ಉಚಿತ ಪಡಿತರ ಯೋಜನೆಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಆನ್ ಯೋಜನೆ ಎಂದು ಹೆಸರಿಟ್ಟ ಕೇಂದ್ರ ಸರ್ಕಾರ
ನವದೆಹಲಿ, ಜ. 11: ಕೇಂದ್ರ ಸರ್ಕಾರವು ತನ್ನ ಹೊಸ ಉಚಿತ ಆಹಾರ ಧಾನ್ಯ ಯೋಜನೆಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಆನ್ ಯೋಜನೆ ಎಂದು ಹೆಸರಿಸಿದೆ.
ಹೊಸ ಉಚಿತ ಆಹಾರ ಧಾನ್ಯ ಯೋಜನೆಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, 2013 ರ ಅಡಿಯಲ್ಲಿ 'ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಆನ್ ಯೋಜನೆ (ಪಿಎಂಜಿಕೆಎವೈ)' ಎಂದು ಹೆಸರಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಬುಧವಾರ ತಿಳಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಚಿವಾಲಯವು "ಹೊಸ ಯೋಜನೆಯ ಅನುಷ್ಠಾನವು 2023ರ ಜನವರಿ 1ರಿಂದ ಪ್ರಾರಂಭವಾಗಿದೆ. ಈ ಯೋಜನೆಯು 80 ಕೋಟಿಗೂ ಹೆಚ್ಚು ಬಡವರು ಮತ್ತು ಬಡತನ ರೇಖೆಗಿಂತ ಕೇಳಗಿರುವವರಿಗೆ ಪ್ರಯೋಜನ ನೀಡುತ್ತದೆ" ಎಂದಿದೆ.

ಕೇಂದ್ರ ಸರ್ಕಾರವು 2023 ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಆಹಾರ ಸಬ್ಸಿಡಿಯಾಗಿ 2 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹೊಸ ಯೋಜನೆಯ ಹೆಸರು 2020 ರಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಘೋಷಿಸಲಾದ ಕೇಂದ್ರದ ಪ್ಯಾಕೇಜ್‌ನ ಭಾಗವಾಗಿ ಜಾರಿಗೊಳಿಸಲಾದ ಉಚಿತ ಆಹಾರ ಧಾನ್ಯ ಯೋಜನೆಯಂತೆಯೇ ಇದೆ. ಆದರೆ, ಎರಡು ಯೋಜನೆಗಳ ನಡುವಿನ ವ್ಯತ್ಯಾಸವೆಂದರೆ ಸುಮಾರು 81 ಕೋಟಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ಫಲಾನುಭವಿಗಳಾದ ಪ್ರತಿ ವ್ಯಕ್ತಿಗೆ ಒಂದು ತಿಂಗಳಲ್ಲಿ 5 ಕೆಜಿ ಆಹಾರ ಧಾನ್ಯವನ್ನು ಉಚಿತವಾಗಿ ಪಡೆಯಲು ಅರ್ಹರಾಗಿರುತ್ತಾರೆ. ಆದರೆ, ಅರ್ಹವಾದ ಪ್ರಮಾಣವನ್ನು ಖರೀದಿಸಲು ಆಹಾರ ಧಾನ್ಯದ ಸಬ್ಸಿಡಿ ದರವನ್ನು (ಪ್ರತಿ ಕೆಜಿ ಅಕ್ಕಿಗೆ ರೂ 3, ಪ್ರತಿ ಕೆಜಿ ಗೋಧಿಗೆ ರೂ 2 ಮತ್ತು ಧಾನ್ಯಗಳಿಗೆ ರೂ 1) ಪಾವತಿಸಬೇಕಾಗಿತ್ತು. ಆದರೆ, ಹೊಸ ಯೋಜನೆಯಲ್ಲಿ ಸರ್ಕಾರ ಸಬ್ಸಿಡಿ ದರವನ್ನು ಕೈಬಿಟ್ಟು ಉಚಿತವಾಗಿ ಆಹಾರ ಧಾನ್ಯ ನೀಡುತ್ತಿದೆ.
ಆದರೆ ಈಗ ಸಾಂಕ್ರಾಮಿಕ ಸಮಯದಲ್ಲಿ ಲಭ್ಯವಿದ್ದ ಹೆಚ್ಚುವರಿ ಧಾಣ್ಯದ ಪ್ರಮಾಣವನ್ನು ಈ ಫಲಾನುಭವಿಗಳಿಗೆ ಒದಗಿಸಲಾಗುವುದಿಲ್ಲ. ಅವರು ಎನ್‌ಎಫ್‌ಎಸ್‌ಎ ಅಡಿಯಲ್ಲಿ ಅರ್ಹರಾಗಿರುವಷ್ಟು ಆಹಾರ ಧಾನ್ಯವನ್ನು ಮಾತ್ರ ಪಡೆಯುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ಒಂದು ವರ್ಷದವರೆಗೆ ಎನ್‌ಎಫ್‌ಎಸ್‌ಎ ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳನ್ನು (ಎಎವೈ) ಮತ್ತು ಪ್ರಾಥಮಿಕ ಮನೆಯ (ಪಿಎಚ್‌ಎಚ್) ಫಲಾನುಭವಿಗಳಿಗೆ ಒದಗಿಸಲು ಹೊಸ "ಸಂಯೋಜಿತ ಆಹಾರ ಭದ್ರತಾ ಯೋಜನೆ" ಯನ್ನು ಅನುಮೋದಿಸಿದ ಕೆಲವು ದಿನಗಳ ನಂತರ ಈ ಕ್ರಮ ಜಾರಿಗೆ ಬಂದಿದೆ.
"ಫಲಾನುಭವಿಗಳ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಮತ್ತು ರಾಜ್ಯಗಳಾದ್ಯಂತ ಏಕರೂಪತೆಯನ್ನು ಕಾಯ್ದುಕೊಳ್ಳುವ ಸಲುವಾಗಿ, ಎನ್‌ಎಫ್‌ಎಸ್‌ಎ ಅಡಿಯಲ್ಲಿ ಅರ್ಹತೆಯ ಪ್ರಕಾರ 2023 ವರ್ಷದಲ್ಲಿ ಪಿಎಂಜಿಕೆಎವೈ ಅಡಿಯಲ್ಲಿ ಎಲ್ಲಾ ಪಿಎಚ್‌ಎಚ್ ಮತ್ತು ಎಎವೈ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗುವುದು" ಎಂದು ಹೇಳಿಕೆ ತಿಳಿಸಿದೆ.
"ಕ್ಷೇತ್ರದಲ್ಲಿ ಪಿಎಂಜಿಕೆಎವೈನ ಸುಗಮ ಅನುಷ್ಠಾನಕ್ಕೆ ಈಗಾಗಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಅಂದರೆ ಎಎವೈ ಮತ್ತು ಪಿಎಚ್‌ಎಚ್ ಫಲಾನುಭವಿಗಳಿಗೆ ಆಹಾರ ಧಾನ್ಯಗಳ ಬೆಲೆಯನ್ನು ಶೂನ್ಯಗೊಳಿಸಲು ಅಗತ್ಯ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಮತ್ತು ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಅಧಿಕಾರಿಗಳು ಹೊಸ ಯೋಜನೆಯನ್ನು ಸರಿಯಾಗಿ ಜಾರಿಗೆ ತರಲು ರಾಜ್ಯ ಸರ್ಕಾರದೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.












Click it and Unblock the Notifications