Chandrababu Naidu: ಚಂದ್ರಬಾಬು ನಾಯ್ಡುಗಿಲ್ಲ ರಿಲೀಫ್- ನ್ಯಾಯಾಂಗ ಬಂಧನ ವಿಸ್ತರಿಸಿದ ಎಸಿಬಿ ಕೋರ್ಟ್
ಹೈದರಾಬಾದ್, ಸೆಪ್ಟೆಂಬರ್ 22: ಟಿಡಿಪಿ ನಾಯಕ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ನ್ಯಾಯಾಂಗ ಬಂಧನವನ್ನು ವಿಜಯವಾಡದ ಎಸಿಬಿ ಕೋರ್ಟ್ ಸೆಪ್ಟೆಂಬರ್ 24 ರ ವರೆಗೆ ವಿಸ್ತರಿಸಿದೆ.
ಈ ಹಿಂದೆ ವಿಧಿಸಲಾಗಿದ್ದ ಬಂಧನ ಅವಧಿ ಇಂದಿಗೆ ಮುಕ್ತಾಯವಾಗುತ್ತಿದ್ದಂತೆ ಪೊಲೀಸರು ನಾಯ್ಡು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ರಾಜಮಂಡ್ರಿ ಸೆಂಟ್ರಲ್ ಜೈಲಿನಲ್ಲಿಂದು ಮಾತನಾಡಿದ ನಾಯ್ಡು, 'ರಾಜಕೀಯ ಸೇಡು ತೀರಿಸಿಕೊಳ್ಳಲು ನನ್ನನ್ನು ಬಂಧಿಸಲಾಗಿದೆ. ನಾನು ಅಪರಾಧ ಎಸಗಿಲ್ಲ. ಮಾಡದ ತಪ್ಪುಗಳ ಬಗ್ಗೆ ಆರೋಪ ಹೊರಿಸಲಾಗುತ್ತಿದೆ. ಈ ಬಂಧನದಿಂದ ನನಗೆ ಅನ್ಯಾಯವಾಗಿದೆ' ಎಂದು ಹೇಳಿದರು.
ನಾನು ಕೇವಲ ಆರೋಪಗಳನ್ನು ಎದುರಿಸುತ್ತಿದ್ದೇನೆ. ನನ್ನನ್ನು ಅಪರಾಧಿ ಎಂಬುದಾಗಿ ಎಸಿಬಿ ನ್ಯಾಯಾಲಯದ ನ್ಯಾಯಾಧೀಶರು ಘೋಷಿಸಿಲ್ಲ ಎಂದು ತಿಳಿಸಿದರು.

ಪ್ರತಿವಾದಗಳ ಮೂಲಕ ನಾನು ನಿರಪರಾಧಿ ಎಂದು ಸಾಬೀತುಪಡಿಸಬಹುದು. ಆರೋಪಗಳನ್ನು ಸುಳ್ಳೆಂದು ಮನವರಿಕೆ ಮಾಡಿಕೊಡಬಹುದು ಎಂದು ನ್ಯಾಯಾಧೀಶರು ಹೇಳಿದ್ದಾರೆ ಎಂಬುದಾಗಿ ನಾಯ್ಡು ತಿಳಿಸಿದರು.
ಕೌಶಲ್ಯಾಭಿವೃದ್ಧಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಆರೋಪದ ಮೇಲೆ ನಾಯ್ಡು ಅವರನ್ನು ಎರಡು ವಾರಗಳ ಹಿಂದೆ ಬಂಧಿಸಲಾಗಿತ್ತು. ಅವರು ಕಳೆದ 2 ವಾರಗಳಿಂದ ರಾಜಾಜಿನಗರದ ಜೈಲಿನಲ್ಲಿದ್ದಾರೆ.
ಪೊಲೀಸರು ಅಮರಾವತಿ ಇನ್ನರ್ ರಿಂಗ್ ರೋಡ್ ಪ್ರಕರಣ ಹಾಗೂ ಎಪಿ ಫೈಬರ್ ನೆಟ್ ಪ್ರಕರಣದಲ್ಲಿಯೂ ನಾಯ್ಡು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ವಿಧಾನಸಭೆಯಲ್ಲಿ ಗದ್ದಲ
ಆಂಧ್ರಪ್ರದೇಶದ ವಿಧಾನಸಭೆಯ ಅಧಿವೇಶನದಲ್ಲಿ ಶುಕ್ರವಾರ ಮತ್ತೊಮ್ಮೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ತೆಲುಗು ದೇಶಂ ಪಕ್ಷದ (ಟಿಡಿಪಿ) ಶಾಸಕರು ಚಂದ್ರಬಾಬು ನಾಯ್ಡು ಅವರ ಬಂಧನವನ್ನು ವಿರೋಧಿಸಿ ವಿಧಾನಸಭೆಯಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಶಾಸಕರು ಸಭಾಧ್ಯಕ್ಷರ ವೇದಿಕೆಯನ್ನು ಸುತ್ತುವರಿದರು. ನಾಯ್ಡು ವಿರುದ್ಧದ ಎಲ್ಲಾ ಅಕ್ರಮ ಪ್ರಕರಣಗಳನ್ನು ರದ್ದುಗೊಳಿಸುವಂತೆ ಘೋಷಣೆಗಳನ್ನು ಕೂಗಿದರು. ಸಭಾಧ್ಯಕ್ಷರ ಪೀಠದ ಮೇಲೆ ಪತ್ರ ಎಸೆದರು. ಈ ಗದ್ದಲದ ನಂತರ ಟಿಡಿಪಿ ಶಾಸಕರಾದ ಅಚ್ಚಂನಾಯ್ಡು ಮತ್ತು ಬಿ ಅಶೋಕ್ ಅವರನ್ನು ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ.
ಹಿಂದೂಪುರ ಶಾಸಕ ನಟ ನಂದಮೂರಿ ಬಾಲಕೃಷ್ಣ ಹಾಗೂ ಇತರರು ಪ್ರತಿಭಟನೆ ನಡೆಸುತ್ತಿರುವಾಗ ವಿಧಾನಸಭೆಯಲ್ಲಿ ಸೀಟಿ ಹೊಡೆದರು. ಆ ನಂತರ ಸ್ಪೀಕರ್ ಅವರು ಮಾರ್ಷಲ್‌ಗಳನ್ನು ಕಳುಹಿಸಿ ಸೀಟಿಗಳನ್ನು ಹಿಂಪಡೆದುಕೊಂಡರು.
ಚಂದ್ರಬಾಬು ನಾಯ್ಡು ಬಂಧನ ರಾಜಕೀಯ ದ್ವೇಷದಿಂದ ಕೂಡಿದೆ ಎಂದು ಟಿಡಿಪಿ ಶಾಸಕರು ಆರೋಪಿಸಿದ್ದಾರೆ.












Click it and Unblock the Notifications