ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಚೀನಾ ಹತ್ತಿರವಾಗಿದೆ: ಬಿಜೆಪಿ ತಿರುಗೇಟು
ನವೆದೆಹಲಿ, ಡಿಸೆಂಬರ್ 16: ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿದ್ದೆಯಲ್ಲಿರುವಾಗ ಚೀನಾ ಯುದ್ದಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ರಾಹುಲ್ ಗಾಂಧಿ ಇಂದು ಹೇಳಿಕೆ ನೀಡಿದ್ದಾರೆ. ಈ ಕುರಿತು ಖಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, 'ರಾಹುಲ್ ಗಾಂಧಿ ಅವರಿಗೆ ಚೀನಾ ಹತ್ತಿರವಾಗಿದೆ' ಎಂದು ತಿರುಗೇಟು ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ರಾಜವರ್ಧನ್ ರಾಥೋಡ್, ರಾಹುಲ್ ಗಾಂಧಿ ಚೀನಾಕ್ಕೆ ತುಂಬಾ ಹತ್ತಿರವಾಗಿದ್ದಾರೆ. ಚೀನಾದವರು ಮುಂದೆ ಏನು ಮಾಡುತ್ತಾರೆ ಎಂಬುದು ಅವರಿಗೆ ತಿಳಿದಿದೆ' ಎಂದು ಆರೋಪಿಸಿದ್ದಾರೆ.
'ರಾಜೀವ್ ಗಾಂಧಿ ಫೌಂಡೇಶನ್ ಚೀನಾದ ಕಮ್ಯುನಿಸ್ಟ್ ಪಕ್ಷದಿಂದ ₹135 ಕೋಟಿ ದೇಣಿಗೆ ಪಡೆದಿದೆ' ಎಂದೂ ಬಿಜೆಪಿ ನಾಯಕ ತಿಳಿಸಿದ್ದಾರೆ.

ರಾಜೀವ್ ಗಾಂಧಿ ಫೌಂಡೇಶನ್ ಚೀನಾದಿಂದ ಹಣ ತೆಗೆದುಕೊಂಡಿರುವುದರಿಂದ ರಾಹುಲ್ ಗಾಂಧಿಯವರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
'ಇದೊಂದು ರೀತಿಯ ಭ್ರಷ್ಟಾಚಾರ. ಪಂಡಿತ್ ನೆಹರೂ ಮತ್ತು ಕಾಂಗ್ರೆಸ್ ಆಡಳಿತದಲ್ಲಿ ನಮ್ಮ ಭೂಮಿ ಚೀನಾಕ್ಕೆ ಹೋಯಿತು ಎಂದು ಎಲ್ಲರಿಗೂ ತಿಳಿದಿದೆ. ರಾಹುಲ್ ಗಾಂಧಿ ಅವರನ್ನು ಗಂಭೀರವಾಗಿ ಪರಿಗಣಿಸಬಾರದು' ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.
ವಿಜಯ್ ದಿವಸ್ ಕುರಿತು ರಾಹುಲ್ ಗಾಂಧಿಯವರ ಹೇಳಿಕೆಯನ್ನು ಟೀಕಿಸಿದ ಬಿಜೆಪಿಯ ಅಮಿತ್ ಮಾಳವಿಯಾ, 'ರಾಹುಲ್ ಗಾಂಧಿ ಅವರು ಭಾರತೀಯ ಸೈನಿಕರ ಶೌರ್ಯವನ್ನು ಅನುಮಾನಿಸುತ್ತಲೇ ಇದ್ದಾರೆ. ಆದರೆ, ನಮ್ಮ ಸೈನಿಕರು ಚೀನಾದ ಸೈನಿಕರನ್ನು ಥಳಿಸುವ ವೀಡಿಯೊಗಳನ್ನು ಪ್ರತಿ ಭಾರತೀಯನೂ ನೋಡಿದ್ದಾನೆ' ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ಕುಟುಂಬವು ಚೀನಾದ ಆತಿಥ್ಯವನ್ನು ಆನಂದಿಸಿದೆ ಮತ್ತು ಆರ್‌ಜಿ ಫೌಂಡೇಶನ್‌ನಲ್ಲಿ ಹಣವನ್ನು ಸ್ವೀಕರಿಸಿದೆ ಎಂದು ಮಾಳವಿಯಾ ಟ್ವೀಟ್ ಮಾಡಿದ್ದಾರೆ.
'ಬಿಲಾವಲ್ ಭುಟ್ಟೋ ಜರ್ದಾರಿ ಮತ್ತು ರಾಹುಲ್ ಗಾಂಧಿ ನಡುವೆ ಗಮನಾರ್ಹ ಸಾಮ್ಯತೆ ಇದೆ. ಇಬ್ಬರೂ ರಾಜವಂಶಸ್ಥರು. ಕ್ಷುಲ್ಲಕ ವ್ಯಕ್ತಿಗಳು. ಒಂದೇ ಭಾಷೆಯಲ್ಲಿ ಮಾತನಾಡುತ್ತಾರೆ. ಪ್ರಧಾನಿ ಮೋದಿಯನ್ನು ಟೀಕಿಸಲು ಒಂದೇ ರೀತಿಯ ಪದಗಳು ಮತ್ತು ಭಾಷಾ ವೈಶಿಷ್ಟ್ಯಗಳನ್ನು ಬಳಸುತ್ತಾರೆ' ಎಂದು ಮಾಳವಿಯಾ ಬರೆದುಕೊಂಡಿದ್ದಾರೆ.
ನಮ್ಮ ಸೈನಿಕರು ಚೀನಾ ಸೈನಿಕರಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಆದರೂ, ರಾಹುಲ್ ಗಾಂಧಿ ಅವರು ಚೀನಾ ಸೈನಕರೇ ನಮ್ಮ ಸೈನಿಕರನ್ನು ಹೊಡೆದಿದ್ದಾರೆ ಎಂಬುದಾಗಿ ರಾಹುಲ್ ಹೇಳಿದ್ದಾರೆ ಎಂದು ಬಿಜೆಪಿ ವಕ್ತಾರ ಪೂನಾವಾಲಾ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆಯು 100ನೇ ದಿನ ಪೂರೈಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 'ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಕೇವಲ ಆಕ್ರಮಣಕ್ಕೆ ಅಲ್ಲ. ಅವರ ಅಸ್ತ್ರಗಳ ಮಾದರಿಯನ್ನು ನೋಡಿ. ಅವರು ಯುದ್ಧಕ್ಕೆ ತಯಾರಿ ನಡೆಸುತ್ತಿದ್ದಾರೆ. ನಮ್ಮ ಸರ್ಕಾರ ಈ ವಾಸ್ತವವನ್ನು ಒಪ್ಪಿಕೊಳ್ಳುತ್ತಿಲ್ಲ. ಭಾರತ ಸರ್ಕಾರವು ಕೇವಲ ನಡೆದಿರುವ ಘಟನೆಗಳ ಬಗ್ಗೆ ತಲೆಕೆಸಿಕೊಂಡಿದೆಯೇ ಹೊರತು ಮುಂದಿನ ತಂತ್ರಗಳ ಬಗ್ಗೆ ಅಲ್ಲ' ಎಂದು ಅವರು ಟೀಕಿಸಿದರು.
'ಚೀನಾ ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದೆ. ಅವರು ನಮ್ಮ ಸೈನಿಕರನ್ನು ಹೊಡೆದು ಹಾಕುತ್ತಿದ್ದಾರೆ. ಚೀನಾದ ಬೆದರಿಕೆ ಸ್ಪಷ್ಟವಾಗಿದೆ. ಆದರೆ, ನಮ್ಮ ಸರ್ಕಾರ ಈ ವಾಸ್ತವವನ್ನು ಮರೆಮಾಡುತ್ತಿದೆ. ಎಲ್ಲವನ್ನೂ ನಿರ್ಲಕ್ಷಿಸುತ್ತಿದೆ. ಲಡಾಖ್ ಮತ್ತು ಅರುಣಾಚಲದಲ್ಲಿ ಚೀನಾ ಆಕ್ರಮಣಕ್ಕೆ ತಯಾರಿ ನಡೆಸುತ್ತಿದೆ. ನಮ್ಮ ಸರ್ಕಾರ ಮಾತ್ರ ನಿದ್ರಿಸುತ್ತಿದೆ' ಎಂದು ರಾಹುಲ್ ಆರೋಪಸಿದರು.
ಇದೇ ವೇಳೆ, ರಾಹುಲ್ ಗಾಂಧಿ ಅವರು, ವಿದೇಶಾಂಗ ಸಚಿವ ಎಸ್ ಜೈಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು.
ವಿದೇಶಾಂಗ ಸಚಿವರಿಗೆ ವಾಸ್ತವದ ಕುರಿತು ಅರಿವಿಲ್ಲ. ಚೀನಾದ ಬಗ್ಗೆ ತಿಳಿದುಕೊಂಡಿಲ್ಲ. ನಾವು ಅವರ ಜ್ಞಾನವನ್ನು ಹೆಚ್ಚಿಸಬೇಕಿದೆ ಎಂದು ತಿಳಿಸಿದರು.
ಕಳೆದ ವಾರ ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಯಥಾಸ್ಥಿತಿಯನ್ನು ಬದಲಿಸಲು ಪ್ರಯತ್ನಿಸಿದೆ. ಚೀನಾ ಸೈನಿಕರು ಭಾರತದ ಯೋಧರ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಮೋದಿ ಸರ್ಕಾರ ಮರೆಮಾಚಲು ಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಈ ವಿಚಾರವಾಗಿ ಸಂಸತ್ತಿನಲ್ಲಿ ಕೋಲಾಹಲವೇ ನಡೆದಿದೆ.
2020 ರಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ 20 ಭಾರತೀಯ ಸೈನಿಕರನ್ನು ಚೀನಾ ದೇಶವು ಹತ್ಯೆ ಮಾಡಿತ್ತು.
ತಮಿಳು ನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿರುವ ಭಾರತ್ ಜೋಡೊ ಯಾತ್ರೆ ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಳ್ಳಲಿದೆ. ಈಗಾಗಲೇ ಭಾರತದ ಏಳು ರಾಜ್ಯಗಳಲ್ಲಿ ಸಾಗಿರುವ ಯಾತ್ರೆಯು ಡಿಸೆಂಬರ್ 4ರಂದು ರಾಜಸ್ಥಾನ ತಲುಪಿದೆ. ಮಧ್ಯಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಸಾಗಿರುವ ಯಾತ್ರೆಗೆ ಭಾರೀ ಜನಬೆಂಬಲ ದೊರೆತಿದೆ. ಭಾರತ್ ಜೋಡೊ ಯಾತ್ರೆಯು 3500 ಕಿಮೀ ಕ್ರಮಿಸಲಿದೆ.












Click it and Unblock the Notifications