ಒಡಿಶಾ ರೈಲು ದುರಂತ: ಸಾವಿನ ಸಂಖ್ಯೆ 233ಕ್ಕೆ ಏರಿಕೆ, 900 ಮಂದಿಗೆ ಗಾಯ!
ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಸಂಜೆ ರೈಲು ಹಳಿತಪ್ಪಿದ ಪರಿಣಾಮ ಭೀಕರ ಅಪಘಾತವೇ ಸಂಭವಿಸಿದೆ. ಹಳಿತಪ್ಪಿದ ರೈಲು ಪ್ಯಾಸೆಂಜರ್ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಬಸಕ್ಕೆ ನಾಲ್ಕು ಬೋಗಿಗಳು ಪಲ್ಟಿ ಹೊಡೆದಿವೆ. ಪರಿಣಾಮ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು 900 ಜನರು ಗಾಯಗೊಂಡಿದ್ದಾರೆ. ಮೂರನೇ ಸರಕು ಸಾಗಣೆ ರೈಲು ಕೂಡ ಈ ಅಪಘಾತದಲ್ಲಿ ಸಿಲುಕಿದೆ.
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿನ ಅತ್ಯಂತ ಮಾರಣಾಂತಿಕ ಅಪಘಾತಗಳಲ್ಲಿ ಈ ಅಪಘಾತ ಒಂದಾಗಿದೆ. ಈ ಅಪಘಾತದಲ್ಲಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳನ್ನು ಸೇರಿವೆ. ಈ ಅಪಘಾತದಿಂದಾಗಿ ಇದುವರೆಗೆ ಇದೇ ಮಾರ್ಗದಲ್ಲಿ ಸಂಚರಿಸುವ 18 ರೈಲುಗಳನ್ನು ರದ್ದುಗೊಳಿಸಲಾಗಿದೆ.

ಒಡಿಶಾ ಮುಖ್ಯ ಕಾರ್ಯದರ್ಶಿ ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ, ಸಾವಿನ ಸಂಖ್ಯೆ 233ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳು ಇವೆ. ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಕೋಲ್ಕತ್ತಾದಿಂದ ದಕ್ಷಿಣಕ್ಕೆ 250 ಕಿಮೀ ದೂರದಲ್ಲಿ ಮತ್ತು ಭುವನೇಶ್ವರದಿಂದ ಉತ್ತರಕ್ಕೆ 170 ಕಿಮೀ ದೂರದಲ್ಲಿ ಈ ಅಪಘಾತ ಸಂಭವಿಸಿದೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಮೀಪದ ಜಿಲ್ಲೆಗಳ ಎಲ್ಲಾ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೂರು ಎನ್‌ಡಿಆರ್‌ಎಫ್ ಘಟಕಗಳು, 4 ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಗಳು, 15 ಕ್ಕೂ ಹೆಚ್ಚು ಅಗ್ನಿಶಾಮಕ ರಕ್ಷಣಾ ತಂಡಗಳು, 30 ವೈದ್ಯರು, 200 ಪೊಲೀಸ್ ಸಿಬ್ಬಂದಿ ಮತ್ತು 60 ಆಂಬುಲೆನ್ಸ್‌ಗಳನ್ನು ಸ್ಥಳಕ್ಕೆ ಸಜ್ಜುಗೊಳಿಸಲಾಗಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.
Death toll rises to 233 in the Balasore Train Accident. @CMO_Odisha @IPR_Odisha @RailMinIndia @SecyChief @SRC_Odisha
— Pradeep Jena IAS (@PradeepJenaIAS) June 3, 2023
ಭೀಕರ ರೈಲು ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ವಾಯುಪಡೆಯನ್ನು ಕರೆಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
"ಒಡಿಶಾದಲ್ಲಿ ಘಟನಾ ಸ್ಥಳಕ್ಕೆ ಧಾವಿಸುತ್ತಿದ್ದೇನೆ. ಗಾಯಗೊಂಡವರ ಶೀಘ್ರ ಚೇತರಿಸಿಕೊಳ್ಳಲು ನನ್ನ ಪ್ರಾರ್ಥನೆ ಮತ್ತು ದುಃಖತಪ್ತ ಕುಟುಂಬಗಳಿಗೆ ಸಾಂತ್ವನ. ಭುವನೇಶ್ವರ ಮತ್ತು ಕೋಲ್ಕತ್ತಾದಿಂದ ರಕ್ಷಣಾ ತಂಡಗಳನ್ನು ಸಜ್ಜುಗೊಳಿಸಲಾಗಿದೆ. ಎನ್‌ಡಿಆರ್‌ಎಫ್, ರಾಜ್ಯ ಸರ್ಕಾರದ ತಂಡಗಳು ಮತ್ತು ವಾಯುಪಡೆ ಕೂಡ ಸಜ್ಜುಗೊಂಡಿದೆ. ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರಿಗೆ 10 ಲಕ್ಷ ರೂ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ ₹ 50,000 ಪರಿಹಾರ ನೀಡುವುದಾಗಿ ವೈಷ್ಣವ್ ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಅಪಘಾತದ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಮೃತರ ಕುಟುಂಬಕ್ಕೆ ₹ 2 ಲಕ್ಷ ಮತ್ತು ಗಾಯಾಳುಗಳಿಗೆ ₹ 50,000 ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಪರಿಹಾರವನ್ನು ಘೋಷಿಸಿದರು. ಈ ದುಃಖದ ಸಮಯದಲ್ಲಿ, ನನ್ನ ಆಲೋಚನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಬರೆದಿದ್ದಾರೆ. ಜೊತೆಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಖ್ಯ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications