ಲೈಂಗಿಕ ದೌರ್ಜನ್ಯ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಮನೆಗೆ ದೆಹಲಿ ಪೊಲೀಸ್ ಭೇಟಿ, ಒಂದೂವರೆ ಗಂಟೆ ಕಾಯ್ದ ಅಧಿಕಾರಿಗಳು?
'ಭಾರತ್ ಜೋಡೋ' ಪಾದಯಾತ್ರೆಯಲ್ಲಿನ ರಾಹುಲ್ ಗಾಂಧಿಯವರ ಹೇಳಿಕೆ ವಿಚಾರವಾಗಿ ದೆಹಲಿ ಪೊಲೀಸರು ಅವರ ಮನೆಗೆ ಭೇಟಿ ನೀಡಿದ್ದು, ಇದರಿಂದ ಕಾಂಗ್ರೆಸ್ ಕೆಂಡಾಮಂಡಲವಾಗಿದೆ.
ನವದೆಹಲಿ, ಮಾರ್ಚ್ 19: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ 'ಭಾರತ್ ಜೋಡೋ' ಪಾದಯಾತ್ರೆಯಲ್ಲಿ ಲೈಂಗಿಕ ದೌರ್ಜನ್ಯ ಕುರಿತು ಹೇಳಿಕೆಯೊಂದು ಹೊರ ಬಿದ್ದಿತ್ತು. ಇದರಿಂದಾಗಿ ಪ್ರಕರಣದ ತನಿಖೆ ಕುರಿತು ದೆಹಲಿ ಪೊಲೀಸರು ಭಾನುವಾರ ರಾಹುಲ್ ಗಾಂಧಿ ಅವರು ನಿವಾಸಕ್ಕೆ ತೆರಳಿದ್ದಾರೆ.
ಮನೆಗೆ ಬಂದ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡದೇ ರಾಹುಲ್ ಗಾಂಧಿಯವರು ಕೆಲವು ಗಂಟೆಗಳ ಕಾಲ ಕಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

'ಭಾರತ್ ಜೋಡೋ ಯಾತ್ರೆ'ಯು ವಿವಿಧ ನಗರಗಳಂತೆ ಶ್ರೀನಗರದಲ್ಲೂ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ 'ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಈ ಬಗ್ಗೆ ಹುಡುಗಿಯೊಬ್ಬಳು ತಮ್ಮ ಬಳಿ ಅಳಲು ತೋಡಿಕೊಂಡಿದ್ದರು' ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಂಬಂಧ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಈಗಾಗಲೇ ಮಾರ್ಚ್ 16ರಂದು ರಾಹುಲ್ ಅವರಿಗೆ ನೋಟಿಸ್ ನೀಡಲಾಗಿದೆ. ಆದರೆ ಆ ಬಗ್ಗೆ ಅವರು ಉತ್ತರಿಸಿಲ್ಲ ಎನ್ನಲಾಗಿದೆ. ಅದಲ್ಲದೇ ಅವರ ಹೇಳಿಕೆ ಕುರಿತು ಹೆಚ್ಚಿನ ವಿವರ, ನಿಮ್ಮ ಬಳಿ ಬಂದವರು ಅಳಲು ತೋಡಿಕೊಂಡ ಸಂತ್ರಸ್ತರ ಮಾಹಿತಿ ಮುಂತಾದ ಅಂಶಗಳನ್ನು ಕೇಳಲು ಅಧಿಕಾರಿಗಳು ರಾಹುಲ್ ಗಾಂಧಿಯವರು ನಿವಾಸಕ್ಕೆ ತೆರಳಿದ್ದರು. ಆದರೆ ಈ ವೇಳೆ ಅವರು ಅಧಿಕಾರಿಗಳನ್ನು ಒಂದೂವರೆ ಗಂಟೆ ಕಾಯಿಸಿ ನಂತರ ರಾಹುಲ್ ಗಾಂಧಿ ನೋಟಿಸ್ ಸ್ವೀಕರಿಸಿದ್ದಾರೆ.

ಈ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಹೇಳಿಕೆ ಪೋಸ್ಟ್ ಕುರಿತು ಅವರನ್ನು ಪೊಲೀಸರು ರಾಹುಲ್ ಗಾಂಧಿಯವರನ್ನು ಪ್ರಶ್ನಿಸಲಾಗಿದೆ. ಆದರೆ ಅವರು ಏನನ್ನು ಉತ್ತರಿಸಿಲ್ಲ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಇತ್ತ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯಸಭಾ ಸಂಸದರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಜೈರಾಮ್ ರಮೇಶ್ ಮುಂತಾದ ಕಾಂಗ್ರೆಸ್ ನ ದೆಹಲಿ ಮಟ್ಟದ ನಾಯಕರು ಕೂಡ ರಾಹುಲ್ ಗಾಂಧಿಯವರ ಮನೆಗೆ ಭೇಟಿ ನೀಡಿದ್ದಾರೆ.
ಉನ್ನತ ಪೊಲೀಸ್ ಅಧಿಕಾರಿಗಳು, ವಿಶೇಷ ಪೊಲೀಸ್ ಆಯುಕ್ತರ ಮಟ್ಟದ ಅಧಿಕಾರಿಗಳು ರಾಹುಲ್ ಗಾಂಧಿಯವರ ಹೇಳಿಕೆಯ ಅಂಶಗಳ ಸತ್ಯಾಸತ್ಯತೆ ತಿಳಿಯಲು ಪ್ರಯತ್ನಿಸಿದ್ದಾರೆ. ಅದರ ಭಾಗಾವಾಗೇ ಕಾಂಗ್ರೆಸ್ ನಾಯಕನ ಮನೆಗೆ ಭೇಟಿ ಕೊಟ್ಟಿದ್ದರು.
ರಾಹುಲ್‌ಗೆ ನೋಟಿಸ್: ಕಾಂಗ್ರೆಸ್ ಆಕ್ರೋಶ
ಪೊಲೀಸರ ಈ ನಡೆಯನ್ನು ವಿರೋಧಿಸಿರುವ ಕಾಂಗ್ರಸ್ಸಿಗರು, ಸ್ವಯಂ ಪ್ರೇರಿತವಾಗಿ ಅಥವಾ ದೂರಿನ ಆಧಾರದ ಮೇಲೆ ರಾಹುಲ್ ಗಾಂಧಿ ವಿರುದ್ಧ ನೋಟಿಸ್ ನೀಡುವುದಕ್ಕೆ ಯಾವುದೇ ಕಾನೂನು ಪೂರ್ವ ನಿದರ್ಶನವಿಲ್ಲ. ದೆಹಲಿ ಪೊಲೀಸರು ಕಾಂಗ್ರೆಸ್ಸಿಗರಿಗೆ ನೀಡುತ್ತಿರುವ ಮತ್ತೊಂದು ಕಿರುಕುಳ ಇದೆ ಎಂದು ನಾಯಕರು ಆರೋಪಿಸಿದ್ದಾರೆ.
ರಾಹುಲ್ ಗಾಂಧಿಯವರು ಒಂದು ಹೇಳಿಕೆ ನೀಡಿರಬಹುದು. ಆದರೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವ ಬಲಿಪಶುಗಳ/ಸಂತ್ರಸ್ತರ ಹೆಸರನ್ನು ಬಹಿರಂಗಪಡಿಸಲು ಅವರನ್ನು ಒತ್ತಾಯಿಸಲು ಸರಿಯಲ್ಲ.ಪೊಲೀಸ್ ತನಿಖಾಧಿಕಾರಿಗಳ ಈ ಕ್ರಮ ದುರುದ್ದೇಶದಿಂದ ಕೂಡಿದೆ. ಬೇಕು ಅಂತಲೇ ಹೀಗೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ.
ಸದ್ಯ ರಾಹುಲ್ ಗಾಂಧಿಯವರಿಗೆ ನೋಟಿಸ್ ನೀಡಲಾಗಿದೆ. ಅವರು ಹೇಳಿಕೆ ಕುರಿತು ವಿವರಗಳನ್ನು ನೀಡುವಲ್ಲಿ ವಿಫಲವಾದರೆ, ಮತ್ತೊಮ್ಮೆ ಅವರಿಗೆ ನೋಟಿಸ್ ಜಾರಿಗೊಳಿಸಲಾಗುವುದು. ಇದು ವ್ಯಕ್ತಿಗಳ ಜೀವನ ಮತ್ತು ಭದ್ರತೆಯನ್ನು ಒಳಗೊಂಡಿರುವ ಸೂಕ್ಷ್ಮ ಪ್ರಕರಣವಾಗಿದೆ. ಹೀಗಾಗಿ ಸಾಕ್ಷ್ಯ ಮತ್ತು ಸಾಕ್ಷಿಗಳನ್ನು ಹಾಳು ಮಾಡದಂತೆ ಖಚಿತಪಡಿಸಿಕೊಳ್ಳಲು ತನಿಖಾಧಿಕಾರಿಗಳು ಅಗತ್ಯ ಮಾಹಿತಿ ಸಂಗ್ರಹಿಸಲು ಮುಂದಾಗಿದೆ ಎಂದ ಪೊಲೀಸ್ ಮೂಲಗಳು ತಿಳಿಸಿವೆ.
ಒಂದೂವರೆ ತಿಂಗಳ ಬಳಿಕ ಈ ಪ್ರಶ್ನೆ ಏಕೆ?
ಇತ್ತ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. 'ಭಾರತ್ ಜೋಡೋ' ಯಾತ್ರೆ ಮುಗಿದು 45 ದಿನಗಳ ನಂತರ ಪೊಲೀಸರು ಈ ಪ್ರಶ್ನೆಯನ್ನು ಈಗೇಕೆ ಕೇಳುತ್ತಿದ್ದಾರೆ? ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಪ್ರಶ್ನಿಸಿದ್ದಾರೆ. ನಾವು ಘಟನೆಗಳಿಗೆ ನಿಯಮಾನುಸಾರ ಪ್ರತಿಕ್ರಿಯಿಸುತ್ತೇವೆ. ಅದರೆ ಅಧಿಕಾರಿಗಳು ಈ ರೀತಿ ನಡೆದುಕೊಳ್ಳುವುದು ಸರಿಯೇ?. ಭಾರತ್ ಜೋಡೋ ಯಾತ್ರೆ ಮುಗಿದು ಒಂದೂವರೆ ತಿಂಗಳಾಗಿದೆ. ಈಗ ಅವರ ಹೇಳಿಕೆ ಬಗ್ಗೆ ಪ್ರಶ್ನೆ ಎದ್ದಿದೆ ಎಂದರೆ ಸರ್ಕಾರ ಆಡಳಿತ ಕುರಿತು ಅನುಮಾನ ಮೂಡುತ್ತವವೆ ಎಂದು ಅವರು ಹೇಳಿದರು.
ಕಾಂಗ್ರೆಸ್‌ನ ನೇರ ಪ್ರತಿಸ್ಪರ್ಧಿಯಾಗಿರುವ ಆಮ್ ಆದ್ಮಿ ಪಕ್ಷದ (AAP) ನಾಯಕ ಮತ್ತು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಅವರು, ರಾಹುಲ್ ಗಾಂಧಿ ವಿರುದ್ಧ ಕೇಂದ್ರವು ತನಿಖಾ ಸಂಸ್ಥೆಗಳನ್ನು 'ದುರುಪಯೋಗ' ಮಾಡಿಕೊಳ್ಳುತ್ತಿವೆ. ಇದು ತಪ್ಪು ಎಂದು ಪ್ರತಿಕ್ರಿಯಿಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಅದಲ್ಲದೇ ನಮ್ಮ ಪಕ್ಷದ ನಾಯಕರ ವಿರುದ್ಧ ಕೇಂದ್ರೀಯ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕರ ಟೀಕೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ಸೌರಭ್ ವಾಗ್ದಾಳಿ ನಡೆಸಿದರು.












Click it and Unblock the Notifications