Bihar Election 2025: NDA ಸಿಎಂ ಅಭ್ಯರ್ಥಿ ಘೋಷಣೆ; ಬಿಹಾರ ಚುನಾವಣೆ ಗೆಲ್ಲೋರ್‍ಯಾರು?
ಪಾಟ್ನಾ, ನವೆಂಬರ್ 11: ಬಿಹಾರದ ವಿಧಾನಸಭೆಗೆ ಎರಡನೇ ಹಂತದ ಚುನಾವಣೆ ಸದ್ಯ (ನ. 11) ಪ್ರಗತಿಯಲ್ಲಿದೆ. ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾರರ ಭಾರೀ ಸಂಖ್ಯೆಯ ಹಾಜರಾತಿ, ಎನ್ ಡಿಎ ಅಲೆ ಬಲವಾಗಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಇನ್ನೂ ಅಧಿಕಾರ ಉಳಿಸಿಕೊಳ್ಳಲು ಎನ್‌ಡಿಎ ಮೈತ್ರಿಕೂಟ ಮತ್ತು ಅಧಿಕಾರಕ್ಕೇರಲು ಮಹಾಘಟಬಂಧನ್ ತೀವ್ರ ಪೈಪೋಟಿಯನ್ನು ನಡೆಸುತ್ತಿದ್ದು, ಚುನಾವಣಾ ಫಲಿತಾಂಶಕ್ಕೂ ಮೊದಲೇ ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿಯನ್ನ ಬಿಜೆಪಿ ಘೋಷಿಸಿದೆ.
ಹೌದು, ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ 6 ರಂದು ಮೊದಲ ಹಂತದ ಮತದಾನ ಮುಗಿದ ನಂತರ, ರಕ್ಷಣಾ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ರಾಜನಾಥ್ ಸಿಂಗ್ ನಿತೀಶ್ ಕುಮಾರ್ ಅವರನ್ನು ಎನ್‌ಡಿಎಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅನುಮೋದಿಸಿದ್ದಾರೆ. 2025 ರ ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೂ ಮುನ್ನ, ಜನತಾದಳ (ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ಬಿಹಾರ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸೋಮವಾರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ನಮಗೆ ಯಾವುದೇ ಹುದ್ದೆ ಖಾಲಿ ಇಲ್ಲ ಎಂದು ಅವರು ಈಗಾಗಲೇ ಹೇಳಿದ್ದಾರೆ. ನಮಗೆ ಯಾವುದೇ ಗೊಂದಲವಿಲ್ಲ. ನಮ್ಮ (ಸಿಎಂ) ಮುಖ್ಯಮಂತ್ರಿ ಅಭ್ಯರ್ಥಿ ನಿತೀಶ್ ಕುಮಾರ್ ಎಂದು ಧರ್ಮೇಂದ್ರ ಪ್ರಧಾನ್ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪಷ್ಟವಾಗಿ ಹೆಸರಿಸದ ಕಾರಣ ಕುಶ್ವಾಹ ಸಮುದಾಯದಲ್ಲಿ ಅಸಮಾಧಾನ ಉಂಟಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನ್ ಅವರು, ಈ ಬಾರಿ ಕುಶ್ವಾಹ ಸಮುದಾಯ ನಮ್ಮ ಪರವಾಗಿದೆ. ಕೋಪಗೊಂಡವರೆಲ್ಲರೂ ಹಿಂತಿರುಗಿದರು. ಈ ದೇಶದ ಇಬ್ಬರು ಮಹಾನ್ ಕುಶ್ವಾಹ ನಾಯಕರಾದ ಸಾಮ್ರಾಟ್ ಚೌಧರಿ, ಉಪೇಂದ್ರ ಕುಶ್ವಾಹ ಎನ್‌ಡಿಎ ಜೊತೆಗಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿರುವುದು ಮತದಾರರಲ್ಲಿ, ವಿಶೇಷವಾಗಿ ಸಾಮಾಜಿಕ ಕಲ್ಯಾಣ ಯೋಜನೆಗಳ ವಿಷಯದ ಕುರಿತು ಪ್ರಚಾರ ಮಾಡುತ್ತಿರುವ ನಿತೀಶ್ ಕುಮಾರ್ ಅವರ ಬೆಂಬಲಿಗರಲ್ಲಿ ಗೊಂದಲವನ್ನುಂಟುಮಾಡಿತ್ತು ಎಂದು ಬಿಜೆಪಿ ಉನ್ನತ ನಾಯಕರಿಗೆ ಪಕ್ಷದ ಕಾರ್ಯಕರ್ತರಿಗೆ ಮನವರಿಕೆ ಮಾಡಿದ್ದಾರೆ ಎಂದು ಎನ್‌ಡಿಎ ಮೂಲಗಳು ತಿಳಿಸಿವೆ. ಮೊದಲ ಹಂತದ ಚುನಾವಣೆಯ ನಂತರ ರಾಜ್ಯ ಆಡಳಿತದ ಕೆಲವು ಉನ್ನತ ಅಧಿಕಾರಿಗಳೊಂದಿಗೆ ನಿತೀಶ್ ಅವರು ಮುಚ್ಚಿದ ಬಾಗಿಲಿನ ಸಭೆ ನಡೆಸಿದ ನಂತರ, ಎನ್‌ಡಿಎ ಅಧಿಕಾರಕ್ಕೆ ಮರಳಿದರೆ ನಿತೀಶ್ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂಬ ಬಿಜೆಪಿಯ ಸ್ಪಷ್ಟೀಕರಣವು ಮಹತ್ವದ್ದಾಗಿದೆ.
ನಿತೀಶ್ ಕುಮಾರ್ ಅವರ ಆರೋಗ್ಯದ ಬಗ್ಗೆ ಕಳವಳ
ನಿತೀಶ್ ಕುಮಾರ್ ಅವರ ಆರೋಗ್ಯದ ಬಗ್ಗೆ ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸುತ್ತಿರುವುದರಿಂದ, ಬಿಹಾರ ಮುಖ್ಯಮಂತ್ರಿ ದಿನಕ್ಕೆ 250 ಕಿಲೋಮೀಟರ್ ಪ್ರಯಾಣಿಸುತ್ತಿದ್ದಾರೆ ಎಂದು ಪ್ರಧಾನ್ ಹೇಳಿದ್ದಾರೆ. ಯಾರೊಬ್ಬರ ಆರೋಗ್ಯವನ್ನು ನಿರ್ಣಯಿಸುವಲ್ಲಿ ವಯಸ್ಸು ಒಂದು ಅಂಶವಾಗಿರಲು ಸಾಧ್ಯವಿಲ್ಲ ಎಂದು ಹೇಳಿದರು. ನಿತೀಶ್ ಕುಮಾರ್ ಅವರ ಆರೋಗ್ಯದ ವಿಷಯದಲ್ಲಿ, ಅವರು ಪ್ರತಿದಿನ 250 ಕಿ.ಮೀ ಪ್ರಯಾಣಿಸುತ್ತಿದ್ದಾರೆ. ಕಳೆದ ಎರಡು ತಿಂಗಳುಗಳಲ್ಲಿ, ನಾನು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಕಳೆದ 20-25 ವರ್ಷಗಳಿಂದ ನಾನು ಅವರನ್ನು ಬಲ್ಲೆ, ಮತ್ತು ನನಗೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಒಬ್ಬರ ವಯಸ್ಸಿನ ಆಧಾರದ ಮೇಲೆ ನಾವು ಅವರ ಆರೋಗ್ಯವನ್ನು ಹೇಗೆ ನಿರ್ಣಯಿಸಬಹುದು? ಎಂದು ಪ್ರಶ್ನಿಸಿದರು.
ಯಾರಿಗೆ ಗೆಲುವು?
ಮತದಾನ ಮುಗಿಯುತ್ತಲೇ ಸಂಜೆ 5 ಗಂಟೆ ಬಳಿಕ ಚುನಾವಣಾಪೂರ್ವ ಸಮೀಕ್ಷೆಗಳು ಪ್ರಕಟವಾಗಲಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ- ಜೆಡಿಯು ಮೈತ್ರಿಯ ಎನ್‌ಡಿಎ ಕೂಟಕ್ಕೆ ಸ್ಪಷ್ಟ ಬಹುಮತದ ಸುಳಿವು ನೀಡಿವೆ. 243 ಕ್ಷೇತ್ರಗಳ ಪೈಕಿ ಎನ್‌ಡಿಎ ಕೂಟವು 153-164 ಸ್ಥಾನಗಳನ್ನು, ಇಂಡಿಯಾ ಕೂಟ (ಮಹಾಘಠಬಂಧನ) 76-87 ಸ್ಥಾನಗಳನ್ನು ಬಾಚಿಕೊಳ್ಳಲಿದೆ ಎಂದು ಐಎಎನ್‌ಎಸ್-ಮ್ಯಾಟ್ರಿಕ್ಸ್ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಹೇಳಿತ್ತು. 243 ಕ್ಷೇತ್ರಗಳಲ್ಲಿ ಆಡಳಿತ ನಡೆಸಲು 122 ಕ್ಷೇತ್ರಗಳ ಬಹುಮತ ಅಗತ್ಯವಿದೆ.












Click it and Unblock the Notifications