ಶೀಘ್ರವೇ ನೀರಾ ರಾಡಿಯಾ ಟೇಪ್ಸ್ ರಹಸ್ಯ ಬಹಿರಂಗ
ನವದೆಹಲಿ, ಅ.17: ಬಹುಕೋಟಿ 2ಜಿ ತರಂಗಗುಚ್ಛ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾ ಟೇಪ್ಸ್ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ.
ರಾಡಿಯಾ ಟೇಪ್ಸ್ ನಲ್ಲಿರುವ ಸತ್ಯಾಸತ್ಯತೆಗಳನ್ನು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ನ ನ್ಯಾಯಪೀಠದ ನೇತೃತ್ವ ವಹಿಸಿರುವ ನ್ಯಾಯಾಧೀಶ ಜಿ.ಎಸ್ ಸಾಂಘ್ವಿ ಅವರು ಸಿಬಿಐಗೆ ಆದೇಶ ನೀಡಿದ್ದಾರೆ.
ಪ್ರಸ್ತುತ ತನಿಖೆಯ ವರದಿ ಸಲ್ಲಿಸಲು 2 ತಿಂಗಳುಗಳ ಕಾಲಾವಧಿ ನೀಡಿದ್ದು, ಡಿಸೆಂಬರ್ 17ರೊಳಗೆ ತನಿಖಾವರದಿ ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.
2ಜಿ ತರಂಗ ಗುಚ್ಛ ಹಗರಣಕ್ಕೆ ಸಂಬಂಧಿಸಿದಂತೆ ಲಾಬಿಗಾರ್ತಿ ನೀರಾ ರಾಡಿಯಾ ಅವರ ಸಂಭಾಷಣೆವುಳ್ಳ ದಾಖಲೆಗಳು ಸೋರಿಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಈ ಹಿಂದೆ ಸ್ಪಷ್ಟಪಡಿಸಿತ್ತು.
2ಜಿ ಹಗರಣಕ್ಕೆ ಸಂಬಂಧಿಸಿದಂತೆ ನೀರಾ ರಾಡಿಯಾ ಟೇಪ್ಸ್ ಎಲ್ಲವೂ ತಿರುಚಲಾಗಿದೆ ಎಂದು ಸುಪ್ರೀಂಕೋರ್ಟ್ ಗೆ ಯುಪಿಎ ಸರ್ಕಾರ ಹೇಳಿಕೆ ನೀಡಿತ್ತು. ಆದರೆ, ಸರ್ಕಾರದ ಹೇಳಿಕೆ ಮುಳುವಾಗಿ ಪರಿಣಮಿಸಿತ್ತು

ಏನಿದು ರಾಡಿಯಾ ಟೇಪ್ಸ್ ?: 2 ಜಿ ತರಂಗಾಂತರಂಗ ಹಂಚಿಕೆಯಲ್ಲಿ ನೀರಾ ರಾಡಿಯಾ, ವೃತ್ತಿಪರ ಲಾಬಿಗಾರರು, ರಾಜಕಾರಣಿಗಳು ಮತ್ತು ಪತ್ರಕರ್ತರ ನಡುವಿನ ದೂರವಾಣಿ ಸಂಭಾಷಣೆಯನ್ನು 2008-09ರಲ್ಲಿ ಭಾರತೀಯ ಆದಾಯ ತೆರಿಗೆ ಇಲಾಖೆಯು ಧ್ವನಿಮುದ್ರಣ ಮಾಡಿ ಬಿಡುಗಡೆ ಮಾಡಿರುವುದೇ ರಾಡಿಯಾ ಟೇಪ್ಸ್. ಸಿಬಿಐ ತಂಡ 5,851 ಧ್ವನಿಮುದ್ರಿಕೆಗಳು ಹಾಗೂ 82,665 ಪುಟಗಳಷ್ಟು ಮಾಹಿತಿಗಳೊಂದಿಗೆ ರಾಡಿಯಾ ವಿರುದ್ಧ ತನಿಖೆ ಆರಂಭಿಸಿತ್ತು.
ರಾಡಿಯಾ ಟೇಪ್ಸ್ ಕಥೆ : ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ಆದಾಯ ತೆರಿಗೆ ಇಲಾಖೆ ಸುಮಾರು 300ದಿನಗಳ ಕಾಲ ರಾಡಿಯಾ ಅವರ ಫೋನ್ ಟ್ಯಾಪ್ ಮಾಡಿತು. ಆಕೆಯ ಕಂಪೆನಿ ಮೇಲೆ ತೆರಿಗೆ ವಂಚನೆ, ಅಕ್ರಮ ವ್ಯವಹಾರದ ಆರೋಪ ಹೊರೆಸಿ Bhadas4media ಎಂಬ ಹಿಂದಿ ಪೋರ್ಟಲ್ 2010ರ ಮೇ ತಿಂಗಳಲ್ಲಿ ವರದಿ ಮಾಡಿತ್ತು.
ನವೆಂಬರ್ ನಲ್ಲಿ ಓಪನ್ ಮ್ಯಾಗಜೀನ್ ರಾಡಿಯಾ ಟೇಪ್ಸ್ ಬಗ್ಗೆ ವಿಸ್ತೃತ ವರದಿ ನೀಡಿತು. ನಂತರ ಔಟ್ ಲುಕ್, ಡಿಎನ್ ಎ ಕಣಕ್ಕಿಳಿದವು. 2ಜಿ ಹಗರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳು, ಪತ್ರಕರ್ತರು, ಅಧಿಕಾರಿಗಳು ಸೇರಿದಂತೆ ಹತ್ತು ಹಲವು ಜನರೊಡನೆ ನೀರಾ ನಡೆಸುವ ಮಾತುಕತೆಯ 5,851 ಧ್ವನಿಮುದ್ರಿಕೆಗಳನ್ನು ಸಂಗ್ರಹಿಸಿರುವುದಾಗಿ ಸಿಬಿಐ ಘೋಷಿಸಿತು.
ಇದರಲ್ಲಿ ಎನ್ ಡಿಟಿವಿಯ ಬರ್ಖಾ ದತ್ ಬಳಸಿ ಎ ರಾಜಾರನ್ನು ಟೆಲಿಕಾಂ ಸಚಿವರನ್ನಾಗಿಸಲು ಕಾಂಗ್ರೆಸ್ ಮೇಲೆ ಒತ್ತಡ ಹೇರಿದ್ದರಿಂದ ಹಿಡಿದು 2ಜಿ ತರಂಗಗುಚ್ಛದ ತನಕ ಕಥೆ ಬೆಳೆಯಿತು. ವಿದೇಶಿ ಮಾಧ್ಯಮಗಳು ಭಾರತೀಯ ಪತ್ರಕರ್ತರು ಹಗರಣದಲ್ಲಿ ಪಾಲ್ಗೊಂಡಿರುವ ಬಗ್ಗೆ ವರದಿ ಮಾಡಿದವು. ಹಗರಣದಲ್ಲಿರುವ ಜನರ ಪಟ್ಟಿ ಬೆಳೆಯಿತು.
ಈಗ ಸರ್ಕಾರಿ ಅಧಿಕಾರಿಗಳು ಹಾಗೂ ಉದ್ಯಮಿಗಳ ಜತೆ ನೀರಾ ರಾಡಿಯಾ ನಡೆಸಿರುವ ಸಂಭಾಷಣೆಗಳ ವಿವರಗಳನ್ನು ನೀಡುವಂತೆ ಸಿಬಿಐಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ. [ಇದನ್ನೂ ಓದಿ: ನೀರಾ ರಾಡಿಯಾ ಎಂಬ ಅನಂತ ಶಕ್ತಿಯ ರತುನ]











Click it and Unblock the Notifications