Ooty Temperature: 7 ದಶಕಗಳ ಬಳಿಕ ಅತ್ಯಧಿಕ ಗರಿಷ್ಠ ತಾಪಮಾನ: ಶಾಖದ ಹೊಡೆತಕ್ಕೆ ಪ್ರವಾಸಿಗರು ದಂಗು: ಅಪ್ಡೇಟ್
ಊಟಿ, ಏಪ್ರಿಲ್ 29: ಕರ್ನಾಟಕ ಸೇರಿದಂತೆ ದೇಶ ಅನೇಕ ರಾಜ್ಯಗಳಲ್ಲಿ ಅದರಲ್ಲೂ ದಕ್ಷಿಣ ರಾಜ್ಯಗಳಲ್ಲಿ ಈ ಭಾರಿ ಅತ್ಯಧಿಕ ತಾಪಮಾನ ಕಂಡು ಬಂದಿದೆ. ಇದೀಗ ಹಸಿರು ಮತ್ತು ತಂಪು ವಾತಾವರಣಕ್ಕೆ ಹೆಸರಾದ ಊಟಿ (Ooty temperature) ಯಲ್ಲಿ ತಾಪಮಾನ ದಶಕಗಳ ದಾಖಲೆ ಅಳಿಸಿ ಹಾಕಿದೆ.
ಹೌದು, ಕರ್ನಾಟಕದ ನೆರೆಯ ರಾಜ್ಯವಾದ ತಮಿಳುನಾಡಿನ ಜನಪ್ರಿಯ ಗುಡ್ಡಗಾಡು ಪ್ರದೇಶವಾದ ನೀಲಗಿರಿ ಜಿಲ್ಲೆಯ ಊಟಿಯ ಕೆಲವು ಭಾಗಗಳಲ್ಲಿ ಸದಾ ತಂಪಿರುತ್ತದೆ. ಹೀಗಾಗಿಯೇ ನೈಸರ್ಗಿಕ ಪ್ರಕೃತಿ ಸವಿಯಲು ಜನರು ಇಲ್ಲಿಗೆ ಆಗಾಗ ತೆರಳುತ್ತಾರೆ.

1951ರ ನಂತರ ಅತೀ ಗರಿಷ್ಠ ಉಷ್ಣಾಂಶ
1951ರ ನಂತರ ಇಷ್ಟು ವರ್ಷಗಳು ಬಳಿಕ 2024ರ ಏಪ್ರಿಲ್ ತಿಂಗಳ ಬೇಸಿಗೆಯಲ್ಲಿ ಸಾರ್ವಕಾಲಿಕ ತಾಪಮಾನ ದಾಖಲಾಗಿದೆ. 2024ರ ಏಪ್ರಿಲ್ 28ರ ಭಾನುವಾರದಂದು 29 ಡಿಗ್ರಿ ಸೆಲ್ಸಿಯಸ್ (84.2 ಡಿಗ್ರಿ ಫ್ಯಾರನ್‌ಹೀಟ್) ದಾಖಲೆಯ ಹೆಚ್ಚಿನ ತಾಪಮಾನ ಇಲ್ಲಿ ದಾಖಲಾಗಿದೆ. ಇದರಿಂದ ಇಲ್ಲಿನ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದೆ. ಪ್ರವಾಸಗರಲ್ಲಿ ಆತಂಕ ಉಂಟು ಮಾಡಿದೆ.
ಊಟಿಯ ಹವಾಮಾನ ಕುರಿತು ಚೆನ್ನೈ ಪ್ರಾದೇಶಿಕ ಹವಾಮಾನ ಇಲಾಖೆಯು ಟ್ವೀಟ್ ಪೋಸ್ಟ್ ಮಾಡಿ ಸೋಮವಾರ ಮಾಹಿತಿ ನೀಡಿದೆ. ಕಳೆದ ಭಾನುವಾರ ಊಟಿಯ ಉದಗಮಂಡಲಂ 29.0 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ದಾಖಲಾದ ಅತ್ಯಧಿಕ ಗರಿಷ್ಠ ತಾಪಮಾನ ಎಂದು ವರದಿ ಮಾಡಿದೆ.
ವಾಡಿಕೆಗಿಂತ ಶೇ.5.4 ಡಿಸೆ ಅಧಿಕ ತಾಪಮಾನ
ಕಳೆದ 07 ದಶಕಗಳಲ್ಲೇ ದಾಖಲಾದ ಅತ್ಯಧಿಕ ತಾಪಮಾನ ಇದಾಗಿದೆ. ಊಟಿಯಲ್ಲಿ ನಿರೀಕ್ಷಿತ ವಾಡಿಕೆ ತಾಪಮಾನದಕ್ಕಿಂತ ಭಾನುವಾರ ದಾಖಲಾದ 29.0 ಡಿಗ್ರಿ ಸೆಲ್ಸಿಯಸ್ ತಾಪಮಾನ 5.4 ಡಿಗ್ರಿ ಸೆಲ್ಸಿಯಸ್ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಈ ಬೇಸಿಗೆಯಲ್ಲಿ ಫೆಬ್ರವರಿ ತಿಂಗಳ ಆರಂಭದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಬಿಸಿಲು ಉತ್ತುಂಗಕ್ಕೆ ಏರಿದ್ದು ಕಂಡು ಬಂತು. ನಂತರ ಹವಾಮಾನ ವೈಪರಿತ್ಯಗಳಿಂದ ದೇಶಾದ್ಯಂತ ತಾಪಮಾನ ನಿರಂತರವಾಗಿ ಹೆಚ್ಚಾಗುತ್ತಾ ಸಾಗಿತು. ತಮಿಳುನಾಡು, ಚೆನ್ನೈ, ಊಟಿ ಹಾಗೂ ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಉಷ್ಣಾಂಶ ತೀವ್ರವಾಯಿತು.
ರಾಜ್ಯದ ಅನೇಕ ಕಡೆ ಮುಂದುವರಿದ ಬಿಸಿ ಅಲೆ
ಅಲ್ಲಲ್ಲಿ ಮಳೆ ಬಂದರೂ ಸಹಿತ ತಮಿಳುನಾಡು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಶಾಖದ ಅಲೆಯ ವಾತಾವರಣ ಕಂಡು ಬಂದಿದೆ. ಬಿಸಿ ಗಾಳಿಯು ಎಲ್ಲೆಡೆ ಚಾಲ್ತಿಯಲ್ಲಿದೆ. ತಾಪಮಾನವು ಸಾಮಾನ್ಯಕ್ಕಿಂತ 5 ಡಿಗ್ರಿಗಳಷ್ಟು ಹೆಚ್ಚಾಗಿದೆ. ಈರೋಡ್, ಧರ್ಮಪುರಿ ಸೇರಿದಂತೆ ಜಿಲ್ಲೆಗಳಲ್ಲಿ ತಾಪಮಾನ 108 ಡಿಗ್ರಿ ಸೆಲ್ಸಿಯಸ್ ಮುಟ್ಟಿದೆ.
ಈ ಉರಿವ ಬಿಸಿಲಿಗೆ ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ತುತ್ತಾಗಿದ್ದಾರೆ. ನಿರಂತರ ಬಿಸಿಲಿಗೆ ತತ್ತರಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಗಿರಿಧಾಮ ಊಟಿ ಮತ್ತು ಕೊಡೈಕೆನಾಲ್‌ಗೆ ಜನರು ಕುಟುಂಬ ಸಮೇತ ಆಗಮಿಸಿ ತಂಪು ವಾತಾವರಣ ಅನುಭವಿಸುತ್ತಿದ್ದರು. ಆದರೆ ಈಗ ಇಲ್ಲೂ ಸಹ ಅತ್ಯಧಿಕ ತಾಪಮಾನ ದಾಖಲಾಗಿ, ಪ್ರವಾಸಿಗರ ನಿರೀಕ್ಷೆ ಉಲ್ಟಾ ಮಾಡಿದೆ.












Click it and Unblock the Notifications