ಮರಣೋತ್ತರ ಪರೀಕ್ಷೆಗೆ ಕೇಂದ್ರದಿಂದ ಹೊಸ ನಿಯಮ: ನವೆಂಬರ್ 15ರಿಂದ ಜಾರಿ
ನವದೆಹಲಿ ನವೆಂಬರ್ 15: ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲಾ ಒಂದು ಬದಲಾವಣೆಗಳನ್ನು ಜಾರಿಗೆ ತರುತ್ತಲೇ ಇದೆ. ಸದ್ಯ ಮರಣೋತ್ತರ ಪರೀಕ್ಷೆಯಲ್ಲಿಯೂ ಹೊಸ ನಿಯಮವನ್ನು ಜಾರಿಗೆ ತರುವ ಮೂಲಕ ಜನರಿಗೆ ನೆರವಾಗಿದೆ. ಮರಣೋತ್ತರ ಪರೀಕ್ಷೆಯ ಸಮಯವನ್ನು ವಿಸ್ತರಿಸುವ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಹಿಂದೆ ಸೂರ್ಯನ ಬೆಳಕಿನಲ್ಲಿ ಮಾತ್ರ ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶವಿತ್ತು. ಸದ್ಯ ಸೂರ್ಯಾಸ್ತದ ನಂತರ ಮರಣೋತ್ತರ ಪರೀಕ್ಷೆಯನ್ನು ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ಸಂಜೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಇದರಿಂದ ಮೃತರ ಕುಟುಂಬಗಳಿಗೆ ಮೃತದೇಹಗಳನ್ನು ಬಹುಬೇಗನೆ ನೀಡಲು ಹಾಗೂ ಅಂಗಾಂಗ ದಾನಕ್ಕೆ ಸುಲಭವಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸಾಕಷ್ಟು ಮೂಲಸೌಕರ್ಯಗಳೊಂದಿಗೆ ಸೂರ್ಯಾಸ್ತದ ನಂತರ ಮರಣೋತ್ತರ ಪರೀಕ್ಷೆಯನ್ನು ನಡೆಸಲು ಕೇಂದ್ರ ಸರ್ಕಾರವು ಈಗ ಅನುಮತಿ ನೀಡುತ್ತದೆ. ಸರ್ಕಾರದ ಪ್ರಕ್ರಿಯೆಗಳ ಅನುಸರಣೆಯಿಂದಾಗಿ ವಿಧಿಸಲಾದ ಹೊರೆಯನ್ನು ಕಡಿಮೆ ಮಾಡುವ ಮೂಲಕ ಜೀವನವನ್ನು ಸುಲಭಗೊಳಿಸಲು ಈ ನಿರ್ಧಾರವನ್ನು ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ಸಂಜೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ನಿಗದಿತ ಸಮಯದ ಚೌಕಟ್ಟಿನೊಳಗೆ ಅಂಗಾಂಗ ದಾನ ಪ್ರಕ್ರಿಯೆಯನ್ನು ಸುಗಮಗೊಳಿಸುವ ಮತ್ತು ಅಂಗಾಂಗ ದಾನವನ್ನು ಉತ್ತೇಜಿಸುವ ಜೊತೆಗೆ ಮೃತರ ಶೋಕದಲ್ಲಿರುವವರಿಗೆ ಅನುಕೂಲವಾಗುವಂತೆ ಬದಲಾವಣೆಗಳನ್ನು 2021 ನವೆಂಬರ್ 15ರಿಂದ ಜಾರಿಗೊಳಿಸಲಾಗಿದೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(Union Health Ministry), ಆರೋಗ್ಯ ಸೇವೆ ಮಹಾನಿರ್ದೇಶನಾಲಯ, ತಾಂತ್ರಿಕ ಸಮಿತಿ ನಡೆಸಿದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ತಂತ್ರಜ್ಞಾನದಲ್ಲಿ ತ್ವರಿತ ಪ್ರಗತಿ, ಸುಧಾರಣೆಯಿಂದ ಇದೀಗ ರಾತ್ರಿಯಲ್ಲೂ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಿದೆ. ಹಲವು ಸಂಸ್ಥೆಗಳು ರಾತ್ರಿಯಲ್ಲಿ ಮರಣೋತ್ತರ ಪರೀಕ್ಷೆ ಯಶಸ್ವಿಯಾಗಿ ನಡೆಸುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸುವ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ, ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಮರಣೋತ್ತರ ಪರೀಕ್ಷೆಯನ್ನು ತ್ವರಿತವಾಗಿ ಮಾಡಲು ಸಾಧ್ಯವಿದೆ. ಇದರ ಜೊತೆಗೆ ಮೃತದೇಹ ಸ್ವೀಕರಿಸುವ ಕುಟುಂಬಕ್ಕೆ ಶೀಘ್ರದಲ್ಲೇ ಮೃತದೇಹ ಸಿಗಲಿದೆ. ಇತ್ತ ಅಂಗಾಂಗ ದಾನವೂ ತಕ್ಕ ಸಮಯದಲ್ಲಿ ನಡೆಯಲಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ.
ಅಂಗಾಂಗ ದಾನದ ಮರಣೋತ್ತರ ಪರೀಕ್ಷೆಯನ್ನು ಆದ್ಯತೆಯ ಮೇಲೆ ತೆಗೆದುಕೊಳ್ಳಬೇಕು ಮತ್ತು ನಿಯಮಿತವಾಗಿ ಅಂಥ ಮರಣೋತ್ತರ ಪರೀಕ್ಷೆಯನ್ನು ನಡೆಸಲು ಮೂಲಸೌಕರ್ಯವನ್ನು ಹೊಂದಿರುವ ಆಸ್ಪತ್ರೆಗಳಲ್ಲಿ ಸೂರ್ಯಾಸ್ತದ ನಂತರವೂ ನಡೆಸಬೇಕು.
ಕಾರ್ಯವಿಧಾನವನ್ನು ನಡೆಸುವ ಮೂಲಸೌಕರ್ಯದ ಲಭ್ಯತೆ ಮತ್ತು ಸಮರ್ಪಕತೆಯನ್ನು ಆಸ್ಪತ್ರೆಯ ವೈದ್ಯಧಿಕಾರಿಗಳು ನಿರ್ಣಯಿಸುತ್ತಾರೆ. ರಾತ್ರಿಯಲ್ಲಿ ನಡೆಸಿದ ಎಲ್ಲಾ ಕಾರ್ಯವಿಧಾನಗಳ ವಿಡಿಯೋ ರೆಕಾರ್ಡಿಂಗ್ ಅನ್ನು ಸಹ ಸರ್ಕಾರವು ಕಡ್ಡಾಯಗೊಳಿಸಿದೆ. ಇದು ಭವಿಷ್ಯದ ದಾಖಲೆಗಳಿಗಾಗಿ ಅತ್ಯವಶ್ಯವಾಗಿದೆ ಎಂದು ಕೇಂದ್ರ ತಿಳಿಸಿದೆ.
ರಾತ್ರಿ ಹೊತ್ತು ನರಹತ್ಯೆ, ಆತ್ಮಹತ್ಯೆ, ಅತ್ಯಾಚಾರ, ಕೊಳೆತ ದೇಹಗಳು, ಶಂಕಿತ ಫೌಲ್ ಪ್ಲೇ ಮುಂತಾದ ವಿಭಾಗಗಳ ಅಡಿಯಲ್ಲಿ ಬರುವ ಪ್ರಕರಣಗಳನ್ನು ಅಧಿಸೂಚನೆಯಿಂದ(ಮರಣೋತ್ತರ ಪರೀಕ್ಷೆ ಮಾಡದಂತೆ) ಹೊರಗಿಡಲಾಗಿದೆ. ಇಂಥಹ ಪ್ರಕರಣಗಳನ್ನು ಅಧಿಕಾರದಲ್ಲಿರುವ ಅಧಿಕಾರಿಗಳು ಸೂಚಿಸದ ಹೊರತು ರಾತ್ರಿ ಸಮಯದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುವುದಿಲ್ಲ. ಈ ಹಿಂದೆ ಮರಣೋತ್ತರ ಪರೀಕ್ಷೆಗಳಿಗಾಗಿ ಗಂಟೆಗಟ್ಟಲೆ ಕಾಯುವ ವ್ಯವಸ್ಥೆಯ ಬಗ್ಗೆ ದೂರುಗಳಿದ್ದವು. ಇದರಿಂದಾಗಿ ಅಂಗಾಂಗ ದಾನಗಳಿಗೂ ತೊಂದರೆಯುಂಟಾಗುತ್ತಿದ್ದರ ಬಗ್ಗೆ ಆರೋಪಗಳಿದ್ದವು. ಸದ್ಯ ಕೇಂದ್ರ ಸರ್ಕಾರ ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮರಣೋತ್ತರ ಪರೀಕ್ಷೆಗಳನ್ನು ಸೂರ್ಯಾಸ್ತದ ಬಳಿಕವೂ ಮಾಡಲು ಅನುಮತಿ ನೀಡಿದೆ.