ಭಾರತದ ಅನಸೂಯಾರ ಕೊಡುಗೆ ಸ್ಮರಿಸಿದ ಗೂಗಲ್ ಡೂಡಲ್
ನವದೆಹಲಿ, ನವೆಂಬರ್ 11: ಇಂದು ಗೂಗಲ್ ನ ಹೋಮ್ ಪೇಜ್ ತೆರೆದರೆ ಭಾರತೀಯರಿಗೊಮ್ಮೆ ಹೆಮ್ಮೆಯಾಗಬಹುದು. ಏಕೆಂದರೆ ಭಾರತೀಯ ಮಹಿಳಾ ಕಾರ್ಮಿಕ ಚಳವಳಿಯ ರೂವಾರಿ ಅನಸೂಯಾ ಸಾರಾಭಾಯಿ(11.11.1885 - 1972) ಅವರನ್ನು ಗೂಗಲ್ ನೆನಪಿಸಿಕೊಂಡು, ಗೂಗಲ್ ಡೂಡಲ್ ಮೂಲಕ ಅವರಿಗೆ ಗೌರವ ಸಲ್ಲಿಸಿದೆ.
ನವೆಂಬರ್ 11, 1885 ರಂದು ಅಹಮ್ಮದಾಬಾದ್ ನಲ್ಲಿ ಜನಿಸಿದ ಅನಸೂಯಾ ಸಾರಾಭಾಯಿ ಮಹಿಳಾ ಕಾರ್ಮಿಕ ಚಳವಳಿಗೆ ನೀಡಿದ ಕೊಡುಗೆ ಅನನ್ಯ, ಅಗಣಿತ.

ತನ್ನ 13ನೇ ವಯಸ್ಸಿನಲ್ಲಿಯೇ ಬಾಲ್ಯವಿವಾಹಕ್ಕೆ ಕೊರಳೊಡ್ಡಿದ ಅನಸೂಯಾ, ನಂತರ ವೈದ್ಯಕೀಯ ಪದವಿ ಪಡೆಯಲು ತಮ್ಮ ಸಹೋದರರ ಸಹಾಯದಿಂದ ಇಂಗ್ಲೆಂಡಿಗೆ ತೆರಳಿದರು. ಆದರೆ ಪ್ರಯೋಗಾಲಯಗಳಲ್ಲಿ ಪ್ರಾಣಿಗಳ ದೇಹವನ್ನು ಛೇದನ ಮಾಡುವುದನ್ನು ಕಂಡು, ಇದು ತನ್ನ ಜೈನ ಸಿದ್ಧಾಂತಗಳಿಗೆ ವಿರುದ್ಧವಾದುದು ಎಂದು ಅರಿತು ಆ ಆಸೆಯನ್ನು ಅಲ್ಲಿಗೇ ಬಿಟ್ಟು ಮಹಿಳಾ ಚಳವಳಿಗಳಲ್ಲಿ ಗುರುತಿಸಿಕೊಳ್ಳುವುದಕ್ಕೆ ಶುರುಮಾಡಿದರು.
1920 ರಲ್ಲಿ ಅಹ್ಮದಾಬಾದ್ ಜವಳಿ ಕಾರ್ಮಿಕರ ಸಂಘಟನೆ (ಮಜ್ದೂರ್ ಮಹಾಜನ್ ಸಂಘ) ಕಟ್ಟುವ ಮೂಲಕ ಭಾರತದ ಮೊಟ್ಟಮೊದಲ ಜವಳಿ ಕಾರ್ಮಿಕರ ಸಂಘವನ್ನು ಕಟ್ಟಿದ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದರು. ಇಂದು(ನ.11) ಅವರ 132ನೇ ಹುಟ್ಟು ಹಬ್ಬದ ನಿಮಿತ್ತ ಅವರ ಸೇವೆಯನ್ನು ನೆನಪಿಸಿಕೊಂಡು, ಅವರಿಗೆ ಗೂಗಲ್ ಡೂಡಲ್ ಮೂಲಕ ನಮನ ಸಲ್ಲಿಸಲಾಗಿದೆ.












Click it and Unblock the Notifications