ಮಧ್ಯಪ್ರದೇಶದಲ್ಲಿ ರೋಗಿಗಳಿಗೆ ಜ್ಯೋತಿಷಿಗಳಿಂದ ಚಿಕಿತ್ಸೆ!
ಭೋಪಾಲ್, ಜುಲೈ 16 : ರೋಗಿಗಳಿಗೆ ಜ್ಯೋತಿಷಿಗಳಿಂದ ಚಿಕಿತ್ಸೆ! ಹೌದು.. ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರ ಮುಂಬರುವ ಸೆಪ್ಟೆಂಬರ್ ತಿಂಗಳಿನಿಂದ ಮಧ್ಯಪ್ರದೇಶದಲ್ಲಿ ಜ್ಯೋತಿಷ್ಯ-ಹೊರರೋಗಿ ವಿಭಾಗ (Astrology OPD)ಗಳನ್ನು ಆರಂಭಿಸಲು ನಿರ್ಧರಿಸಿದೆ.
ಸರ್ಕಾರಿ ಸಂಸ್ಥೆಯಾಗಿರುವ ಮಹರ್ಷಿ ಪತಂಜಲಿ ಸಂಸ್ಕೃತ ಸಂಸ್ಥಾನ (MPPS)ದಿಂದ ಮಾನ್ಯತೆ ಪಡೆದಿರುವ ಜ್ಯೋತಿಷಿಗಳು ರೋಗಿಗಳೊಂದಿಗೆ ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡುವರು ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಜ್ಯೋತಿಷಿಗಳು, ವಾಸ್ತು ತಜ್ಞರು, ಹಸ್ತಮುದ್ರಿಕೆ ನೋಡಿ ಭವಿಷ್ಯ ಹೇಳುವವರು, ಹಾಗೂ ವೇದ ಕರ್ಮಕಾಂಡ ವಿದ್ವಾಂಸರು ವಾರದಲ್ಲೆರಡು ದಿನ 3-4 ಗಂಟೆಗಳ ಕಾಲ ರೋಗಿಗಳ ಜಾತಕ ಹಾಗೂ ಗ್ರಹಗತಿಗಳನ್ನು ನೋಡಿ ಚಿಕಿತ್ಸೆ ನೀಡಲಿದ್ದಾರೆ.
ಕಿರಿಯ ವೈದ್ಯರು ತಜ್ಞರ ಮೇಲುಸ್ತುವಾರಿಯಲ್ಲಿ ಯಾವ ರೀತಿ ಕಾರ್ಯಾಚರಿಸುತ್ತಾರೋ, ಅದೇ ರೀತಿ ಜ್ಯೋತಿಷಿಗಳು ಕೂಡಾ ಜ್ಯೋತಿಷ್ಯ-ಒಪಿಡಿಯಲ್ಲಿ ರೋಗಿಗಳಿಗೆ ಸೇವೆ ಸಲ್ಲಿಸಲಿದ್ದಾರೆ ಎಂದು ಮಹರ್ಷಿ ಪತಂಜಲಿ ಸಂಸ್ಕೃತ ಸಂಸ್ಥಾನದ ನಿರ್ದೇಶಕ ಪಿ.ಆರ್. ತಿವಾರಿ ತಿಳಿಸಿದ್ದಾರೆ.
ರೋಗಿಗಳ ಗ್ರಹಗತಿಗಳ ಆಧಾರವಾಗಿಟ್ಟು ಸರಿಯಾದ ಸಮಯದಲ್ಲಿ ಪ್ರಶ್ನೆಗಳನ್ನು ಕೆಳುವ ಮೂಲಕ ಸಮರ್ಪಕವಾದ ಜ್ಯೋತಿಷ-ವೈದ್ಯಕೀಯ ಚಿಕಿತ್ಸೆ ನೀಡಲಾಗುವುದೆಂದು ತಿವಾರಿ ಹೇಳಿದ್ದಾರೆ.
ಜ್ಯೋತಿಷಿಗಳ ಸೇವೆ ಪಡೆಯಲು ರೋಗಿಗಳು ಕೇವಲ 5 ರು. ಪಾವತಿಸಬೇಕಾಗುತ್ತದೆ. ಜಾತಕದ ಜತೆಗೆ ರೊಗಿಗಳ ಕಾಯಿಲೆಗಳನ್ನು ಪ್ರಶ್ನಾ ಕುಂಡಲಿ ವಿಧಾನದ ಮೂಲಕ ವಿಶ್ಲೇಷಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಸಂಸ್ಥಾನ ನಡೆಸುತ್ತಿರುವ 138 ಶಾಲೆಗಳಿಗೂ ವಿಸ್ತರಿಸಲಾಗುವುದೆಂದು ತಿಳಿಸಿದ್ದಾರೆ.












Click it and Unblock the Notifications