ಭಾರತದ ಪ್ರಗತಿಗೆ ಈಶಾನ್ಯ ರಾಜ್ಯ ಕೊಡುಗೆ ನೀಡಲಿವೆ: ಜೋಶಿ
ನವದೆಹಲಿ, ಅಕ್ಟೋಬರ್ 31: ಭಾರತ ರಾಷ್ಟ್ರದ ಬೆಳವಣಿಗೆಯಲ್ಲಿ ಈಶಾನ್ಯ ರಾಜ್ಯಗಳು ತಮ್ಮ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಾಗಲ್ಯಾಂಡ್ ನ ದಿಮಾಪುರ್‌ನಲ್ಲಿ ಸೋಮವಾರ ಜರುಗಿದ 'ಈಶಾನ್ಯ ಗಣಿಗಾರಿಕೆ ಸಮಾವೇಶ'ದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈಶಾನ್ಯ ರಾಜ್ಯಗಳಲ್ಲಿ ಗಣಿಗಾರಿಕೆಯ ಹೊಸ ಸಾಧ್ಯತೆಗಳು ಕಂಡು ಬಂದಿದ್ದು, ಇಲ್ಲಿನ ಗಣಿಗಾರಿಕೆಯಿಂದ ದೇಶಕ್ಕೆ ಈ ರಾಜ್ಯಗಳು ತಮ್ಮದೇ ಆದ ಕೊಡುಗೆ ನೀಡಲಿವೆ ಎಂದು ಅವರು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಈಶಾನ್ಯ ನೀತಿಯ (Act East) ಅಡಿಯಲ್ಲಿ ಈಶಾನ್ಯ ರಾಜ್ಯಗಳು ಗಮನಾರ್ಹ ಕ್ರಮಗಳನ್ನು ತೆಗೆದುಕೊಂಡಿವೆ. ಎನ್‌ಇಆರ್‌ನಲ್ಲಿ ಖನಿಜ ಪರಿಶೋಧನೆಗೆ ಆದ್ಯತೆ ನೀಡಲಾಗಿದೆ. ಇದು ಆಯಾ ರಾಜ್ಯಗಳಲ್ಲಿನ ಗಣಿಗಾರಿಕೆ ಪ್ರದೇಶದ ಆರ್ಥಿಕ ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು.

ಈಶಾನ್ಯ ಭಾಗದ ಮೊಟ್ಟಮೊದಲ ಭೂ ವಿಜ್ಞಾನ ಮತ್ತು ಗಣಿಗಾರಿಕೆ ಸಮಾವೇಶಕ್ಕೆ ಪ್ರಹ್ಲಾದ್ ಜೋಶಿ ಅವರನ್ನ ನಾಗಾಲ್ಯಾಂಡ್ ಮತ್ತು ಅಸ್ಸಾಂ ಮುಖ್ಯಮಂತ್ರಿಗಳು, ಅಧಿಕಾರಿಗಳು ಹೂಗುಚ್ಚ ನೀಡಿ ಬರಮಾಡಿಕೊಂಡರು. ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ನಾಗಾಲ್ಯಾಂಡ್‌ನ ದಿಮಾಪುರ್‌ನಲ್ಲಿ ಜಿಎಸ್‌ಐ ಅಧಿಕಾರಿಗಳಿಗೆ ಪ್ರತಿಜ್ಞೆ ಬೋಧಿಸಲಾಯಿತು. ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರು 'ಒಂದೇ ಭಾರತ ಶ್ರೇಷ್ಠ ಭಾರತ'ದ ನಿರ್ಮಾಣಕ್ಕೆ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ದಾರ್ಶನಿಕರು ಎಂದು ಮಹನಿಯರು ಹಾಗೂ ಭಾರತದ ಅಭಿವೃದ್ಧಿ ಕುರಿತು ಕೇಂದ್ರ ಸಚಿವರು ವಿವರಿಸಿದರು.
ಗಣಿಗಾರಿಕೆಯಿಂದ ಈಶಾನ್ಯ ಭಾಗದ ಆರ್ಥಿಕಾಭಿವೃದ್ಧಿ; ಇದೇ ವೇಳೆ ದಿಮಾಪುರ್‌ನಲ್ಲಿರುವ ಜಿಎಸ್‌ಐ ಕಚೇರಿಗೆ ಭೇಟಿ ನೀಡಿದ ಪ್ರಹ್ಲಾದ್ ಜೋಶಿ, ಆ ಭಾಗದ ಪರಿಶೋಧನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆಗೆ ಸುಧೀರ್ಘ ಚರ್ಚೆ ನಡೆಸಿದರು. ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ಉಪಕ್ರಮಗಳನ್ನು ಖುದ್ದಾಗಿ ಕೇಂದ್ರ ಸಚಿವರೇ ಪರಿಶೀಲಿಸಿದ್ದು ವಿಶೇಷವಾಗಿತ್ತು.

ವಿಶೇಷ ಅಭಿಯಾನ 2.0 ಅಡಿಯಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ನಡೆಯಿತು. ಸಚಿವರು ಸಸಿಗಳನ್ನು ನೆಟ್ಟು ನೀರೆರೆಯುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಒಟ್ಟಾರೆ ಈಶಾನ್ಯ ಭಾಗದ ಮೊಟ್ಟಮೊದಲ ಭೂ ವಿಜ್ಞಾನ ಮತ್ತು ಗಣಿಗಾರಿಕೆ ಸಮಾವೇಶದ ಮೂಲಕ ಈಶಾನ್ಯ ಭಾಗದ ಆರ್ಥಿಕಾಭಿವೃದ್ಧಿ ದೃಷ್ಟಿಯಿಂದ ಮಹತ್ತರ ಹೆಜ್ಜೆಗೆ ಪ್ರಹ್ಲಾದ್ ಜೋಶಿ ಅವರು ಒತ್ತು ನೀಡಿದ್ದು ಕಂಡು ಬಂತು.












Click it and Unblock the Notifications