Pahalgam Terror Attack: ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಮತ್ತೊಬ್ಬ ಕನ್ನಡಿಗ ಬಲಿ
ಶೀನಗರ, ಏಪ್ರಿಲ್ 23: ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್ ಪ್ರವಾಸಿ ತಾಣದಲ್ಲಿ ನಿನ್ನೆ(ಏಪ್ರಿಲ್ 22) ನಡೆದ ಗುಂಡಿನ ದಾಳಿಯಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಉದ್ಯಮಿ ಮಂಜುನಾಥ್ ಮೃತಪಟ್ಟಿದ್ದು, ಇದೀಗ ಮತ್ತೊಬ್ಬ ಕನ್ನಡಿಗರು ಮತೃರಾಗಿದ್ದಾರೆ.
ಶಿವಮೊಗ್ಗದ ಉದ್ಯಮಿ ಮಂಜುನಾಥ್ ಸಾವಿನ ಬೆನ್ನಲ್ಲೇ ಇದೀಗ ಭರತ್ ಭೂಷಣ್ ಅವರು ಹಾವೇರಿಯ ರಾಣೆಬೆನ್ನೂರಿನ ನಿವಾಸಿಯಾಗಿದ್ದು, ಬೆಂಗಳೂರಿನ ನಿವಾಸಿ ಭರತ್ ಭೂಷಣ್ ಎನ್ನುವರು ಸಹ ಉಗ್ರರ ದಾಳಿಯಲ್ಲಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಭರತ್ ಭೂಷಣ್ ಅವರು ತಮ್ಮ ಪತ್ನಿ ಸುಜಾತ ಮತ್ತು ಮೂರು ವರ್ಷದ ಮಗನ ಜೊತೆಗೆ ಕಾಶ್ಮೀರಕ್ಕೆ ಹೋಗಿದ್ದರು. ಮಗು ಮತ್ತು ಸುಜಾತರಿಗೆ ಏನೂ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ. ಪಹಲ್ಗಾಮ್ನಲ್ಲಿ ಟಿಆರ್ಎಫ್ ಉಗ್ರರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಮೃತಪಟ್ಟಂತಾಗಿದೆ. ಈಗಾಗಲೇ ಕರ್ನಾಟಕದಿಂದ ಅಧಿಕಾರಿಗಳು ಹಾಗೂ ಪೊಲೀಸರು ಸಹ ಕಾಶ್ಮೀರದತ್ತ ಹೊರಟ್ಟಿದ್ದಾರೆ.

ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್ ಪ್ರವಾಸಿ ತಾಣದಲ್ಲಿ ಏಪ್ರಿಲ್ 22ರಂದು ನಡೆದ ಉಗ್ರರ ದಾಳಿಯಲ್ಲಿ ಸುಮಾರು 27 ಮಂದಿ ಸಾವಿಗೀಡಾಗಿದ್ದು, ಅವರಲ್ಲಿ ಇಬ್ಬರು ಕನ್ನಡಿಗರು ಸಹ ಮೃತಪಟ್ಟಿದ್ದಾರೆ. ಭರತ್ ಭೂಷಣ್ ಅವರು ಮೃತಪಟ್ಟಿರುವುದು ನಿನ್ನೆ ರಾತ್ರಿ 9 ರ ಸುಮಾರಿಗೆ ತಿಳಿದುಬಂದಿದೆ. ಭರತ್ ಭೂಷಣ್ ಅವರು ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ಕೋಳಿವಾಡ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರು. ಭರತ್ ಭೂಷಣ್ ಅವರು ಕೋಳಿವಾಡ ಅವರ ಸಹೋದರಿಯ ಗಂಡನ ಸ್ನೇಹಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೋಳಿವಾಡ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು ಎಂದು ಹೇಳಲಾಗಿದೆ.
ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಬಲಿಯಾದ ಕನ್ನಡಿಗರ ಮೃತದೇಹಗಳನ್ನು ಅಲ್ಲಿನ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಮುಗಿಸಿಕೊಂಡು ಸಂಕಷ್ಟಕ್ಕೆ ಸಿಲುಕಿದವರನ್ನ ಊರಿಗೆ ತರಲು ಹಾಗೂ ಅಲ್ಲಿನ ಕನ್ನಡಿಗರನ್ನು ಸುರಕ್ಷಿತವಾಗಿ ಅವರ ಊರು ಸೇರಿಸುವ ಸಲುವಾಗಿ ಕರ್ನಾಟಕದಿಂದ ಐಪಿಎಸ್ ಅಧಿಕಾರಿಗಳ ತಂಡವೊಂದು ಕಾಶ್ಮೀರಕ್ಕೆ ತೆರಳಿದೆ. ಕಾಶ್ಮೀರ ಪೊಲೀಸ್ ಹಾಗೂ ಅಲ್ಲಿನ ಸೇನಾಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯವಾದ ಮಾಹಿತಿ ವಿನಿಮಯ ಮಾಡಿಕೊಂಡು ಕನ್ನಡಿಗರಿಗೆ ಸಹಾಯ ಮಾಡುವ ಸಲುವಾಗಿ ಕರ್ನಾಟಕ ಸರ್ಕಾರವೇ ಅವರನ್ನು ಕಾಶ್ಮೀರಕ್ಕೆ ಕಳುಹಿಸಿದೆ. ಈ ತಂಡಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಆರ್.ಚೇತನ್ ಅವರ ನೇತೃತ್ವವಿದೆ.
ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಯ ಕಾರ್ಯ: ಸಿದ್ದರಾಮಯ್ಯ
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಂದು ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿರುವುದು ಆತಂಕ ಹೆಚ್ಚಿಸಿದೆ. ದಾಳಿಗೆ ಬಲಿಯಾದ ಅಮಾಯಕ ಜೀವಗಳನ್ನು ನೆನಪಿಸಿಕೊಂಡರೆ ಎದೆ ನಲುಗುತ್ತದೆ. ಮಡಿದ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಭಯೋತ್ಪಾದಕರ ಈ ಹೇಯ ಕೃತ್ಯದಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಹಲವು ಕನ್ನಡಿಗರು ಕೂಡ ಸಾವನ್ನಪ್ಪಿರುವುದು ಅತ್ಯಂತ ದುಃಖದ ವಿಚಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಉಗ್ರಕೃತ್ಯದಿಂದಾಗಿ ದೂರದ ಕಾಶ್ಮೀರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯದ ಅಧಿಕಾರಿಗಳ ತಂಡವನ್ನು ಸಂಜೆಯೇ ರವಾನಿಸಲಾಗಿದೆ. ಈ ಸಂದರ್ಭದಲ್ಲಿ ನಮ್ಮ ಸರ್ಕಾರದಿಂದ ಹೆಚ್ಚಿನ ನೆರವಿನ ಅಗತ್ಯ ಇದೆ ಎನ್ನುವುದನ್ನು ಅರಿತು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಿಗೆ ಕಾಶ್ಮೀರಕ್ಕೆ ತೆರಳಿ ಇಡೀ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸುವಂತೆ ಸೂಚನೆ ನೀಡಿದ್ದೇನೆ. ಸಂತ್ರಸ್ತ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು.












Click it and Unblock the Notifications