One Nation, One Election: ರಾಜ್ಯಗಳಿಗೆ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಕೊಟ್ಟ ಭರವಸೆ ಏನು?
'ಒಂದು ದೇಶ ಒಂದು ಚುನಾವಣೆ' ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ವಿಪಕ್ಷಗಳ ವಿರೋಧದ ನಡುವೆಯೂ ಮಸೂದೆಯನ್ನು ಮಂಡಿಸಲಾಗಿದೆ. ಮಸೂದೆ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿದ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ಚುನಾವಣೆಯ ಸಮಯ ಉಳಿಸಲು 'ಒಂದು ದೇಶ ಒಂದು ಚುನಾವಣೆ' ಜಾರಿಗೆ ತರಲಾಗುತ್ತಿದೆ, ಇದರಿಂದ ಸಂವಿಧಾನಕ್ಕಾಗಲಿ, ರಾಜ್ಯಗಳ ಅಧಿಕಾರಕ್ಕಾಗಲಿ ಯಾವುದೇ ಹಾನಿಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಸೂದೆ ಮೇಲಿನ ಭಾಷಣದ ವೇಳೆ ಮಾತನಾಡಿದ ಅವರು "ಚುನಾವಣೆ ವ್ಯವಸ್ಥೆಯನ್ನು ಸುಧಾರಿಸಲು ಕಾನೂನುಗಳನ್ನು ತರಬಹುದು. ಈ ಮಸೂದೆ ಚುನಾವಣಾ ಪ್ರಕ್ರಿಯೆಯನ್ನು ಸುಲಭವಾಗಿಸುತ್ತದೆ. ಮಸೂದೆಯಿಂದ ಸಂವಿಧಾನಕ್ಕಾಗಲಿ, ಸಂವಿಧಾನ ರಚನೆಗಾಗಲಿ ಯಾವುದೇ ಹಾನಿಯಾಗುವುದಿಲ್ಲ" ಎಂದು ಹೇಳಿದರು.

ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ನೇತೃತ್ವದ ಸಮಿತಿ ' ಒಂದು ದೇಶ, ಒಂದು ಚುನಾವಣೆ' ಜಾರಿ ಮಾಡುವ ಮಾರ್ಗಗಳನ್ನು ಶಿಫಾರಸ್ಸು ಮಾಡಲು ಕೆಲಸ ವಹಿಸಿಕೊಂಡಿತ್ತು, ಸಮಿತಿಯು ವಿವಿಧ ವಿರೋಧ ಪಕ್ಷಗಳು ಸೇರಿದಂತೆ ಅನೇಕ ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ನಡೆಸಿಯೇ ಹಲವು ಶಿಫಾರಸ್ಸುಗಳನ್ನು ಮಾಡಿದೆ, ಮಸೂದೆಯಿಂದ ರಾಜ್ಯಗಳಿಗೆ ಸಿಗುವ ಅಧಿಕಾರ ಹಾಳಾಗುವುದಿಲ್ಲ ಎಂದು ಮೇಘವಾಲ್ ತಿಳಿಸಿದ್ದಾರೆ.
ಪರ ವಿರೋಧ ಮತ ಚಲಾವಣೆ
ಮೇಘವಾಲ್ ಮಸೂದೆಯನ್ನು ಮಂಡಿಸಲು ಮತದಾನದ ಮೂಲಕ ಒಪ್ಪಿಗೆ ಪಡೆಯಲು ಕೇಳಲಾಯಿತು ಇದಕ್ಕೆ ಸ್ಪೀಕರ್ ಕೂಡ ಒಪ್ಪಿಕೊಂಡರು. ಸಾಂವಿಧಾನಿಕ ತಿದ್ದುಪಡಿ ಮಸೂದಿ ಮಂಡಿಸಲು ಲೋಕಸಭೆಯಲ್ಲಿ ಮತದಾನ ನಡೆಯಿತು. 269 ಸಂಸದರು ಪರವಾಗಿ ಮತ್ತು 198 ಸಂಸದರು ವಿರುದ್ಧವಾಗಿ ಮತ ಚಲಾಯಿಸಿದ ಬಳಿಕ ಮಸೂದೆಯನ್ನು ಮಂಡಿಸಲಾಯಿತು.
ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸಲು ಅನುಮತಿ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತರಲು ಮಸೂದೆಯನ್ನು ಮಂಡಿಸಲಾಗಿದ್ದು, ವಿಪಕ್ಷಗಳು ಕೋಲಾಹಲ ಸೃಷ್ಟಿಸಿದವು. ಇದು ಪ್ರಜಾಪ್ರಭುತ್ವ ವಿರೋಧಿ, ಸರ್ವಾಧಿಕಾರಿ ಧೋರಣೆ ಎಂದು ವಿರೋಧ ಪಕ್ಷಗಳು ಕಿಡಿ ಕಾರಿವೆ.
ಪರ ವಿರೋಧ ಚರ್ಚೆ
ಕಾಂಗ್ರೆಸ್‌ನ ಚಂಡೀಗಢ ಸಂಸದ ಮನೀಶ್ ತಿವಾರಿ ಮಾತನಾಡಿ, ಒಂದು ರಾಷ್ಟ್ರ ಒಂದು ಚುನಾವಣೆ ಸಂವಿಧಾನ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಖಂಡಿಸಿದರು. ಅವರ ಹೇಳಿಕೆಯು ಲೋಕಸಭೆಯಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ಭಾರತ ರಾಜ್ಯಗಳ ಒಕ್ಕೂಟವಾಗಿದ್ದು, ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸುವ ಮೂಲಕ ಫೆಡರಲ್ ವ್ಯವಸ್ಥೆಯನ್ನು ಹಾಳು ಮಾಡಲಾಗುತ್ತಿದೆ ಎಂದು ಹೇಳಿದರು.
ಒಂದೇ ಬಾರಿ ಲೋಕಸಭೆ, ವಿಧಾನಸಭೆ ಚುನಾವಣೆಗಳು ನಡೆದರೆ, ರಾಜ್ಯ ಸರ್ಕಾರಗಳ ಮೇಲೆ ಪರಿಣಾಮ ಬೀರುತ್ತದೆ. ತಳಮಟ್ಟದ ಪ್ರಜಾಪ್ರಭುತ್ವ ಕೂಡ ದುರ್ಬಲವಾಗುತ್ತದೆ ಎಂದು ವಾದಿಸಿದರು. ಇದು ಸರ್ವಾಧಿಕಾರಿ ಧೋರಣೆಯಾಗಿದ್ದು, ಸಂವಿಧಾನದ ಮೂಲ ಆಶಯವನ್ನೇ ಬುಡಮೇಲು ಮಾಡುತ್ತದೆ ಎಂದು ವಿಪಕ್ಷ ನಾಯಕಾರಾದ ಟಿಆರ್ ಬಾಲು, ಕಲ್ಯಾಣ್ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದರು.












Click it and Unblock the Notifications