'ಒಂದು ರಾಷ್ಟ್ರ, ಒಂದು ಚುನಾವಣೆ': ಯಾರಿಗೆ ಲಾಭ, ಯಾರಿಗೆ ನಷ್ಟ? ಇಲ್ಲಿದೆ ಸಂಪೂರ್ಣ ಮಾಹಿತಿ
ನವದೆಹಲಿ, ಸೆಪ್ಟೆಂಬರ್ 1: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸೆಪ್ಟೆಂಬರ್ 18ರಂದು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದೆ. ಈ ಅಧಿವೇಶನದಲ್ಲಿ 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಚಾರದ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಹಾಗೂ ವಿರೋಧ ಪಕ್ಷಗಳ ಜೊತೆ ಒಮ್ಮತ ರೂಪಿಸಲು ಕೇಂದ್ರ ಸರ್ಕಾರವು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯನ್ನು ಸಹ ರಚಿಸಿದೆ.

ಬಹು ನಿರೀಕ್ಷಿತ ಮಸೂದೆಯನ್ನು ಸರ್ಕಾರ ಮಂಡಿಸುವ ಸಾಧ್ಯತೆಗಳ ಕುರಿತು ಈಗಾಗಲೇ ಹಲವು ಚರ್ಚೆಗಳು ನಡೆಯುತ್ತಿವೆ. ಏಕಕಾಲದಲ್ಲಿ ಚುನಾವಣೆ ನಡೆಸುವ ಪರಿಕಲ್ಪನೆಯ ಸಾಧಕ-ಬಾಧಕಗಳ ಕುರಿತಾಗಿಯೂ ಮಾತುಕತೆಗಳು ನಡೆಯುತ್ತಿವೆ.
ಪ್ರಧಾನಿ ಮೋದಿ ಬೆಂಬಲ
ಪ್ರಧಾನಿ ನರೇಂದ್ರ ಮೋದಿ ಅವರು 'ಒಂದು ರಾಷ್ಟ್ರ, ಒಂದು ಚುನಾವಣೆ' ಪರಿಕಲ್ಪನೆಯ ದೊಡ್ಡ ಪ್ರತಿಪಾದಕರಾಗಿದ್ದಾರೆ. 'ಒಂದು ರಾಷ್ಟ್ರ, ಒಂದು ಚುನಾವಣೆ' ಪರಿಕಲ್ಪನೆಯು 2014ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯ ಭಾಗವಾಗಿತ್ತು.
2016 ರಲ್ಲಿ ನೀತಿ ಆಯೋಗವು 'ಒಂದು ರಾಷ್ಟ್ರ, ಒಂದು ಚುನಾವಣೆ' ಪರಿಕಲ್ಪನೆಯ ಅನುಷ್ಠಾನಕ್ಕಾಗಿ ಕಾರ್ಯಾಗಾರವನ್ನು ಸಿದ್ಧಪಡಿಸಿತು. ಎರಡು ವರ್ಷಗಳ ನಂತರ ಅಂದರೆ 2018 ರಲ್ಲಿ ಕಾನೂನು ಆಯೋಗವು ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಐದು ಸಾಂವಿಧಾನಿಕ ಶಿಫಾರಸುಗಳ ಅಗತ್ಯವಿದೆ ಎಂದು ಹೇಳಿತು.

ಈ ವಿಚಾರದ ಕುರಿತು ಚರ್ಚಿಸಲು 2019 ರಲ್ಲಿ ಪ್ರಧಾನಿ ಮೋದಿ ಸರ್ವಪಕ್ಷ ಸಭೆಯನ್ನು ಕರೆದಿದ್ದರು. ಈ ಸಭೆಯನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್, ಬಹುಜನ ಸಮಾಜ ಪಕ್ಷ, ಸಮಾಜವಾದಿ ಪಕ್ಷ ಮತ್ತು ಡಿಎಂಕೆ ಬಹಿಷ್ಕರಿಸಿದ್ದವು. ಸಭೆಯಲ್ಲಿ ಆಮ್ ಆದ್ಮಿ ಪಾರ್ಟಿ, ತೆಲುಗು ದೇಶಂ ಪಕ್ಷ ಮತ್ತು ಬಿಆರ್‌ಎಸ್ ಭಾಗವಹಿಸಿದ್ದವು.
2022 ರಲ್ಲಿ ಆಗಿನ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಆಯೋಗವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದ್ದರು. ಆದರೆ, ಇದನ್ನು ಕಾರ್ಯಗತಗೊಳಿಸುವ ಮೊದಲು, ಸಂವಿಧಾನದಲ್ಲಿ ಕೆಲವು ತಿದ್ದುಪಡಿಗಳ ಅಗತ್ಯವಿದೆ ಎಂದು ಹೇಳಿದ್ದರು. ಅದೇ ವರ್ಷದ ಡಿಸೆಂಬರ್‌ನಲ್ಲಿ, ಕಾನೂನು ಆಯೋಗವು ಪ್ರಸ್ತಾಪದ ಕುರಿತು ರಾಜಕೀಯ ಪಕ್ಷಗಳು, ಅಧಿಕಾರಿಗಳು, ಶಿಕ್ಷಣ ತಜ್ಞರು ಸೇರಿದಂತೆ ಹಲವು ಪ್ರಮುಖರ ಅಭಿಪ್ರಾಯವನ್ನು ಕೇಳಿತು.
ಏಕಕಾಲದಲ್ಲಿ ಚುನಾವಣೆ: ಅನುಕೂಲಗಳೇನು?
ವರದಿಯ ಪ್ರಕಾರ, 2019 ರ ಲೋಕಸಭೆ ಚುನಾವಣೆಯಲ್ಲಿ ಒಟ್ಟು 60,000 ಕೋಟಿ ರೂಪಾಯಿ ವ್ಯಯವಾಗಿದೆ. ಈ ಮೊತ್ತವು ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗದ ವೆಚ್ಚವನ್ನು ಒಳಗೊಂಡಿದೆ. ಒಂದು ವೇಳೆ, ದೇಶದಲ್ಲಿ ಏಕಕಾಲದಲ್ಲಿ ಚುನಾವಣೆಗಳು ನಡೆದರೆ, ಚುನಾವಣಾ ವೆಚ್ಚವನ್ನು ಕಡಿಮೆ ಮಾಡಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ವಿವಿಧ ಚುನಾವಣೆಗಳಿಗೆ ಆಡಳಿತ ಸಿಬ್ಬಂದಿಯ ನಿಯೋಜನೆಯು ದೈನಂದಿನ ಆಡಳಿತ ಕಾರ್ಯಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಅಧಿಕಾರಿಗಳು ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಸಾಮಾನ್ಯ ಆಡಳಿತಾತ್ಮಕ ಕೆಲಸದ ಮೇಲೆ ಇದು ಪರಿಣಾಮ ಬೀರುತ್ತದೆ. ಒಂದು ವೇಳೆ, ಚುನಾವಣೆಗಳು ಏಕಕಾಲದಲ್ಲಿ ನಡೆದರೆ, ಆಡಳಿತಾತ್ಮಕ ಕಾರ್ಯಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವೆಂದು ಹೇಳಲಾಗುತ್ತಿದೆ.
ಕಲ್ಯಾಣ ಯೋಜನೆಗಳ ಉತ್ತಮ ಅನುಷ್ಠಾನ, ಮಾದರಿ ನೀತಿ ಸಂಹಿತೆ, ಬೃಹತ್ ಚುನಾವಣಾ ಪ್ರಕ್ರಿಯೆ ಮತ್ತು ಸರ್ಕಾರ ರಚನೆಯ ಕಸರತ್ತು ಸೇರಿದಂತೆ ಹಲವು ಪ್ರಕ್ರಿಯೆಗಳು ಸರ್ಕಾರದ ಯೋಜನೆಗಳ ಅನುಷ್ಠಾನವನ್ನು ಸ್ಥಗಿತಗೊಳಿಸುತ್ತದೆ. ಏಕಕಾಲಕ್ಕೆ ಚುನಾವಣೆ ನಡೆಯುವುದರಿಂದ ಈ ಪ್ರಕ್ರಿಯೆಗೆ ಕಡಿವಾಣ ಬೀಳುವ ಸಾಧ್ಯತೆ ಇದೆ. ಒಂದು ಬಾರಿಯ ಚುನಾವಣೆ ಮತದಾನದ ಪ್ರಮಾಣವನ್ನು ಹೆಚ್ಚಿಸುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏಕಕಾಲದಲ್ಲಿ ಚುನಾವಣೆ: ಅನಾನುಕೂಲಗಳೇನು?
ಏಕಕಾಲದಲ್ಲಿ ಚುನಾವಣೆಗಳ ಮೂಲಕ ಪ್ರಾದೇಶಿಕ ಪಕ್ಷಗಳು ಮತ್ತು ಸ್ಥಳೀಯ ಸಮಸ್ಯೆಗಳನ್ನು ಹತ್ತಿಕ್ಕಲಾಗುತ್ತಿದೆ. ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಏಕಕಾಲದಲ್ಲಿ ಚುನಾವಣೆಗಳು ನಡೆದರೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮತದಾರರು ಒಂದೇ ಪಕ್ಷಕ್ಕೆ ಮತ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದು ಸ್ಥಳೀಯ ಪಕ್ಷಗಳಿಗೆ ಪಾಲಿಗೆ ಮಾರಕವಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.












Click it and Unblock the Notifications