Airport Privatisation: 13 ವಿಮಾನ ನಿಲ್ದಾಣಗಳ ಖಾಸಗೀಕರಣ, ಪಟ್ಟಿ
ನವದೆಹಲಿ, ಫೆಬ್ರವರಿ 25: ಭಾರತ ಸರ್ಕಾರ ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಮತ್ತೆ ಚಾಲನೆ ನೀಡಲಿದೆ. ಈಗಾಗಲೇ ದೇಶದ ಹಲವು ವಿಮಾನಗಳ ನಿರ್ವಹಣೆಯನ್ನು ಅದಾನಿ ಗ್ರೂಪ್‌ನ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್‌ಗೆ ನೀಡಲಾಗಿದೆ. ಕರ್ನಾಟಕದಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಗ್ರೂಪ್ ನೋಡಿಕೊಳ್ಳುತ್ತಿದೆ.
ಆದಾಯ ಸಂಗ್ರಹಕ್ಕಾಗಿ ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಮತ್ತೆ ಚಾಲನೆ ನೀಡಲಾಗಿದೆ. ದೇಶದ 13 ವಿಮಾನ ನಿಲ್ದಾಣಗಳನ್ನು ಈಗ ಖಾಸಗೀಕರಣ ಮಾಡಲು ಮುಂದಾಗಿದ್ದು, 2026ರ ಆರ್ಥಿಕ ವರ್ಷದ ಅಂತ್ಯಕ್ಕೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಗುರಿ ಹಾಕಿಕೊಳ್ಳಲಾಗಿದೆ.

2025-26ನೇ ಸಾಲಿನ ಬಜೆಟ್ ಪೂರ್ವ ಸಭೆಯ ಸಂದರ್ಭದಲ್ಲಿಯೇ ವಿಮಾನ ನಿಲ್ದಾಣದ ಖಾಸಗೀಕರಣದ ಕುರಿತು ಚರ್ಚೆ ನಡೆದಿತ್ತು. ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಸಿದ್ಧಗೊಳಿಸಿ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಲು ತಯಾರಿ ಮಾಡಿಕೊಳ್ಳಲು ಸೂಚನೆ ನೀಡಲಾಗಿತ್ತು.
13 ವಿಮಾನ ನಿಲ್ದಾಣಗಳು ಖಾಸಗೀಕರಣ: ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ವಿಮಾನ ನಿಲ್ದಾಣಗಳ ಖಾಸಗೀಕರಣ ಪ್ರಕ್ರಿಯೆ ಅಂತಿಮಗೊಳಿಸಲು ಉದ್ದೇಶಿಸಲಾಗಿದೆ. ಈ ಕುರಿತು ಈಗ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನವಾಗಬೇಕಿದೆ. ಈಗಾಗಲೇ ಹಣಕಾಸು ಸಚಿವಾಲಯಕ್ಕೆ ಈ ಕುರಿತು ವರದಿ ಸಲ್ಲಿಕೆಯಾಗಿದೆ.
ರಾಷ್ಟ್ರೀಯ ನಗದೀಕರಣ ಯೋಜನೆ (ಎನ್‌ಎಂಪಿ) ಅಡಿ 2022-25ರ ತನಕ 25 ಏರ್‌ಪೋರ್ಟ್ ಖಾಸಗೀಕರಣ ಮಾಡಲು ಉದ್ದೇಶಿಸಲಾಗಿತ್ತು. ನಿಲ್ದಾಣಗಳ ನಿರ್ವಹಣೆ, ಆದಾಯ ಸಂಗ್ರಹದ ಭಾಗವಾಗಿ ಈಗ 13 ನಿಲ್ದಾಣಗಳ ನಿರ್ವಹಣೆಯನ್ನು ಖಾಸಗಿ ಅವರಿಗೆ ವಹಿಸಲು ತೀರ್ಮಾನಿಸಲಾಗಿದೆ.
ಮಾಹಿತಿಗಳ ಪ್ರಕಾರ ಭುವನೇಶ್ವರ, ವಾರಣಾಸಿ, ಅಮೃತಸರ, ತಿರುಚ್ಚಿ, ಇಂಧೋರ್, ಸೂರತ್, ರಾಂಚಿ, ಜೋಧ್‌ಪುರ್, ಚೆನ್ನೈ, ವಿಜಯವಾಡ, ವಡೋದರ, ಭೋಪಾಲ್, ತಿರುಪತಿ, ಹುಬ್ಬಳ್ಳಿ, ಇಂಪಾಲ್, ಅಗರ್‌ತಾಲ, ಉದಯ್‌ಪುರ್, ಡೆಹರಾಡೂನ್, ರಾಜಮಂಡ್ರಿ ವಿಮಾನ ನಿಲ್ದಾಣಗಳನ್ನು ಖಾಸಗೀಕರಣ ಮಾಡುವ ಆಲೋಚನೆ ಇದೆ.
2024ರ ಆಗಸ್ಟ್‌ನಲ್ಲಿ ರಾಜ್ಯಸಭೆಯಲ್ಲಿ ಮಾತನಾಡಿದ್ದ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹಲ್, "ಖಾಸಗಿ ಪಾಲುದಾರರಿಂದ ನಿರ್ವಹಿಸಲ್ಪಡುವ ವಿಮಾನ ನಿಲ್ದಾಣಗಳಲ್ಲಿ ಸುಧಾರಿತ ಮೂಲಸೌಕರ್ಯಗಳ ವ್ಯವಸ್ಥೆ ಇದೆ. ಇದಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಪ್ಪಿಗೆ ನೀಡುತ್ತಿವೆ" ಎಂದು ಹೇಳಿದ್ದರು.
ವಿಮಾನ ನಿಲ್ದಾಣ ಖಾಸಗೀಕರಣದ ಭಾಗವಾಗಿ, ಎಎಐ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ 13 ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಗೆ ಟೆಂಡರ್‌ಗಳನ್ನು ಆಹ್ವಾನಿಸಲು ಯೋಜಿಸಿದೆ. ಇವುಗಳಲ್ಲಿ ಪ್ರಮುಖ ವಿಮಾನ ನಿಲ್ದಾಣಗಳು, ಚಿಕ್ಕ ವಿಮಾನ ನಿಲ್ದಾಣಗಳು ಸೇರಿವೆ.
2024ರಲ್ಲಿ ಕೇಂದ್ರ ಸರ್ಕಾರ ವಿಮಾನ ನಿಲ್ದಾಣಗಳ ಖಾಸಗೀಕರಣದ ಪ್ರಕ್ರಿಯೆಯನ್ನು ವಿಳಂಬ ಮಾಡಿತ್ತು. ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯ ಕಾರಣ ಪ್ರಕ್ರಿಯೆ ನಿಧಾವಾಗಿತ್ತು. 2025ರಲ್ಲಿ ಈ ಪ್ರಕ್ರಿಯೆ ಚುರುಕುಗೊಳಿಸಿ ಅಂತಿಮಗೊಳಿಸಲು ಮುಂದಾಗಿದೆ.
ಸದ್ಯ ದೇಶದಲ್ಲಿ ಅದಾನಿ ಗ್ರೂಪ್ ತ್ರಿವೆಂಡ್ರಮ್, ಮಂಗಳೂರು, ಅಹಮದಾಬಾದ್, ಜೈಪುರ, ಲಕ್ನೋ ಮತ್ತು ಗೌಹಾತಿ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಮಾಡುತ್ತಿದೆ.












Click it and Unblock the Notifications