2024ರ ಲೋಕಸಭೆ ಚುನಾವಣೆ ಗೆಲ್ಲುವುದಕ್ಕೆ ಬಿಜೆಪಿ ಹೀಗೆ ಮಾಡುವುದೇ!?
ನವದೆಹಲಿ, ಸೆಪ್ಟೆಂಬರ್ 7: ಭಾರತದಲ್ಲಿ ಮುಂಬರುವ ಲೋಕಸಭೆ ಚುನಾವಣೆ ಗೆಲುವಿಗೆ ಬಿಜೆಪಿ ತಂತ್ರಗಾರಿಕೆ ಶುರುವಿಟ್ಟುಕೊಂಡಿದೆ. 2024ರ ಚುನಾವಣೆಯು ಎರಡು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಎದುರಾಗಲಿದೆ. ಜನರ ಮನ ಗೆಲ್ಲುವುದಕ್ಕೆ ಬಿಜೆಪಿ ಸ್ಕೆಚ್ ಹಾಕುತ್ತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ಇರುವ ಸಚಿವರಿಗೆ ಹೊಸ ಮಂತ್ರದೊಂದಿಗೆ ಗೆಲುವಿನ ಸೂತ್ರ ಹೇಳಿಕೊಡುವುದಕ್ಕೆ ಬಿಜೆಪಿ ಮೊದಲ ಸಭೆ ಕರೆದಿದೆ. ಈ ಸಭೆಯಲ್ಲಿ ಸಚಿವರಿಗೆ ಹೊಸ ಗುರಿಯತ್ತ ಸಾಗುವಂತೆ ಸೂಚನೆ ನೀಡುವ ಮುನ್ಸೂಚನೆಗಳು ಸಿಕ್ಕಿವೆ.
ಬಿಜೆಪಿಯು ಬಲಾಢ್ಯವಾಗಿರುವ ರಾಜ್ಯಗಳಲ್ಲಿ ತನ್ನ ಬೇರುಗಳನ್ನು ಪ್ರಬಲಗೊಳಿಸುವುದು. ಬಿಜೆಪಿಯು ದುರ್ಬಲವಾಗಿರುವ ರಾಜ್ಯಗಳಲ್ಲಿ ಯಾವ ರೀತಿ ಪಕ್ಷವನ್ನು ಬಲಪಡಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತದೆ. 2024ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಅಗತ್ಯವಾಗಿ ಏನು ಮಾಡಬೇಕಿದೆ ಎಂಬುದರ ಬಗ್ಗೆ ಸಚಿವರ ಜೊತೆಗೆ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರದ ನಾಯಕರು ಸಂವಾದ ನಡೆಸಲಿದ್ದಾರೆ.

ಬಿಜೆಪಿ ಬಲವರ್ಧನೆಗೆ ಸಂಘಟನೆಯೇ ಮೂಲಮಂತ್ರ
ಭಾರತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಬಲವರ್ಧನೆಗೆ ಸಂಘಟನೆಯೇ ಮೂಲಮಂತ್ರವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಪಾಠ ಮಾಡಿದ್ದಾರೆ. ನವದೆಹಲಿಯಲ್ಲಿ ಇತ್ತೀಚಿಗೆ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಜನರಲ್ ಸೆಕ್ರೆಟರಿ ಬಿಎಲ್ ಸಂತೋಷ್ ಹಾಜರಾಗಿದ್ದರು.
ಈ ಸಂಘಟನೆ ದುರ್ಬಲವಾಗಿದ್ದರೆ ಯಾವುದೇ ಪಕ್ಷಕ್ಕೆ ಉಳಿಗಾಲ ಇರುವುದಿಲ್ಲ. ಹೀಗಾಗಿ ಸಚಿವರು ಸಂಘಟನೆಯ ಮೇಲೆ ಕೆಲಸ ಮಾಡುವಂತೆ ಸಚಿವ ಅಮಿತ್ ಶಾ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಇದೇ ವರ್ಷದ ಮೇ ತಿಂಗಳಲ್ಲಿ ಬಿಜೆಪಿಯ ಕೇಂದ್ರೀಯ ನಾಯಕರು ತಾವು ಗೆಲ್ಲುವುದಕ್ಕೆ ಸಾಧ್ಯವಾಗದ ಕ್ಷೇತ್ರಗಳಲ್ಲಿ ಮೂಲ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಮೌಲ್ಯಮಾಪನ ಮಾಡಿದ್ದಾರೆ. ಈ ಕಾರ್ಯವನ್ನು ಕೇಂದ್ರ ಸಚಿವರು ಹಾಗೂ ಸ್ಥಳೀಯ ನಾಯಕರಿಗೆ ವಹಿಸಲಾಗಿತ್ತು.

144 ಲೋಕಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಬಿಜೆಪಿ ನಾಯಕರು
ಕಳೆದ ಬಾರಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ತೀವ್ರ ಹಿನ್ನಡೆ ಅನುಭವಿಸಿದ ಕ್ಷೇತ್ರಗಳ ಮೇಲೆ ಭಾರತೀಯ ಜನತಾ ಪಕ್ಷವು ಕಣ್ಣಿಟ್ಟಿದೆ. ಅಂದು ಪಕ್ಷದ ಸೋಲಿಗೆ ಕಾರಣವಾದ ಅಂಶಗಳೇನು ಎಂಬ ಬಗ್ಗೆ ತಿಳಿದುಕೊಳ್ಳುವ ಜವಾಬ್ದಾರಿಯನ್ನು ಸಚಿವರಿಗೆ ವಹಿಸಲಾಗಿದೆ. ಅಂಥ ಕ್ಷೇತ್ರಗಳಲ್ಲಿ ಕನಿಷ್ಠ 48 ಗಂಟೆಗಳವರೆಗೆ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಮೊದಲ ಸುತ್ತಿನ ಸಭೆಯಲ್ಲಿ 2024ರ ಚುನಾವಣೆಗೆ ಸಿದ್ಧತೆಯ ಬಗ್ಗೆ ಚರ್ಚಿಸಲಾಯಿತು. ಸಂಘಟನೆ ಬಲವರ್ಧನೆಗೆ ಸಚಿವರು ಆದ್ಯತೆ ನೀಡಬೇಕು ಎಂಬ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಾಯಿತು.

ಈ ರಾಜ್ಯಗಳ ಮೇಲೆ ಬಿಜೆಪಿಗರಿಗೆ ಅಪಾರ ಪ್ರೀತಿ!?
ಮುಂಬರುವ ಲೋಕಸಭೆ ಚುನಾವಣೆ ಗೆಲ್ಲುವುದಕ್ಕೆ ಈ ರಾಜ್ಯಗಳ ಮೇಲೆ ಬಿಜೆಪಿ ಅಪಾರ ಪ್ರೀತಿ ತೋರಿಸುತ್ತಿದೆ. ಏಕೆಂದರೆ ಬಿಜೆಪಿ ಸೋಲು ಕಂಡಿರುವ 144 ಕ್ಷೇತ್ರಗಳ ಪೈಕಿ ಅತಿಹೆಚ್ಚು ಕ್ಷೇತ್ರಗಳು ಇದೇ ರಾಜ್ಯಗಳಲ್ಲಿವೆ. ಹೀಗಾಗಿ ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ, ತಮಿಳುನಾಡು ಮತ್ತು ಕೇರಳದ ಮೇಲೆ ಹೆಚ್ಚಿನ ಲಕ್ಷ್ಯ ವಹಿಸಲಾಗುತ್ತಿದೆ. ವಿವಿಧ ಕ್ಲಸ್ಟರ್‌ಗಳಾಗಿ ವಿಂಗಡಿಸಿರುವ ಕೇಂದ್ರ ನಾಯಕರು, ಸಚಿವರಿಗೆ ತಲಾ ಒಂದು ಕ್ಲಸ್ಟರ್‌ನ ಉಸ್ತುವಾರಿಯನ್ನು ನೀಡಿದ್ದಾರೆ.
ಈ ಕಸರತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಎಸ್ ಜೈಶಂಕರ್, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್, ಸ್ಮೃತಿ ಇರಾನಿ, ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಅನುರಾಗ್ ಠಾಕೂರ್ ಭಾಗಿ ಆಗಲಿದ್ದಾರೆ.

73,000 ಬೂತ್‌ಗಳಲ್ಲಿ ಹಿಡಿತ ಸಾಧಿಸಲು ಯೋಜನೆ
ದೇಶಾದ್ಯಂತ 73,000 ಬೂತ್‌ಗಳಲ್ಲಿ ಬಿಜೆಪಿಯು ತನ್ನ ಹಿಡಿತವನ್ನು ಬಲಪಡಿಸುವ ಉದ್ದೇಶದಿಂದ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗುತ್ತಿದೆ. ಬೂತ್ ಮಟ್ಟದಲ್ಲಿ ವಸ್ತುಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಈಗಾಗಲೇ ಮಾಹಿತಿ ಕಲೆ ಹಾಕಲಾಗಿದೆ. ಸಮಿತಿಯ ಸದಸ್ಯರಿಂದ ಸಚಿವರು ಸಹ ಮಾಹಿತಿ ಸಂಗ್ರಹಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ಅಂತಿಮ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.












Click it and Unblock the Notifications