ನಗ್ನತೆಯನ್ನು ಲೈಂಗಿಕತೆ ಎನ್ನಲಾಗದು: ಮಹಿಳೆ ವಿರುದ್ಧ ಮೊಕದ್ದಮೆ ವಜಾಗೊಳಿಸಿದ ಕೇರಳ ಹೈಕೋರ್ಟ್
ಕೇರಳ, ಜೂನ್ 06: ಮಹಿಳೆ ತನ್ನ ದೇಹದ ಕುರಿತು ಸ್ವತಂತ್ರ ನಿರ್ಧಾರ ಕೈಗೊಳ್ಳಲು ಶಕ್ತಳು. ಅದು ಆಕೆಯ ಸಮಾನತೆ ಹಾಗೂ ಖಾಸಗಿತನದ ಮೂಲಭೂತ ಹಕ್ಕು. ನಗ್ನತೆಯನ್ನು ಎಲ್ಲಾ ಸಂದರ್ಭಗಳಲ್ಲೂ ಲೈಂಗಿಕತೆಯೊಂದಿಗೆ ಹೋಲಿಸಲಾಗದು ಎಂದು ಸಾಮಾಜಿಕ ಹೋರಾಟಗಾರ್ತಿ ವಿರುದ್ಧ ದಾಖಲಾಗಿದ್ದ ಮೊಕದ್ದಮೆಯನ್ನು ಕೇರಳದ ಉಚ್ಛ ನ್ಯಾಯಾಲಯ ವಜಾಗೊಳಿಸಿದೆ.
ಕೇರಳದ ಸಾಮಾಜಿಕ ಹೋರಾಟಗಾರ್ತಿಯೋರ್ವರು ಅವರು ತನ್ನ ದೇಹದ ಮೇಲ್ಭಾಗದಲ್ಲಿ ಚಿತ್ರ ಬಿಡಿಸುವುದಕ್ಕೆ ತನ್ನದೇ ಮಕ್ಕಳಿಗೆ ಅನುಮತಿ ನೀಡಿದ್ದರ ವಿರುದ್ಧ ಪೋಕ್ಸೋ, ಬಾಲ ನ್ಯಾಯ, ಮಾಹಿತಿ ತಂತ್ರಜ್ಞಾನದ ಅಡಿ ಕೇರಳ ಒಬಿಸಿ ಮೋರ್ಚಾ ಮೊಕದ್ದಮೆ ದಾಖಲಿಸಿತ್ತು. ಅರೆನಗ್ನವಾಗಿ ಚಿತ್ರಗಳನ್ನು ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರ ಕುರಿತು ಆಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಕೇರಳದ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಎ.ವಿ.ಅರುಣ್ ಪ್ರಕಾಶ್ ದೂರು ನೀಡಿದ್ದರಿಂದ ಪತ್ತನಮಿತ್ತ ಪೊಲೀಸರು ಮೊಕದ್ದಮೆ ದಾಖಲಿಸಿದ್ದರು. ಕೇರಳ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೂ ಈ ಕುರಿತು ವಿವರಣೆ ಕೇಳಿತ್ತು. ಹೀಗಾಗಿ ನನ್ನ ದೇಹದ ಮೇಲ್ಭಾಗದಲ್ಲಿ ಚಿತ್ರ ಬಿಡಿಸಲು ನನ್ನದೇ ಅಪ್ರಾಪ್ತ ಮಕ್ಕಳಿಗೆ ಅನುಮತಿ ನೀಡಿದ್ದೆ. ಇದನ್ನು ಲೈಂಗಿಕತೆ ಎಂದು ಕರೆಯಲಾಗದು ಎಂದು ತನ್ನ ವಿರುದ್ಧ ದಾಖಲಾಗಿರುವ ಮೊಕದ್ದಮೆ ವಜಾಗೊಳಿಸಬೇಕು ಎಂದು ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಯಾವುದೇ ವ್ಯಕ್ತಿ ತನ್ನ ದೇಹ ಹಾಗೂ ಬದುಕಿನ ಕುರಿತು ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರು. ತಾಯಿಯ ಅನುಮತಿಯಿಂದ ತನ್ನ ಮಕ್ಕಳು ಚಿತ್ರ ಬಿಡಿಸಲೆಂದು ದೇಹದ ಮೇಲ್ಭಾಗ ನೀಡಿದ್ದು, ಲೈಂಗಿಕತೆಯ ಭಾಗ ಎಂದು ಕರೆಯಲಾಗದು. ಲೈಂಗಿಕ ದುರುದ್ದೇಶ ಅಥವಾ ತೃಪ್ತಿಗೋಸ್ಕರಕ್ಕೆ ಇದನ್ನು ಮಾಡಿದ್ದರೆ ಒಪ್ಪಲಾಗುತ್ತಿರಲಿಲ್ಲ. ಆದರೆ ಮಕ್ಕಳೊಂದಿಗಿನ ಮುಗ್ಧ ಕಲಾತ್ಮಕ ಭಾವನೆಯನ್ನು ತಪ್ಪು ಎಂದು ಉಲ್ಲೇಖಿಸಲಾಗದು.
ಅಲ್ಲದೇ ಒಬ್ಬ ಮಹಿಳೆ ತನ್ನ ದೇಹದ ಕುರಿತು ಸ್ವತಂತ್ರ ನಿರ್ಧಾರ ಕೈಗೊಳ್ಳಲು ಶಕ್ತಳು. ಅದು ಆಕೆಯ ಸಮಾನತೆ ಹಾಗೂ ಖಾಸಗಿತನದ ಮೂಲಭೂತ ಹಕ್ಕೂ ಹೌದು. ಇದು ಸಂವಿಧಾನದ 21ನೇ ಪರಿಚ್ಛೇದದಲ್ಲಿ ನೀಡಲಾಗಿರುವ ವೈಯಕ್ತಿಕ ಸ್ವತಂತ್ರದ ವ್ಯಾಪ್ತಿಗೆ ಬರುತ್ತದೆ ಎಂದು ಕೋರ್ಟ್ ತಿಳಿಸಿದೆ.
ಪುರುಷರು ತಮ್ಮ ದೇಹದ ಮೇಲ್ಭಾಗವನ್ನು ಪ್ರದರ್ಶಿಸುವುದು ನಗ್ನತೆಯಾಗಿ ಕಾಣುವುದಿಲ್ಲ. ಅದೇ ಮಹಿಳೆಯ ವಿಚಾರದಲ್ಲಿ ಇದು ವಿರುದ್ಧವಾಗಿರುತ್ತದೆ. ಪ್ರತಿಯೊಬ್ಬರೂ ತನ್ನ ದೇಹದ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಂವಿಧಾನದಲ್ಲಿಯೇ ಅವಕಾಶ ಇರುವುದರಿಂದ ದ್ವಿಮುಖ ನೀತಿ ಸರಿಯಲ್ಲ ಎಂದು ನ್ಯಾಲಯಾಲಯ ಅಭಿಪ್ರಾಯ ಪಟ್ಟಿದೆ. ಹೀಗಾಗಿ ಸಾಮಾಜಿಕ ಹೋರಾಟಗಾರ್ತಿ ವಿರುದ್ಧ ದಾಖಲಾಗಿದ್ದ ಮೊಕದ್ದಮೆಯನ್ನು ಕೇರಳದ ಉಚ್ಛ ನ್ಯಾಯಾಲಯ ವಜಾಗೊಳಿಸಿದೆ.












Click it and Unblock the Notifications