Rahul Gandhi On Adani: ಬಿಜೆಪಿ ಹೆದರುವ ಅಗತ್ಯವಿಲ್ಲ, ಅದಾನಿ ಬಗ್ಗೆ ಇಂದು ಮಾತನಾಡಲ್ಲ: ರಾಹುಲ್ ಗಾಂಧಿ
ಲೋಕಸಭೆ ಅವಿಶ್ವಾಸ ಗೊತ್ತುವಳಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಸಂಸದ ಸ್ಥಾನವನ್ನು ಮರಳಿಪಡೆದ ನಂತರ ಮೊದಲ ಬಾರಿಗೆ ಸಂಸತ್‌ನಲ್ಲಿ ಮಾತನಾಡಿದರು. ಸೋಮವಾರ ಸಂಸತ್‌ಗೆ ಆಗಮಿಸಿದ್ದರೂ ಅವರು ಮಾತನಾಡದೆ ಮೌನಕ್ಕೆ ಜಾರಿದ್ದರು.
ಬುಧವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆಗೆ ಚಾಲನೆ ನೀಡಿದ ರಾಹುಲ್ ಗಾಂಧಿ, ಹಿಂದಿನ ಸಂಸತ್ತಿನ ಅಧಿವೇಶನದಲ್ಲಿ ಭಾಷಣವನ್ನು ಉಲ್ಲೇಖಿಸಿದ್ದು, ಸ್ಪೀಕರ್ ಈಗ ರಿಲ್ಯಾಕ್ಸ್ ಆಗಬಹುದು ಎಂದು ಹೇಳಿದರು. ಮಾತು ಆರಂಭಿಸಿದ ರಾಹುಲ್ ಗಾಂಧಿ, "ನೀವು (ಬಿಜೆಪಿ) ಹೆದರುವ ಅಗತ್ಯವಿಲ್ಲ, ನನ್ನ ಇಂದಿನ ಭಾಷಣ ಅದಾನಿ ಬಗ್ಗೆ ಅಲ್ಲ" ಎಂದು ಹೇಳಿದರು.

"ಸಭಾಧ್ಯಕ್ಷರೇ, ನನ್ನನ್ನು ಲೋಕಸಭೆಗೆ ಮರು ಪ್ರತಿಷ್ಠಾಪಿಸಿದ್ದಕ್ಕಾಗಿ ಧನ್ಯವಾದಗಳು. ನಾನು ಕೊನೆಯ ಬಾರಿ ಮಾತನಾಡಿದಾಗ, ನಿಮ್ಮ ಹಿರಿಯ ನಾಯಕರಿಂದಾಗಿ ನಾನು ಅದಾನಿ ಮೇಲೆ ಹೆಚ್ಚು ಗಮನಹರಿಸಿದ್ದರಿಂದ ನಾನು ನಿಮಗೆ ನೋವುಂಟು ಮಾಡಿರಬಹುದು. ಇಂದು ನಾನು ಅದಾನಿ ಬಗ್ಗೆ ಮಾತನಾಡುವುದಿಲ್ಲ." ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆ ಇನ್ನೂ ಮುಗಿದಿಲ್ಲ
ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಯಾತ್ರೆ ಇನ್ನೂ ಮುಗಿದಿಲ್ಲ ಎಂದು ಹೇಳಿದರು. ಹಲವು ಜನ ನೀವು ಯಾಕೆ ಭಾರತ್ ಜೋಡೋ ಯಾತ್ರೆ ಆರಂಭಿಸಿದಿರಿ ಎಂದು ಕೇಳುತ್ತಾರೆ. ಆದರೆ ಯಾಕೆ ಆರಂಭಿಸಿದೆ ಎಂದು ನನಗೆ ಗೊತ್ತಿಲ್ಲ, ಆದರೆ ಈ ಯಾತ್ರೆಯಲ್ಲಿ ಇಡೀ ಭಾರತೀಯರ ನೋವು, ಸಂಕಟ, ಸಮಸ್ಯೆಗಳು ನನಗೆ ಅರ್ಥವಾದವು. ಯಾತ್ರೆಯಿಂದಾಗಿ ನನ್ನಲ್ಲಿದ್ದ ಅಹಂಕಾರದ ಭಾವನೆ ಸಂಪೂರ್ಣ ಮಾಯವಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ
ಇನ್ನು ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. "ಕೆಲವು ದಿನಗಳ ಹಿಂದೆ ನಾನು ಮಣಿಪುರಕ್ಕೆ ಹೋಗಿದ್ದೆ, ಆದರೆ ನಮ್ಮ ಪ್ರಧಾನಿ ಇನ್ನೂ ಅಲ್ಲಿಗೆ ಹೋಗಿಲ್ಲ. ಅವರ ಪ್ರಕಾರ ಮಣಿಪುರ ಎಂದರೆ ಭಾರತವಲ್ಲ" ಎಂದು ಹೇಳಿದರು.
"ನಾನು 'ಮಣಿಪುರ' ಎಂಬ ಪದವನ್ನು ಬಳಸಿದ್ದೇನೆ ಆದರೆ ಮಣಿಪುರ ಇನ್ನು ಉಳಿಯುವುದಿಲ್ಲ ಎಂಬುದು ಸತ್ಯ. ಮಣಿಪುರವನ್ನು ಎರಡು ಭಾಗ ಮಾಡಿದ್ದೀರಿ. ನೀವು ಮಣಿಪುರವನ್ನು ವಿಭಜಿಸಿದ್ದೀರಿ" ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
"ಮಣಿಪುರದ ಶಿಬಿರಗಳಲ್ಲಿ ನಾನು ಮಹಿಳೆಯರು, ಮಕ್ಕಳೊಂದಿಗೆ ಮಾತನಾಡಿದ್ದೇನೆ, ಪ್ರಧಾನಿ ಮೋದಿ ಇಲ್ಲಿಯವರೆಗೆ ಏನೂ ಮಾಡಿಲ್ಲ. ನಾನು ಮಹಿಳೆಯೊಬ್ಬರನ್ನು 'ನಿಮಗೆ ಏನಾಯಿತು' ಎಂದು ಕೇಳಿದೆ, ಅದಕ್ಕೆ ಅವರು, 'ನನ್ನ ಒಬ್ಬನೇ ಮಗನನ್ನು ನನ್ನ ಕಣ್ಣುಗಳ ಮುಂದೆ ಗುಂಡು ಹಾರಿಸಿ ಕೊಂದರು. ನಾನು ರಾತ್ರಿಯಿಡೀ ಅಳುತ್ತಾ ಅವನ ಶವದೊಂದಿಗೆ ಮಲಗಿದೆ, ನಾನು ಎಲ್ಲವನ್ನೂ ಬಿಟ್ಟು ಮನೆಯಿಂದ ಹೊರಬಂದೆ, ಅಲ್ಲಿರಲು ನನಗೆ ಭಯವಾಯಿತು." ಎಂದು ಹೇಳಿದರು. ನಾನು "ಏನಾದರೂ ತಂದಿದ್ದೀರಾ?" ಎಂದು ಕೇಳಿದೆ, ಅದಕ್ಕೆ ಆಕೆ "ನನ್ನ ಬಳಿ ಇರುವುದು ನಾನು ಧರಿಸಿರುವ ಬಟ್ಟೆ ಮತ್ತು ಫೋಟೋ', ಎಂದು ಹೇಳಿದರು ಎಂದು ಮಣಿಪುರದ ಕರಾಳ ಸ್ಥಿತಿಯನ್ನು ಲೋಕಸಭೆಯಲ್ಲಿ ಬಿಚ್ಚಿಟ್ಟರು.












Click it and Unblock the Notifications