Nipah virus; ಕೇರಳದ 3 ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ
ತಿರುವನಂತಪುರಂ, ಸೆಪ್ಟೆಂಬರ್ 13; ಕೇರಳದ ಕೊಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ ಸೋಂಕು ಪತ್ತೆಯಾಗಿದೆ. ಇಬ್ಬರು ಮೃತಪಟ್ಟಿರುವುದು ಖಚಿತವಾಗುತ್ತಿದ್ದಂತೆಯೇ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸಹ ಮುನ್ನೆಚ್ಚರಿಕೆ ಘೋಷಣೆ ಮಾಡಲಾಗಿದೆ.
ಕೇರಳ ರಾಜ್ಯದ ಆರೋಗ್ಯ ಇಲಾಖೆ ಮೂರು ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ ಮಾಡಿದೆ. ಕಣ್ಣೂರು, ವಯನಾಡು ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಘೋಷಿಸಲಾಗಿದೆ. ಇತ್ತ ಕರ್ನಾಟಕ, ಕೇರಳ ಗಡಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ.

ರಾಜ್ಯದ ಆರೋಗ್ಯ ಸಚಿವ ವೀಣಾ ಜಾರ್ಜ್ ಮಾತನಾಡಿ, "ಆರೋಗ್ಯ ಇಲಾಖೆ ಐಸಿಎಂಆರ್ ಸಂಪರ್ಕಿಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ನಿಫಾ ವೈರಸ್ ಸೋಂಕಿತರಿಗೆ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳು ಲಭ್ಯವಿದೆ ಎಂದು ಮಾಹಿತಿ ನೀಡಲಾಗಿದೆ" ಎಂದರು.
"ಕೊಯಿಕ್ಕೋಡ್ ಜಿಲ್ಲೆಯಲ್ಲಿಯೇ ಎರಡು ನಿಫಾ ವೈರಸ್ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಲಾಗಿದೆ. ಕಂಟಾಮಿನೇಟೆಡ್ ಝೋನ್ ಘೋಷಣೆ ಮಾಡುವ ಕುರಿತು ಸಹ ಅವರಿಗೆ ಸೂಚನೆಗಳನ್ನು ನೀಡಲಾಗಿದೆ" ಎಂದು ಆರೋಗ್ಯ ಸಚಿವೆ ಮಾಹಿತಿ ನೀಡಿದರು.
ಸಂಪರ್ಕಿತರ ಮಾಹಿತಿ ಸಂಗ್ರಹ; ಎರಡು ಪ್ರಕರಣಗಳಲ್ಲಿ ರೋಗಿಗಳ ರಕ್ತದ ಮಾದರಿಗಳನ್ನು ಸಂಗ್ರಹ ಮಾಡಿ ಪುಣೆಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಕೇರಳದ ಆರೋಗ್ಯ ಇಲಾಖೆ ಸೋಂಕು ಪತ್ತೆಯಾದವರ ಜೊತೆ ಸಂಪರ್ಕದಲ್ಲಿ ಇದ್ದವರ ಮಾಹಿತಿಯನ್ನು ಸಂಗ್ರಹ ಮಾಡುತ್ತಿದ್ದು, ಅವರ ಆರೋಗ್ಯದ ಮೇಲೆ ಗಮನವಹಿಸಲು ಸೂಚಿಸಿದೆ.
ಕೊಯಿಕ್ಕೋಡ್ ಜಿಲ್ಲೆಗೆ ಕಂದಾಯ ಸಚಿವರು, ಆರೋಗ್ಯ ಸಚಿವರು ಮಂಗಳವಾರ ಭೇಟಿ ನೀಡಿದ್ದರು. ಜಿಲ್ಲಾಡಳಿತದ ಜೊತೆ ಸಚಿವೆ ವೀಣಾ ಜಾರ್ಜ್ ತಡರಾತ್ರಿ ಸಭೆಯನ್ನು ನಡೆಸಿದ್ದು, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಕೇರಳ ಸರ್ಕಾರದ ಮಾಹಿತಿಯಂತೆ ನಿಫಾ ವೈರಸ್ ಕಂಟ್ರೋಲ್ ರೂಂ ಆರಂಭಿಸಲಾಗಿದೆ. ಕೊಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸಹ ಸಚಿವರ ವೀಣಾ ಚಾರ್ಜ್ ಭೇಟಿ ನೀಡಿದ್ದು, ಚಿಕಿತ್ಸೆಗೆ ಮಾಡಿಕೊಂಡಿರುವ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ರೋಗಿಗಳಿಗೆ ಅಗತ್ಯವಿರುವ ಪಿಪಿಇ ಕಿಟ್, ಎನ್ 95 ಮಾಸ್ಕ್, ವೈದ್ಯಕೀಯ ಸಿಬ್ಭಂದಿಗಳಿಗೆ ಅಗತ್ಯವಿರುವ ಸೌಲಭ್ಯಗಳು ಮುಂತಾದವುಗಳ ಕುರಿತು ಕಾಲೇಜಿನ ಅಧಿಕಾರಿಗಳಿಂದ ಮಾಹಿತಿ ಪಡೆದರು. ರೋಗಿಗಳಿಗೆ ಚಿಕಿತ್ಸೆ ನೀಡಲು ಎಷ್ಟು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ? ಎಂದು ಸಹ ಅಧಿಕಾರಿಗಳ ಜೊತೆ ಚರ್ಚಿಸಿದರು.
ಕೊಯಿಕ್ಕೋಡ್ ಜಿಲ್ಲಾಧಿಕಾರಿಗಳು ನಿಫಾ ವೈರಸ್ ಸೋಂಕು ಪತ್ತೆಯಾದ ಗ್ರಾಮ ಪಂಚಾಯಿಯ ವಾರ್ಡ್‌ಗಳನ್ನು ಕಂಟಾಮಿನೇಟೆಡ್ ಝೋನ್ ಎಂದು ಘೋಷಣೆ ಮಾಡಿದ್ದಾರೆ. ಕೊಯಿಕ್ಕೋಡ್ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಇಬ್ಬರು ನಿಫಾ ವೈರಸ್ ಸೋಂಕಿತರು ಸಾವನ್ನಪ್ಪಿದ್ದಾರೆ, ಆರೋಗ್ಯ ಸಚಿವರ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಎರಡು ಸಕ್ರಿಯ ಪ್ರಕರಣಗಳಿವೆ.
ಕೇಂದ್ರ ಆರೋಗ್ಯ ಸಚಿವಾಲಯ ತಜ್ಞರ ಎರಡು ತಂಡಗಳನ್ನು ಕೇರಳಕ್ಕೆ ಕಳಿಸಿದೆ. ಈ ಹಿಂದೆಯೇ ಕೇರಳದಲ್ಲಿ ನಿಫಾ ವೈರಸ್ ಕಂಡುಬಂದಿತ್ತು. 2018 ಮತ್ತು 2021ರಲ್ಲಿ ರಾಜ್ಯದಲ್ಲಿ ಸೋಂಕು ಪತ್ತೆಯಾಗಿತ್ತು. ಹಕ್ಕಿಗಳ ಮೂಲಕ ಈ ವೈರಸ್ ಮನುಷ್ಯರಿಗೆ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ದಕ್ಷಿಣ ಕನ್ನಡದಲ್ಲಿ ಅಲರ್ಟ್; ಕೇರಳದ ಕೊಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಕೇರಳ ಕರ್ನಾಟಕ ಗಡಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ದಿನ ಸಾವಿರಾರು ಜನರು ಎರಡೂ ರಾಜ್ಯಗಳ ನಡುವೆ ಸಂಚಾರ ನಡೆಸುತ್ತಾರೆ.
ಸೋಂಕು ಹರಡದಂತೆ ತಡೆಯಲು ನಾವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಬುಧವಾರ ರಾಜ್ಯದ ಆರೋಗ್ಯ ಇಲಾಖೆ ಈ ಕುರಿತು ಮಾರ್ಗಸೂಚಿ ಪ್ರಕಟಿಸುವ ನಿರೀಕ್ಷೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಹೇಳಿದೆ.
ನಿಫಾ ವೈರಸ್ ಸೋಂಕು ಪತ್ತೆಯಾದರೆ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಜನರು ಆತಂಕಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.












Click it and Unblock the Notifications