ಈಶಾನ್ಯ ದೆಹಲಿ ಗಲಭೆ: ಉಮರ್ ಖಾಲಿದ್‌ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ನವದೆಹಲಿ, ಅಕ್ಟೋಬರ್ 18: 2020ರ ಫೆಬ್ರವರಿಯಲ್ಲಿ ನಡೆದ ದಂಗೆಗಳ ಹಿಂದೆ ಪಿತೂರಿ ನಡೆದಿದೆ ಎನ್ನಲಾದ ಯುಎಪಿಎ ಪ್ರಕರಣದಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್‌ಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. ಜಾಮೀನು ಅರ್ಜಿಯಲ್ಲಿ ಯಾವುದೇ ಅರ್ಹತೆಯನ್ನು ಹೊಂದಿಲ್ಲ. ಹೀಗಾಗಿ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ರಜನೀಶ್ ಭಟ್ನಾಗರ್ ಅವರ ಪೀಠ ಹೇಳಿದೆ.
ಸೆಪ್ಟೆಂಬರ್ 2020ರಲ್ಲಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟ ಖಾಲಿದ್, ತಾವು ನಗರದ ಈಶಾನ್ಯ ಪ್ರದೇಶದಲ್ಲಿನ ಹಿಂಸಾಚಾರದಲ್ಲಿ ಯಾವುದೇ ಕ್ರಿಮಿನಲ್ ಪಾತ್ರವನ್ನು ಹೊಂದಿಲ್ಲ ಅಥವಾ ಪ್ರಕರಣದ ಯಾವುದೇ ಆರೋಪಿಗಳೊಂದಿಗೆ ಯಾವುದೇ ಪಿತೂರಿಯ ಸಂಪರ್ಕವನ್ನು ಹೊಂದಿಲ್ಲ ಎಂಬ ಆಧಾರದ ಮೇಲೆ ಜಾಮೀನು ಕೋರಿದ್ದರು. ಇದೇ ವೇಳೆ ಜಾಮೀನು ಅರ್ಜಿಯನ್ನು ದೆಹಲಿ ಪೊಲೀಸರು ವಿರೋಧಿಸಿದ್ದರು.

ಖಾಲಿದ್, ಶರ್ಜೀಲ್ ಇಮಾಮ್ ಮತ್ತು ಇತರ ಹಲವರ ವಿರುದ್ಧ ಭಯೋತ್ಪಾದನಾ-ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಫೆಬ್ರವರಿ 2020 ರ ಗಲಭೆಗಳ "ಮಾಸ್ಟರ್‌ಮೈಂಡ್‌ಗಳು" ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ. ಈ ಗಲಭೆಯಲ್ಲಿ 53 ಜನರು ಸಾವನ್ನಪ್ಪಿದ್ದು ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡರು. ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ನಡೆದ ಪ್ರತಿಭಟನೆಗಳ ವೇಳೆ ಹಿಂಸಾಚಾರ ಭುಗಿಲೆದ್ದಿತ್ತು.
ಖಾಲಿದ್ ಅಲ್ಲದೆ, ಕಾರ್ಯಕರ್ತ ಖಾಲಿದ್ ಸೈಫಿ, ಜೆಎನ್‌ಯು ವಿದ್ಯಾರ್ಥಿಗಳಾದ ನತಾಶಾ ನರ್ವಾಲ್ ಮತ್ತು ದೇವಾಂಗನಾ ಕಲಿತಾ, ಜಾಮಿಯಾ ಸಮನ್ವಯ ಸಮಿತಿ ಸದಸ್ಯರಾದ ಸಫೂರ ಜರ್ಗರ್, ಎಎಪಿ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಮತ್ತು ಹಲವರ ವಿರುದ್ಧವೂ ಕಠಿಣ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications