ರಕ್ಷಣಾ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ನಿರ್ಮಲಾ
ರಕ್ಷಣಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅಧಿಕಾರ ಸ್ವೀಕಾರ. ಇತ್ತೀಚೆಗೆ ನಡೆದಿದ್ದ ಕೇಂದ್ರ ಸಂಪುಟ ಪುನರಾಚನೆ ವೇಳೆ ರಕ್ಷಣಾ ಸಚಿವೆಯಾಗಿ ನೇಮಕಗೊಂಡಿದ್ದ ನಿರ್ಮಲಾ.
ನವದೆಹಲಿ, ಸೆಪ್ಟೆಂಬರ್ 7: ಇತ್ತೀಚೆಗಷ್ಟೇ, ರಕ್ಷಣಾ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಕರ್ನಾಟಕದ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
ರಕ್ಷಣಾ ಸಚಿವರ ಕಾರ್ಯಾಲಯದಲ್ಲಿರುವ ತಮ್ಮ ಕೊಠಡಿಯಲ್ಲಿ ನಡೆದ ಸರಳ ಪೂಜಾ ಸಮಾರಂಭದ ನಂತರ ಅವರು ಪದಗ್ರಹಣ ಮಾಡಿದರು. ಈ ಸಂದರ್ಭದಲ್ಲಿ ಪುರೋಹಿತರಿಂದ ಅವರು ಆಶೀರ್ವಾದ ಪಡೆದರು. ಈ ಮೊದಲು ಕೈಗಾರಿಕಾ ಇಲಾಖೆಯ ರಾಜ್ಯ ಸಚಿವರಾಗಿದ್ದ ನಿರ್ಮಲಾ ಅವರಿಗೆ ಇತ್ತೀಚೆಗೆ ನಡೆದ ಮೋದಿ ಅವರ ಸಂಪುಟ ಪುನರಾಚನೆ ವೇಳೆ ಕ್ಯಾಬಿನೆಟ್ ದರ್ಜೆ ನೀಡಿ, ಅವರನ್ನು ರಕ್ಷಣಾ ಇಲಾಖೆಯ ಸಚಿವೆಯನ್ನಾಗಿ ನೇಮಿಸಲಾಗಿತ್ತು.
ಸೆಪ್ಟೆಂಬರ್ 2ರಂದು ನಡೆದಿದ್ದ ನೂತನ ಸಚಿವರ ಪ್ರಮಾಣ ವಚನ ನಡೆದಿತ್ತು. ಅದರ ಮರುದಿನವೇ ಅವರು ಪದಗ್ರಹಣ ಗ್ರಹಣ ಮಾಡಬೇಕಿತ್ತಾದರೂ, ಆ ವೇಳೆ ರಕ್ಷಣಾ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಜಪಾನ್ ಪ್ರವಾಸದಲ್ಲಿದ್ದರು. ಹೀಗಾಗಿ, ಅವರು ಹಿಂದಿರುಗಿ ಅಧಿಕಾರ ಹಸ್ತಾಂತರದ ಪ್ರಕ್ರಿಯೆ ನಡೆಸಿಕೊಡುವವರೆಗೂ ನಿರ್ಮಲಾ ಸೀತಾರಾಮನ್ ಅವರು ಕಾಯಬೇಕಾಯಿತು.

ಮೊದಲ ಹೇಳಿಕೆ
ಗುರುವಾರ (ಸೆಪ್ಟೆಂಬರ್ 7) ಅಧಿಕಾರ ಸ್ವೀಕರಿಸಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮನ್ನು ಇಂಥ ಮಹತ್ವದ ಹುದ್ದೆಗೆ ಆಯ್ಕೆ ಮಾಡಿದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದರು.

ಸೇನೆ ಸಬಲತೆಗೆ ನಿರ್ಧಾರ
ಪ್ರಧಾನಿಯವರು ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದಾಗಿ ತಿಳಿಸಿದ ಅವರು, ತಮ್ಮ ಮೊದಲ ಆದ್ಯತೆಯು ಸೇನೆಯನ್ನು ಬಲಪಡಿಸುವುದೇ ಆಗಿದೆ ಎಂದರು.

ಪಾರಿಕ್ಕರ್ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನ
ಮನೋಹರ್ ಪಾರಿಕ್ಕರ್ ಅವರು ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಅವರು ನಿಭಾಯಿಸುತ್ತಿದ್ದ ರಕ್ಷಣಾ ಇಲಾಖೆಯು ಅರುಣ್ ಜೇಟ್ಲಿ ಅವರ ಪಾಲಾಗಿತ್ತು.

ಮೊದಲ ಪೂರ್ಣ ಪ್ರಮಾಣದ ರಕ್ಷಣಾ ಸಚಿವೆ
ನಿರ್ಮಲಾ ಸೀತಾರಾಮನ್ ಅವರು ದೇಶದ ಮೊದಲ ಪೂರ್ಣ ಪ್ರಮಾಣದ ಮಹಿಳಾ ರಕ್ಷಣಾ ಸಚಿವೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಈ ಹಿಂದೆ, ಇಂದಿರಾ ಗಾಂಧಿಯವರು ರಕ್ಷಣಾ ಇಲಾಖೆಯನ್ನು ನಿಭಾಯಿಸಿದ್ದರೂ ಅದು ಅವರಿಗೆ ಹೆಚ್ಚುವರಿ ಜವಾಬ್ದಾರಿಯಾಗಿತ್ತು.












Click it and Unblock the Notifications