ಸ್ವಂತ ಊರುಗಳಿಗೆ ತೆರಳುವುದಕ್ಕೆ ಬಸ್ ವ್ಯವಸ್ಥೆಯನ್ನು ಮಾಡಿದವು. ಇದರಿಂದಾಗಿಯೇ ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ಕೊವಿಡ್-19 ಪ್ರಕರಣಗಳು ಹರಡುವುದಕ್ಕೆ ಕಾರಣವಾಯಿತು," ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು. ಈ ಆರೋಪದ ಬೆನ್ನಲ್ಲೇ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ನಡುವೆ ಟ್ವೀಟ್ ಸಮರ ಶುರುವಾಗಿದೆ.












Click it and Unblock the Notifications