Operation Sindoor: ಶ್ರೀನಗರ ಬಳಿ ವಿಮಾನ ಪತನ, ಪಾಕ್-ಇಂಡಿಯಾ ನಡುವೆ ದಟ್ಟವಾದ ಯುದ್ಧದ ಕಾರ್ಮೋಡ
Operation Sindoor: ಭಾರತವು ಪಾಕಿಸ್ತಾನದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಗೆ ಆಪರೇಷನ್ ಸಿಂದೂರವೆಂದು ಹೆಸರಿಡಲಾಗಿದೆ. ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಕಾಶ್ಮೀರದಲ್ಲಿ ಅಪರಿಚಿತ ವಿಮಾನ ಅಪಘಾತಕ್ಕೆ ಈಡಾಗಿ ಪತನಗೊಂಡಿದೆ. ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದ ಬಳಿ ಇರುವ ವುಯಾನ್ ಗ್ರಾಮದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ.
ಸ್ಥಳೀಯ ನಿವಾಸಿ ಅಬ್ದುಲ್ ರಶೀದ್ ಅವರು ಸಿಎನ್‌ಎನ್‌ಗೆ ಮಾತನಾಡಿ, 'ನಾವು ವಿಮಾನ ಹಾರಾಡುತ್ತಿರುವ ಶಬ್ದವನ್ನು ಕೇಳಿದೆವು. ನಂತರ ದೊಡ್ಡ ಸ್ಫೋಟವೊಂದರ ಶಬ್ದವನ್ನು ಕೇಳಿಸಿಕೊಂಡೆವು. ಇದು ಸಂಭವಿಸಿದ ಬಳಿಕ ನಾವು ಭಯಭೀತರಾಗಿ ನಮ್ಮ ಮನೆಗಳಿಂದ ಹೊರಗೆ ಓಡಿಹೋದೆವು. ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದೆವು. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ' ಎಂದು ತಿಳಿಸಿದ್ದಾರೆ.

ಶ್ರೀನಗರದ ಅಗ್ನಿಶಾಮಕ ಸೇವಾ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಯೊಬ್ಬರು ಸಿಎನ್‌ಎನ್‌ಗೆ ಮಾತನಾಡಿ ವುಯಾನ್‌ನಲ್ಲಿರುವ ಶಾಲಾ ಕಟ್ಟಡದ ಮೇಲೆ ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
'ನಮ್ಮ ಸಿಬ್ಬಂದಿ ಇನ್ನೂ ಸ್ಥಳದಲ್ಲಿದ್ದಾರೆ. ಅಪಘಾತದ ಕುರಿತು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ವಿವರಗಳು ಇನ್ನಷ್ಟೇ ಹೊರಬರಬೇಕಿದೆ' ಎಂದು ಅಧಿಕಾರಿ ತಿಳಿಸಿದ್ದಾರೆ.
ಎಎಫ್‌ಪಿ ಸುದ್ದಿ ಸಂಸ್ಥೆ ಪ್ರಕಟಿಸಿದ ಫೋಟೋಗಳಲ್ಲಿ ವಿಮಾನವು ವುಯಾನ್‌ನಲ್ಲಿರುವ ಕೆಂಪು ಇಟ್ಟಿಗೆ ಕಟ್ಟಡದ ಬಳಿ ಅಪಘಾತಕ್ಕೀಡಾಗಿ ಪತನಗೊಂಡಿರುವುದು ಕಂಡುಬಂದಿದೆ. ವಿಮಾನದ ಅವಶೇಷಗಳನ್ನು ಸ್ಥಳೀಯರು ವಿಕ್ಷಣೆ ಮಾಡುತ್ತಿರುವುದು ಫೋಟೊಗಳಲ್ಲಿ ಕಾಣಬಹುದಾಗಿದೆ. ಪತನಗೊಂಡಿರುವ ವಿಮಾನ ಯಾರಿಗೆ ಸೇರಿದೆ ಎಂಬುದು ಸ್ಪಷ್ಟವಾಗಿ ತಿಳಿಬಂದಿಲ್ಲ.
ಭಾರತ ಪಾಕಿಸ್ತಾನದ ವಿರುದ್ಧ ವೈಮಾನಿಕ ದಾಳಿ ನಡೆಸುತ್ತಿರುವ ಸಮಯದಲ್ಲೇ ಈ ವಿಮಾನವು ಪತನಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬುಧವಾರ ರಾತ್ರಿ ಪಾಕಿಸ್ತಾನದ ಐದು ಪ್ರದೇಶಗಳ ಮೇಲೆ ಭಾರತವು ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ 19 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಬವಾಲ್ಪುರದ ಸುಭಾನ್ ಮಸೀದಿಯ ಮೇಲೆ ಭಾರತ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 13 ಕ್ಕೆ ಏರಿದೆ ಎಂದು ಆಸ್ಪತ್ರೆಯ ವೈದ್ಯ ಜೊಹೈಬ್ ಅಹ್ಮದ್ ತಿಳಿಸಿದ್ದಾರೆ. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತ ನಡೆಸಿದ ದಾಳಿಯಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 19 ಕ್ಕೆ ಏರಿದೆ.
ಕಳೆದ ತಿಂಗಳು ಕಾಶ್ಮೀರ ಪೆಹಲ್ಗಾವ್ನಲ್ಲಿ ನಡೆದ ಪ್ರವಾಸಿಗರ ಮೇಲಿನ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಸೇನೆ ದಾಳಿ ನಡೆಸಿದೆ. ಭಾರತದ ವಿರುದ್ಧದ ಭಯೋತ್ಪಾದಕ ದಾಳಿಗಳನ್ನು ರೂಪಿಸಲಾಗುತ್ತಿದ್ದ ಕನಿಷ್ಠ ಒಂಬತ್ತು ಸ್ಥಳಗಳನ್ನು ಗುರಿಯಾಗಿ ಇರಿಸಿಕೊಂಡು ದಾಳಿ ಮಾಡಲಾಗಿದೆ ಎಂದು ಭಾರತದ ರಕ್ಷಣಾ ಸಚಿವಾಲಯ ತಿಳಿಸಿದೆ.












Click it and Unblock the Notifications