ಈ ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ: ಮಾಹಿತಿ ಇಲ್ಲಿದೆ
Governors Appoint: ಕೇಂದ್ರ ಸರ್ಕಾರದ ಆದೇಶದ ಮೇರೆಗೆ ದೇಶದ ಈ ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಯಾವ್ಯಾವ ರಾಜ್ಯಗಳಿಗೆ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕರ್ನಾಟಕದ ಮಾಜಿ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಸಿ.ಎಚ್.ವಿಜಯಶಂಕರ್ ಅವರಿಗೆ ರಾಜ್ಯಪಾಲರ ಹುದ್ದೆ ನೀಡಲಾಗಿದ್ದು, ಅವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆರು ಹಿರಿಯ ನಾಯಕರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದಾರೆ.

ನೂತನ ರಾಜ್ಯಪಾಲರ ವಿವರ
* ಮೇಘಾಲಯ - ಕರ್ನಾಟಕದ ಸಿ.ಎಚ್.ವಿಜಯಶಂಕರ್
* ಪುದುಚೇರಿ - ಕೆ. ಕೈಲಾಸನಾಥನ್
* ಜಾರ್ಖಂಡ್ - ಸಂತೋಷ್ ಕುಮಾರ್ ಗಂಗ್ವಾರ್
* ರಾಜಸ್ಥಾನ - ಹರಿಭಾವು ಬಾಗಡೆ
* ತೆಲಂಗಾಣ - ಜಿಷ್ಣು ದೇವ್ ವರ್ಮಾ
* ಛತ್ತೀಸಗಢ - ರಮೆನ್ ದೇಕಾ
* ಅಸ್ಸಾಂ ಮಣಿಪುರ - ಲಕ್ಷ್ಮಣ್ ಪ್ರಸಾದ್ ಆಚಾರ್ಯ
* ಪಂಜಾಬ್ - ಗುಲಾಬ್ ಚಂದ್ ಕಟಾರಿಯಾ
* ಮಹಾರಾಷ್ಟ್ರ - ಸಿ.ಪಿ.ರಾಧಾಕೃಷ್ಣನ್
ತ್ರಿಪುರದ ಮಾಜಿ ಸಿಎಂ ಜಿಷ್ಣು ದೇವ್ ವರ್ಮಾ, ಮಹಾರಾಷ್ಟ್ರದ ಮಾಜಿ ಸ್ಪೀಕರ್ ಹರಿಭಾವು ಬಾಗಡೆ, ಕೇಂದ್ರ ಮಾಜಿ ಸಚಿವ ಸಂತೋಷ್ ಗಂಗ್ವಾರ್ ಮತ್ತು ಬಿಜೆಪಿಯ ಹಿರಿಯ ನಾಯಕರಾದ ಒಪಿ ಮಾಥುರ್ ಅವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿಕಟವರ್ತಿಯಾಗಿರುವ ಗುಜರಾತ್‌ನ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಕೈಲಾಸನಾಥನ್ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನಿಯೋಜಿಸಿ ಆದೇಶ ಹೊರಡಿಸಿದ್ದಾರೆ.
ಕೇಂದ್ರದಲ್ಲಿ 2 ಬಾರಿ ಕಾರ್ಮಿಕ ಸಚಿವರಾಗಿದ್ದ ಸಂತೋಷ್ ಕುಮಾರ್ ಗಂಗ್ವಾರ್ ಅವರನ್ನು ಜಾರ್ಖಂಡ್ ರಾಜ್ಯಪಾಲ, ಮಹಾರಾಷ್ಟ್ರದವರಾದ ಹರಿಭಾವು ಬಾಗಡೆ ಅವರನ್ನು ರಾಜಸ್ಥಾನದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ತ್ರಿಪುರಾ ಮಾಜಿ ಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ರಮೆನ್ ದೇಕಾ ಅವರನ್ನು ಛತ್ತೀಸಗಢ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ಪಂಜಾಬ್‌ನಲ್ಲಿ ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯದ ಕಾರಣಕ್ಕೆ ತೀವ್ರ ಚರ್ಚೆಯಲ್ಲಿದ್ದ ಬನ್ವಾರಿಲಾಲ್ ಪುರೋಹಿತ್ ಅವರ ಸ್ಥಾನಕ್ಕೆ ಅಸ್ಸಾಂನ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ನೇಮಿಸಲಾಗಿದೆ. ಜಾರ್ಖಂಡ್ ಗವರ್ನರ್ ಸಿ.ಪಿ.ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರಕ್ಕೆ ವರ್ಗಾವಣೆ ಮಾಡಲಾಗಿದೆ. ಸಿಕ್ಕಿಂ ಗವರ್ನರ್ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಅಸ್ಸಾಂನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ ಮತ್ತು ಮಣಿಪುರದ ರಾಜ್ಯಪಾಲರ ಹೆಚ್ಚುವರಿ ಜವಾಬ್ದಾರಿಯನ್ನು ಸಹ ವಹಿಸಲಾಗಿದೆ.












Click it and Unblock the Notifications