ರೈಲ್ವೆ ಕೆಲಸ ನೀಡುವುದಾಗಿ 28 ಜನರಿಂದ ಒಂದು ತಿಂಗಳು ರೈಲು ಎಣಿಸಲು ಬಿಟ್ಟರು
ನವದೆಹಲಿ, ಡಿಸೆಂಬರ್ 20: ನವದೆಹಲಿಯಲ್ಲಿ ರೈಲ್ವೆ ಇಲಾಖೆ ನೇಮಕಾತಿ ಹಗರಣ ಬೆಳಕಿಗೆ ಬಂದಿದ್ದು, ವಂಚಕರ ಗುಂಪೊಂದು ರೈಲ್ವೆಯಲ್ಲಿ ಉದ್ಯೋಗ ನೀಡುತ್ತೇವೆ ಎಂದು ತಮಿಳುನಾಡಿನ 28 ಜನರನ್ನು ನವದೆಹಲಿಯ ರೈಲು ನಿಲ್ದಾಣದಲ್ಲಿ ಒಂದು ತಿಂಗಳ ಕಾಲ ರೈಲುಗಳನ್ನು ಎಣಿಸಲು ಬಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ.
ಆದರೆ ಅಭ್ಯರ್ಥಿಗಳಿಗೆ ಅವರಿಗೆ ನಿಯೋಜಿಸಲಾದ ಕೆಲಸವು ತಮ್ಮನ್ನು ವಂಚಿಸಲು ವಿನ್ಯಾಸಗೊಳಿಸಲಾದ ಉದ್ಯೋಗ ಹಗರಣದ ಭಾಗವಾಗಿದೆ ಎಂದು ತಿಳಿದಿರಲಿಲ್ಲ. ಅಭ್ಯರ್ಥಿಗಳನ್ನು ನಿಲ್ದಾಣದಲ್ಲಿ ಪ್ರಯಾಣಿಕರ ಟಿಕೆಟ್ ಪರೀಕ್ಷಕ (ಟಿಟಿಇ), ಗುಮಾಸ್ತರು ಮತ್ತು ಟ್ರಾಫಿಕ್ ಸಹಾಯಕರಾಗಿ ನೇಮಿಸಲಾಗಿತ್ತು. ಅಲ್ಲದೆ ರೈಲುಗಳ ಆಗಮನ ಮತ್ತು ನಿರ್ಗಮನಗಳನ್ನು ಎಣಿಸುವುದು ಅವರ ತರಬೇತಿಯ ಭಾಗವಾಗಿದೆ ಎಂದು ಹೇಳಿದ್ದರು. ಮುಖ್ಯವಾಗಿ ತರಬೇತಿಗಾಗಿ ಎಂದು ಹೊಸದಾಗಿ ಸೇರ್ಪಡೆಗೊಂಡವರಿಂದ 2 ಲಕ್ಷದಿಂದ 24 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಲಾಗಿತ್ತು.
ಈ ಬಗ್ಗೆ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ ವಂಚನೆಯ ತನಿಖೆ ನಡೆಸುತ್ತಿದೆ. ಈ ವರ್ಷದ ಜೂನ್ ಮತ್ತು ಜುಲೈ ನಡುವೆ ಘಟನೆ ನಡೆದಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಒಟ್ಟು 2.67 ಕೋಟಿ ರೂ. ವಂಚಿಸಲಾಗಿದೆ ಎಂದು ಮಾಜಿ ಸೈನಿಕ ಎಂ ಸುಬ್ಬುಸಾಮಿ ಎಂಬ ವ್ಯಕ್ತಿ ದೂರು ದಾಖಲಿಸಿದ್ದಾರೆ. ಅಭ್ಯರ್ಥಿಗಳು ಸುಬ್ಬುಸ್ವಾಮಿ ಅವರ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದು, ಅವರು ಸಹಾಯ ಮಾಡಲು ನಿರ್ಧರಿಸಿದ್ದಾರೆ.

ಉನ್ನತ ಶಿಕ್ಷಣ ಪಡೆದ ಅಭ್ಯರ್ಥಿಗಳು
ವಿಕಾಸ್ ರಾಣಾ ಎಂಬ ವ್ಯಕ್ತಿ ದೆಹಲಿಯ ಉತ್ತರ ರೈಲ್ವೆ ಕಚೇರಿಯಲ್ಲಿ ಉಪನಿರ್ದೇಶಕ ಎಂಬಂತೆ ಪರಿಚಯಿಸಿಕೊಂಡಿದ್ದನು. ವಂಚನೆಗೆ ಒಳಗಾದವರಲ್ಲಿ ಹೆಚ್ಚಿನವರು ಉನ್ನತ ಶಿಕ್ಷಣ ಪಡೆದವರು ಮತ್ತು ತಾಂತ್ರಿಕ ಮತ್ತು ಎಂಜಿನಿಯರಿಂಗ್ ಹಿನ್ನೆಲೆಯಿಂದ ಬಂದವರು. ಟಿಟಿಇ, ಟ್ರಾಫಿಕ್ ಅಸಿಸ್ಟೆಂಟ್‌ಗಳು ಮತ್ತು ಕ್ಲರ್ಕ್‌ಗಳ ಹುದ್ದೆಗಳಿಗೆ ನಕಲಿ ನೇಮಕಾತಿ ನಡೆದಿದೆ. ಆದರೆ ಎಲ್ಲರೂ ಒಂದೇ ರೀತಿಯ ತರಬೇತಿಯನ್ನು ಪಡೆದಿದ್ದಾರೆ. ಇದರಲ್ಲಿ ನಿಲ್ದಾಣಗಳಲ್ಲಿ ರೈಲುಗಳನ್ನು ಎಣಿಸುವುದು ಒಂದಾಗಿತ್ತು ಎಂದು ಮಧುರೈನ ಸಂತ್ರಸ್ತರೊಬ್ಬರು ತಿಳಿಸಿದ್ದಾರೆ ಎಂದು ಡಿಎನ್‌ಎ ವರದಿ ಮಾಡಿದೆ.

ಶಿವರಾಮನ್ ಎಂಬ ವ್ಯಕ್ತಿಯಿಂದ ಭೇಟಿ
ಮಾಜಿ ಸೈನಿಕ ಸುಬ್ಬುಸಾಮಿ ಅವರು ಈಗ ಸಾಮಾಜಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ನಿರುದ್ಯೋಗಿ ಯುವಕರಿಗೆ ಸಹಾಯ ಮಾಡುತ್ತಾರೆ. ಸಂಸತ್ ಸದಸ್ಯರೊಂದಿಗೆ ಸಂಪರ್ಕ ಹೊಂದಿರುವುದಾಗಿ ಹೇಳಿಕೊಂಡ ಶಿವರಾಮನ್ ಎಂಬ ವ್ಯಕ್ತಿ ತನ್ನನ್ನು ಭೇಟಿಯಾಗಿದ್ದಾನೆ ಎಂದು ಅವರು ತಮ್ಮ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವುದಾಗಿ ಆ ವ್ಯಕ್ತಿ ಭರವಸೆ ನೀಡಿದ್ದು, ತನ್ನೊಂದಿಗೆ ದೆಹಲಿಗೆ ಬರುವಂತೆ ಹೇಳಿದ್ದಾನೆ. ಮೂರು ಜನರಿಗೆ ಕೆಲಸ ಖಾಲಿ ಇದೆ ಎಂದು ವ್ಯಕ್ತಿ ಹೇಳಿದ್ದರು. ಉದ್ಯೋಗ ಸೇರುವ ಭರವಸೆ ಬಳಿಕ ಅಕ್ಕಪಕ್ಕದ ಹಳ್ಳಿಗಳ ಇತರರೂ ಕೂಡ ಸೇರಿಕೊಂಡರು.

ಜೂನಿಯರ್ ಇಂಜಿನಿಯರ್ ಕಚೇರಿಯಲ್ಲಿ ಪರಿಶೀಲನೆ
ಈ ಅಭ್ಯರ್ಥಿಗಳನ್ನು ರೈಲ್ವೆ ಸೆಂಟ್ರಲ್ ಆಸ್ಪತ್ರೆಯಲ್ಲಿ ಕನ್ನಾಟ್ ಪ್ಲೇಸ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆಸಲಾಯಿತು ಮತ್ತು ಅವರ ದಾಖಲೆಗಳನ್ನು ಉತ್ತರ ರೈಲ್ವೆಯ ಜೂನಿಯರ್ ಇಂಜಿನಿಯರ್ ಕಚೇರಿಯಲ್ಲಿ ಪರಿಶೀಲಿಸಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ರಾಣಾ ಯಾವಾಗಲೂ ಹಣದ ಸಂಗ್ರಹಕ್ಕಾಗಿ ರೈಲ್ವೆ ಕಟ್ಟಡಗಳ ಹೊರಗೆ ಅವರನ್ನು ಭೇಟಿಯಾಗುತ್ತಿದ್ದರು. ಒಳಗೆ ಎಂದಿಗೂ ಇರಲಿಲ್ಲ. ಅವರು ಮಾಹಿತಿ ಮತ್ತು ದಾಖಲೆಗಳನ್ನು ಸಂಗ್ರಹಿಸುತಿದ್ದನು. ತರಬೇತಿ, ಐಡಿ ಕಾರ್ಡ್ ಮತ್ತು ತರಬೇತಿ ಪ್ರಮಾಣಪತ್ರಗಳಿಗೆ ನಕಲಿ ಆದೇಶಗಳನ್ನು ನೀಡಿದ್ದನು. ಆದರೆ ಅಭ್ಯರ್ಥಿಗಳು ರೈಲ್ವೆ ಇಲಾಖೆಯಲ್ಲಿ ಪರಿಶೀಲನೆ ಮಾಡಿದಾಗ, ಅವುಗಳು ನಕಲಿ ಎಂದು ಕಂಡುಬಂದಿದೆ.

ಯುವಕರು ಬಹಳ ಜಾಗರೂಕರಾಗಿರಬೇಕು
ರೈಲ್ವೆ ಸಚಿವಾಲಯದ ಮಾಧ್ಯಮ ಮತ್ತು ಸಂವಹನದ ಹೆಚ್ಚುವರಿ ಮಹಾನಿರ್ದೇಶಕ ಯೋಗೇಶ್ ಬವೇಜಾ ಮಾತನಾಡಿ, ರೈಲ್ವೆ ಮಂಡಳಿಯು ಮೋಸ ಹೋಗದಂತೆ ಸಲಹೆಗಳನ್ನು ನೀಡುತ್ತಲೇ ಬಂದಿದೆ. ಇಂತಹ ಮೋಸದ ನೇಮಕಾತಿಗಳ ಬಗ್ಗೆ ಸಾಮಾನ್ಯ ಜನರನ್ನು ಎಚ್ಚರಿಸುತ್ತಿದೆ. ಇಂತಹ ಅಕ್ರಮಗಳೊಂದಿಗೆ ವ್ಯವಹರಿಸುವಾಗ ಯುವಕರು ಬಹಳ ಜಾಗರೂಕರಾಗಿರಬೇಕು ಮತ್ತು ಅಂತಹ ಸಂದರ್ಭಗಳಲ್ಲಿ ಅವರು ಯಾವಾಗಲೂ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಅವರು ಹೇಳಿದರು.












Click it and Unblock the Notifications