One Nation One Election Bill: ವಿಧೇಯಕ ಅನುಮೋದನೆಗೆ ಇರುವ ಸವಾಲುಗಳು
ನವದೆಹಲಿ, ಡಿಸೆಂಬರ್ 17: ಪರ ವಿರೋಧ ಚರ್ಚೆಯ ನಡುವೆಯೇ 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆಯನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡನೆ ಮಾಡಲಾಗಿದೆ. ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಇದನ್ನು ವಿರೋಧಿಸಿವೆ. ಮತಯಂತ್ರದ ಮೂಲಕ ಮಸೂದೆ ಪರ-ವಿರೋಧವಾಗಿ ಮತದಾನ ನಡೆಯಿತು. ಪರವಾಗಿ 269 ಮತ್ತು ವಿರುದ್ಧವಾಗಿ 198 ಮತಗಳು ಚಲಾಣೆಗೊಂಡವು.
'ಒಂದು ರಾಷ್ಟ್ರ, ಒಂದು ಚುನಾವಣೆ' ನಡೆಸಲು ಕಾನೂನು ತಿದ್ದುಪಡಿ ಮಾಡಲು ಮಸೂದೆಯನ್ನು ಲೋಕಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಮಂಡನೆ ಮಾಡಿದರು. ಸರ್ಕಾರವೇ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ವಹಿಸಬೇಕು ಎಂದು ಕಲಾಪದಲ್ಲಿ ಹೇಳಿದೆ.

ಮಸೂದೆ ಅಂಗೀಕಾರಕ್ಕೆ ಸವಾಲುಗಳು: 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆ ಲೋಕಸಭೆ, ರಾಜ್ಯಸಭೆಯಲ್ಲಿ ಅಂಗೀಕಾರಗೊಳ್ಳಲು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಮುಂದೆ ಸವಾಲುಗಳಿವೆ. ಮಸೂದೆ ಅಂಗೀಕಾರಗೊಳ್ಳಲು ಎರಡೂ ಸದನಗಳಲ್ಲಿ 2/3ರಷ್ಟು ಬಹುಮತ ಅಗತ್ಯವಿದೆ.
ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ 2/3ರಷ್ಟು ಬಹುಮತ (ಅಂದರೆ 362 ಮತಗಳು) ಅಗತ್ಯವಿದೆ. ಆದರೆ ಇರುವ ಮತಗಳು 298 ಆಗಿದೆ. ರಾಜ್ಯಸಭೆಯಲ್ಲಿಯೂ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತವಿಲ್ಲ. ರಾಜ್ಯಸಭೆಯಲ್ಲಿ 158 ಮತಗಳು ಬೇಕಾಗಿದ್ದು, ಸದ್ಯ 135 ಮತಗಳಿವೆ. ಅಲ್ಲದೇ ಮಸೂದೆ ಅಂಗೀಕಾರಗೊಳ್ಳಲು ಉಭಯ ಸದನಗಳಲ್ಲಿ ಶೇ 50ರಷ್ಟು ಮತಗಳು ಹಾಗೂ ರಾಜ್ಯಗಳಲ್ಲಿ ಶೇ 50ರಷ್ಟು ಒಪ್ಪಿಗೆ ಬೇಕಾಗಿದೆ.
'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆಯನ್ನು ಕಾಂಗ್ರೆಸ್ ಮತ್ತು 'ಇಂಡಿಯಾ' ಮೈತ್ರಿಕೂಟದ ಹಲವು ಪಕ್ಷಗಳು ವಿರೋಧಿಸಿವೆ. ಆದರೆ ಎನ್‌ಡಿಎ 'ಇಂಡಿಯಾ' ಮೈತ್ರಿಕೂಟದ ಸದಸ್ಯ ಪಕ್ಷಗಳ ಒಪ್ಪಿಗೆಯನ್ನು ಪಡೆಯದೇ ಮಸೂದೆಯನ್ನು ಅನುಮೋದನೆಗೊಳಿಸಲಾಗದು.
ಸಚಿವ ಅರ್ಜುನ್ ಮೇಘವಾಲ್ ಮಸೂದೆ ಮಂಡನೆ ಮಾಡಿದಾಗಲೇ ಕಾಂಗ್ರೆಸ್ ಲೋಕಸಭೆಯಲ್ಲಿ ವಿರೋಧ ವ್ಯಕ್ತಪಡಿಸಿತು. ಮಸೂದೆಯನ್ನು ವಾಪಸ್ ಪಡೆಯಿರಿ ಎಂದು ಕಾಂಗ್ರೆಸ್ ಸದಸ್ಯರು ಗದ್ದಲವನ್ನು ಮಾಡಿದರು. ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ವಹಿಸಲು ತೀರ್ಮಾನಿಸಿತು.
ಮಸೂದೆ ಕುರಿತು ಲೋಕಸಭೆಯಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾದಾಗ ಸ್ಪೀಕರ್ ಓಂ ಬಿರ್ಲಾ ಮಸೂದೆಯನ್ನು ಮತಕ್ಕೆ ಹಾಕಿದರು. ಲೋಕಸಭೆ ಕಲಾಪದಲ್ಲಿ ಮೊದಲ ಬಾರಿಗೆ -ವೋಟಿಂಗ್ ಮೂಲಕ ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಕುರಿತು ಸದಸ್ಯರ ಅಭಿಪ್ರಾಯ ಸಂಗ್ರಹ ಮಾಡಲಾಯಿತು. ಮಸೂದೆ ಪರವಾಗಿ 269 ಮತ್ತು ವಿರುದ್ಧವಾಗಿ 198 ಮತಗಳು ಚಲಾಣೆಗೊಂಡಿತು.
ಎನ್‌ಡಿಎ ಮೈತ್ರಿಕೂಟವೇ 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ವಹಿಸಲು ತೀರ್ಮಾನಿಸಿದೆ. ಈ ಕುರಿತು ಲೋಕಸಭೆಯಲ್ಲಿಯೇ ಕಾನೂನು ಸಚಿವ ಅರ್ಜುನ್ ಮೇಘವಾಲ್ ಹೇಳಿಕೆ ನೀಡಿದರು. ಜೆಪಿಸಿ ಮಸೂದೆ ಕುರಿತು ವಿವರವಾದ ಪರಾಮರ್ಶೆಯನ್ನು ನಡೆಸಲಿ ಎಂದು ಹೇಳಿದರು.
ಕಾಂಗ್ರೆಸ್, ಡಿಎಂಕೆ, ಶಿವಸೇನೆ (ಉದ್ಭವ್ ಠಾಕ್ರೆ) ಬಣ ಸೇರಿದಂತೆ ವಿವಿಧ ಪಕ್ಷಗಳು ಮಸೂದೆಯನ್ನು ವಿರೋಧಿಸುತ್ತಿವೆ. ಟಿಡಿಪಿ, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ಪರವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ಸರ್ಕಾರದ ತೀರ್ಮಾನದಂತೆ ಮಸೂದೆಯನ್ನು ಜೆಪಿಸಿಗೆ ವಹಿಸುವುದು ಖಚಿತವಾಗಿದೆ.












Click it and Unblock the Notifications