ಆಂಧ್ರ & ತೆಲಂಗಾಣ ಚುನಾವಣೆ: ಏನೋ ರಣತಂತ್ರ ನಡೆಯುತ್ತಿದೆ?
ಹಳ್ಳಿಯಿಂದ ದಿಲ್ಲಿವರೆಗೆ ಈಗ ತೆಲುಗು ಸಿನಿಮಾ ಇಂಡಸ್ಟ್ರಿಯದ್ದೇ ಸದ್ದು. ಕೆಲ ದಿನಗಳಿಂದ ತೆಲುಗು ಸಿನಿಮಾ ರಂಗಕ್ಕೆ ರಾಷ್ಟ್ರಮಟ್ಟದಲ್ಲಿ ಭಾರಿ ಒತ್ತು ನೀಡಲಾಗಿದೆ. ಮೊನ್ನೆ ಮೊನ್ನೆ ಪ್ರಕಟವಾದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ತೆಲುಗು ಸಿನಿಮಾಗಳು ಸದ್ದು ಮಾಡಿವೆ. ಅದ್ರಲ್ಲೂ ಅಲ್ಲು ಅರ್ಜುನ್ ನಟಿಸಿದ್ದ 'ಪುಷ್ಪ' ಸಿನಿಮಾ ಅಬ್ಬರಿಸಿದೆ. ಇದೇ ಹೊತ್ತಲ್ಲಿ ಟಾಲಿವುಡ್‌ನ ಲೆಜೆಂಡ್ ನಟನಿಗೆ ಕೇಂದ್ರ ಸರ್ಕಾರ ದೊಡ್ಡ ಗೌರವ ನೀಡಿದೆ.
ಲೋಕಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಅದಕ್ಕೂ ಮೊದಲು ತೆಲಂಗಾಣ ರಾಜ್ಯ ವಿಧಾನಸಭೆ ಬರಲಿದೆ. ನಂತರ 2024ರ ಲೋಕಸಭೆ ಚುನಾವಣೆ ಹಾಗೂ ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆ ಒಟ್ಟಿಗೆ ನಡೆಯಲಿದೆ. ಆದರೆ ಇದೇ ವೇಳೆ ಕೇಂದ್ರ ಸರ್ಕಾರ ಭಾರಿ ಒತ್ತು ನೀಡಿ, ಟಾಲಿವುಡ್ ಸ್ಟಾರ್‌ಗಳಿಗೆ ಗೌರವ ನೀಡುತ್ತಿದೆ ಎಂಬ ಬಗ್ಗೆ ಚರ್ಚೆ ನಡೆದಿದೆ. ಹಾಗಾದರೆ ಇದರ ಹಿಂದಿರುವ ಉದ್ದೇಶ ಏನಾಗಿರಬಹುದು? ಚುನಾವಣೆ ಹೊತ್ತಲ್ಲಿ ತೆಲುಗು ಸಿನಿಮಾ ಇಂಡಸ್ಟ್ರಿಗೆ ಕೇಂದ್ರ ಸರ್ಕಾರ ಬೇಕು ಅಂತಾ ಇಷ್ಟು ಒತ್ತು ನೀಡುತ್ತಿದೆಯಾ? ಆ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಏನಿದು ಚುನಾವಣೆಯ ಲೆಕ್ಕಾಚಾರ?
ದಕ್ಷಿಣ ಭಾರತದ ಸಿನಿಮಾಗಳು ಅಂದ್ರೆ ಅಬ್ಬರ ನೆಕ್ಸ್ಟ್ ಲೆವೆಲ್. ಟಾಲಿವುಡ್ ಸಿನಿಮಾಗಳು ಇಂದು ನಿನ್ನೆಯಿಂದ ಅಲ್ಲ, ಹಲವು ದಶಕದಿಂದ ಇದೇ ರೀತಿ ಹವಾ ಎಬ್ಬಿಸಿವೆ. ಅದರಲ್ಲಿ ಮಾಸ್ ಸಿನಿಮಾಗಳದ್ದೇ ಸೌಂಡ್. ಹೀಗೆ ಎಲ್ಲಾ ರೀತಿಯಿಂದಲೂ ಮೂಲೆ ಮೂಲೆಯಲ್ಲೂ ಸದ್ದು ಮಾಡಿ, ಜಗತ್ತಿನಾದ್ಯಂತ ತೆಲುಗು ಸಿನಿಮಾಗಳು ರಿಲೀಸ್ ಆಗುತ್ತವೆ. ಹಾಗೇ ತೆಲುಗು ಭಾಷಿಕರಿಗೆ ಸಿನಿಮಾಗಳು ಅಂದ್ರೆ ಪ್ರಾಣ. ಹೀಗಿರುವಾಗಲೇ ಕೇಂದ್ರ ಸರ್ಕಾರ ಟಾಲಿವುಡ್‌ಗೆ ಭಾರಿ ಒತ್ತು ಕೊಡುತ್ತಿದೆ ಎಂಬ ಮಾತು ಕೇಳಿಬಂದಿದೆ. ಅಲ್ಲದೆ ಚುನಾವಣೆ ದೃಷ್ಟಿಯಿಂದ ಈ ರೀತಿ ಮಾಡಲಾಗುತ್ತಿದೆಯಾ? ಎಂಬ ಆರೋಪ ಕೂಡ ಕೇಳಿಬಂದಿದೆ.
ಟಾಲಿವುಡ್ ಲೆಜೆಂಡ್‌ಗೆ ಕೇಂದ್ರದ ಗೌರವ
ಈ ವರ್ಷ ದಿವಂಗತ ನಟ, ಟಾಲಿವುಡ್ ಲೆಜೆಂಡ್, ತೆಲುಗು ದೇಶಂ ಸಂಸ್ಥಾಪಕ ಹಾಗೂ ಮಾಜಿ ಸಿಎಂ ಎನ್.ಟಿ. ರಾಮರಾವ್ ಅವರ ಜನ್ಮಶತಮಾನೋತ್ಸವ ಆಚರಿಸಲಾಗುತ್ತೆ. ಈ ಕಾರಣಕ್ಕೆ ನವದೆಹಲಿಯಲ್ಲಿ ಅವರ ಸ್ಮರಣಾರ್ಥ 100 ರೂಪಾಯಿ ಮುಖಬೆಲೆ ನಾಣ್ಯ ರಿಲೀಸ್ ಆಗಿದೆ. ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಣ್ಯ ಬಿಡುಗಡೆ ಮಾಡಿದ್ದಾರೆ. ಹಾಗೇ ಸಮಾರಂಭದಲ್ಲಿ ನಂದಮೂರಿ ಬಾಲಕೃಷ್ಣ, ರಾಮಕೃಷ್ಣ, ಭುವನೇಶ್ವರಿ, ಪುರಂದರೇಶ್ವರಿ ಸೇರಿ ಎನ್‌ಟಿ ರಾಮರಾವ್ ಅವರ ಪುತ್ರರು ಮತ್ತು ಪುತ್ರಿಯರು ಉಪಸ್ಥಿತರಿದ್ದರು. ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಕೂಡ ಹಾಜರಿದ್ದರು.

ಚುನಾವಣೆ ಕಾರಣಕ್ಕೆ ಕೇಂದ್ರದ ಒತ್ತು?
ಇನ್ನು ಮೊನ್ನೆ ಮೊನ್ನೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ತೆಲುಗು ಸಿನಿಮಾ ರಂಗ ಸದ್ದು ಮಾಡಿದ್ದಾಗಲೂ ವಿವಾದ ಎದ್ದಿತ್ತು. ಅಲ್ಲದೆ ಚುನಾವಣೆ ಹಿನ್ನೆಲೆಯಲ್ಲಿ ಹೀಗೆ ತೆಲುಗು ಸಿನಿಮಾ ರಂಗಕ್ಕೆ ಒತ್ತು ನೀಡಲಾಗುತ್ತಿದೆ ಎಂಬ ಆರೋಪ ಕೂಡ ಓಡಾಡುತ್ತಿದೆ. ಇದೇ ವೇಳೆ ಟಾಲಿವುಡ್ ಲೆಜೆಂಡ್ ಎನ್.ಟಿ. ರಾಮರಾವ್ ಅವರ ಜನ್ಮಶತಮಾನೋತ್ಸವಕ್ಕೆ ಕೇಂದ್ರ ಸರ್ಕಾರ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಇದಲ್ಲವನ್ನು ವಿಪಕ್ಷಗಳು ಬೇರೆ ರೀತಿಯಾಗಿ ಅರ್ಥೈಸಿಕೊಂಡು ಆರೋಪ ಮಾಡುತ್ತಿವೆ ಎಂಬುದು ಒಂದು ವಾದವಾದರೆ, ಮತ್ತೊಂದು ಕಡೆ ತೆಲುಗು ಸಿನಿಮಾ ಇಂಡಸ್ಟ್ರಿಗೆ ಕೇಂದ್ರ ಸರ್ಕಾರ ದಿಢೀರ್ ಒತ್ತು ನೀಡುತ್ತಿದೆ ಎನ್ನುವ ಆರೋಪ ಕೂಡ ಓಡಾಡುತ್ತಿದೆ.
ತೆಲಂಗಾಣ, ಆಂಧ್ರ ಚುನಾವಣೆ ಎಫೆಕ್ಟ್?
ದೇಶದ ಪ್ರಮುಖ ರಾಜ್ಯಗಳ ಪೈಕಿ ತೆಲಂಗಾಣ ಹಾಗೂ ಆಂಧ್ರಪ್ರದೇಶ ಕೂಡ ಒಂದಾಗಿದೆ. ಹೀಗಾಗಿ ಎರಡೂ ರಾಜ್ಯದಲ್ಲಿ ಈ ಬಾರಿ ಗೆಲುವಿಗಾಗಿ ಬಿಜೆಪಿ ಪಣತೊಟ್ಟಿದೆ. ಈಗಿನ ಸ್ಥಿತಿಗೆ ಹೋಲಿಕೆ ಮಾಡಿದರೆ ಡಿಸೆಂಬರ್ ಆಸುಪಾಸಿನಲ್ಲಿ ನಡೆಯುತ್ತೆ ಎನ್ನಲಾಗ್ತಿರುವ ತೆಲಂಗಾಣ ವಿಧಾನಸಭೆ ಚುನಾವಣೆ. ಮತ್ತು ಲೋಕಸಭೆ ಜೊತೆ ನಡೆಯುವ ಆಂಧ್ರ ಪ್ರದೇಶ ರಾಜ್ಯದ ಚುನಾವಣೆಗೆ ಭರ್ಜರಿ ರಣತಂತ್ರ ರೂಪಿಸಲಾಗಿದೆ. ಹಾಗೇ ತನ್ನ ಹಳೇ ದೋಸ್ತಿ ಟಿಡಿಪಿಯ ಜೊತೆಗೂ ಬಿಜೆಪಿ ಕೈಜೋಡಿಸಿದೆ. ಈ ಪರಿಸ್ಥಿತಿಯಲ್ಲಿ ಚುನಾವಣೆ ಉದ್ದೇಶದಿಂದ ಪ್ರಶಸ್ತಿ & ಸಿನಿಮಾ ರಂಗಕ್ಕೆ ಒತ್ತು ನೀಡುತ್ತಿರುವ ಮಾತು ಕೇಳಿಬಂದಿದೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಆದರೆ ಆರೋಪ ಆರೋಪಗಳೇ, ಆದರೆ ಅವು ಇನ್ನೂ ಸಾಬೀತು ಆಗಬೇಕಲ್ಲ ಅಂತಿದ್ದಾರೆ ಫ್ಯಾನ್ಸ್.












Click it and Unblock the Notifications