ಎನ್‌ಡಿಎನೂ ಬೇಡ, ಇಂಡಿಯಾನೂ ಬೇಡ ಎಂದ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ: ಮಹತ್ವದ ಕಾರಣ ನೀಡಿದ ದಲಿತ ನಾಯಕಿ
ನವದೆಹಲಿ, ಆಗಸ್ಟ್ 30: ಲೋಕಸಭೆ ಚುನಾವಣೆಗೂ ಮುನ್ನ ಯಾವುದೇ ಪಕ್ಷದ ಅಥವಾ ಮೈತ್ರಿಕೂಟದ ಜೊತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.
ಬಿಎಸ್‌ಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಎಲ್ಲಾ ಪಕ್ಷಗಳಿಗೆ ಉತ್ಸಾಹವಿದೆ. ಆದರೆ, ನಾವು ಬಿಜೆಪಿ ನೇತೃತ್ವದ ಎನ್‌ಡಿಎ ಅಥವಾ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದೊಂದಿಗೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಎದುರಿಸಲು ವಿರೋಧ ಪಕ್ಷದ ನಾಯಕರು ಜಂಟಿ ಪ್ರಚಾರ ಕಾರ್ಯತಂತ್ರವನ್ನು ರೂಪಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ನಾಳೆ ಮುಂಬೈನಲ್ಲಿ ಇಂಡಿಯಾ ಮೈತ್ರಿಕೂಟದ ಸಭೆ ನಡೆಯಲಿದೆ. ಇದಕ್ಕೆ ಒಂದು ದಿನ ಮುಂಚಿತವಾಗಿ ಮಾಯಾವತಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ.
ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳು ಹಲವು ಪಕ್ಷಗಳನ್ನು ಒಳಗೊಂಡಿವೆ. ಅವುಗಳಲ್ಲಿ ಹೆಚ್ಚಿನವು ಬಡವರ ವಿರೋಧಿ, ಜಾತಿವಾದಿ, ಕೋಮುವಾದಿ, ಶ್ರೀಮಂತ ಮತ್ತು ಬಂಡವಾಳಶಾಹಿ ನೀತಿಗಳನ್ನು ಹೊಂದಿವೆ. ಅವುಗಳ ವಿರುದ್ಧ ಬಿಎಸ್‌ಪಿ ಹೋರಾಟ ಮುಂದುವರಿಯಲಿದೆ ಎಂದು ಮಾಯಾವತಿ ಹೇಳಿದ್ದಾರೆ.
ಈ ಹಿನ್ನೆಲಯಲ್ಲಿ ಅವರೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಗಾಗಿ ನಾನು ಮಾಧ್ಯಮಗಳಿಗೆ ಮನವಿ ಮಾಡುತ್ತೇನೆ. ದಯವಿಟ್ಟು ಯಾವುದೇ ನಕಲಿ ಸುದ್ದಿ ಹರಡಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ.
ಎಲ್ಲರೂ ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ನಾವು ಯಾರೊಂದಿಗೆ ಶಾಮೀಲಾಗುವುದಿಲ್ಲ. ನಾವು ಸುಮ್ಮನಿದ್ದರೂ ಬಿಜೆಪಿಯೊಂದಿಗೆ ಶಾಮೀಲಾಗಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತವೆ. ಆದರೆ, ನಾವು ಖಂಡಿತವಾಗಿಯೂ ಜಾತ್ಯತೀತರು ಎಂದು ಮಾಯಾವತಿ ಹೇಳಿದ್ದಾರೆ.
2007ರಂತೆಯೇ ಬಿಎಸ್‌ಪಿ ಪಕ್ಷವು ಬಂಧುತ್ವದ ಆಧಾರದ ಮೇಲೆ ಕೋಟ್ಯಂತರ ನಿರ್ಲಕ್ಷಿತ ಜನರನ್ನು ಒಗ್ಗೂಡಿಸಲಿದೆ. ಲೋಕಸಭೆ ಮತ್ತು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಧ್ಯಮಗಳು ಮತ್ತೆ ಮತ್ತೆ ತಪ್ಪು ಮಾಹಿತಿ ಹರಡಬಾರದು ಎಂದು ತಿಳಿಸಿದ್ದಾರೆ.
ಮಾಜಿ ಸಚಿವ ಇಮ್ರಾನ್ ಮಸೂದ್ ಉಚ್ಛಾಟನೆಯನ್ನು ಸಮರ್ಥಿಕೊಂಡಿರುವ ಅವರು, 'ಸಹರಾನ್‌ಪುರದ ಮಾಜಿ ಶಾಸಕ ಕಾಂಗ್ರೆಸ್ ನಾಯಕರನ್ನು ಹೊಗಳುವುದರಲ್ಲಿ ನಿರತರಾಗಿದ್ದರು. ಹೀಗಾಗಿ ಜನರು ಇದನ್ನು ಪ್ರಶ್ನಿಸುವುದು ಸಹಜ. ಅಂತಹವರನ್ನು ಜನರು ಹೇಗೆ ನಂಬುತ್ತಾರೆ?' ಎಂದು ಪ್ರಶ್ನಿಸಿದ್ದಾರೆ.
ಇಂಡಿಯಾ ಮೈತ್ರಿಕೂಟದ ಮೊದಲ ಸಭೆ ಜೂನ್‌ನಲ್ಲಿ ಪಾಟ್ನಾದಲ್ಲಿ ನಡೆದಿದೆ. ಎರಡನೆಯದು ಜುಲೈ ಮಧ್ಯದಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಬೆಂಗಳೂರು ಸಮಾವೇಶದಲ್ಲಿ ಒಕ್ಕೂಟದ ಹೆಸರನ್ನು ಅಂತಿಮಗೊಳಿಸಲಾಯಿತು. ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್ (ಇಂಡಿಯಾ) ಎಂದು ಹೆಸರಿಸಲಾಗಿದೆ.
ನಾಳೆಯಿಂದ ( ಗುರುವಾರ ) ಎರಡು ದಿನಗಳ ಕಾಲ ಮುಂಬೈನಲ್ಲಿ ಇಂಡಿಯಾ ಮೈತ್ರಿಕೂಟದ ಸಭೆ ನಡೆಯಲಿದೆ.












Click it and Unblock the Notifications