ಭಯದಲ್ಲಿ ದೀಪಾವಳಿ: ಭಾರತದಲ್ಲಿ ಕೊರೊನಾ ಹೊಸ ಅಲೆಗೆ ಕಾರಣವಾಗುತ್ತಾ ಬಿಎಫ್.7 ತಳಿ?
ನವದೆಹಲಿ, ಅಕ್ಟೋಬರ್ 17: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿಯಲ್ಲಿ ಎರಡು ವರ್ಷಗಳಿಂದ ಬೆಳಕಿನ ಹಬ್ಬವನ್ನು ಆಚರಿಸಿದ್ದು ಅಷ್ಟಕಷ್ಟೇ. ಈ ಬಾರಿ ದೀಪಾವಳಿಯನ್ನು ಅದ್ಧೂರಿ ಆಗಿ ಆಚರಿಸಿಕೊಳ್ಳಲು ಜನರು ಎದುರು ನೋಡುತ್ತಿರುವ ಸಂದರ್ಭದಲ್ಲೇ ಓಮಿಕ್ರಾನ್ ಹೊಸ ರೂಪಾಂತರಿ ಭೀತಿ ಶುರುವಾಗಿದೆ.
ಭಾರತದಲ್ಲಿ ಕೋವಿಡ್-19 ಸೋಂಕಿನ ರೂಪಾಂತರಿ ಓಮಿಕ್ರಾನ್ ಸೋಂಕಿನ ಹೊಸ ತಳಿಯು ಪತ್ತೆಯಾಗಿರುವುದರ ಬಗ್ಗೆ ಸಾಂಕ್ರಾಮಿಕ ರೋಗ ತಜ್ಞರು ಎಚ್ಚರಿಕೆ ನೀಡಿದ್ದಾರೆ. ದೀಪಾವಳಿಯ ಹೊಸ್ತಿಲಿನಲ್ಲೇ ಓಮಿಕ್ರಾನ್ ರೂಪಾಂತರಿಯಲ್ಲಿ ಬಿಎ.5.1.7 ಮತ್ತು ಬಿಎಸ್.7 ಎಂಬ ತಳಿಗಳು ಕಂಡು ಬಂದಿವೆ.
ಈ ಮೊದಲಿನ ಸಾಮಾನ್ಯ ಓಮಿಕ್ರಾನ್ ರೂಪಾಂತರಿಗೆ ಹೋಲಿಸಿದರೆ, ಈಗ ಕಾಣಿಸಿಕೊಂಡಿರುವ ಹೊಸ ತಳಿಯು ಹೆಚ್ಚು ಹರಡುವಿಕೆ ವೇಗವನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹಾಗಿದ್ದರೆ ಓಮಿಕ್ರಾನ್ ಸೋಂಕಿನ ಹೊಸ ತಳಿಗಳಿಂದ ಯಾವ ರೀತಿಯ ಅಪಾಯಗಳನ್ನು ಎದುರಿಸಬೇಕಾಗುತ್ತದೆ? ಓಮಿಕ್ರಾನ್ ಹೊಸ ತಳಿಯು ಅಂಟಿಕೊಂಡಿರುವ ರೋಗಿಗಳಲ್ಲಿ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ?, ಕೊರೊನಾವೈರಸ್ ಸೋಂಕಿನ ಬಗ್ಗೆ ಮರೆತು ಬದುಕುತ್ತಿರುವ ಭಾರತೀಯರು ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಭಾರತದಲ್ಲಿ ಪತ್ತೆಯಾದ ಓಮಿಕ್ರಾನ್ ಹೊಸ ತಳಿ
ಭಾರತದಲ್ಲೇ ಹೊಸ ಸಂಚಲನ ಮೂಡಿಸುವ ಓಮಿಕ್ರಾನ್ ರೂಪಾಂತರದ ಬಿಎಫ್.7 ಮೊದಲ ಪ್ರಕರಣವು ಗುಜರಾತ್ ಬಿ-ಟೆಕ್ನಾಲಜಿ ರಿಸರ್ಚ್ ಸೆಂಟರ್‌ನಲ್ಲಿ ಪತ್ತೆಯಾಗಿದೆ. ಈ ಹಿಂದಿನ ಹಿಂದಿನ ಸೋಂಕು ಮತ್ತು ಲಸಿಕೆಗಳಿಂದ ಪಡೆದುಕೊಂಡಿರುವ ಪ್ರತಿರಕ್ಷಣೆಯನ್ನು ಮೀರಿಸಬಲ್ಲ ಸಾಮರ್ಥ್ಯವನ್ನು ಈ ಹೊಸ ತಳಿಯು ಹೊಂದಿದೆ. ಹೀಗಾಗಿ ದೀಪಾವಳಿ ಹೊಸ್ತಿಲಿನಲ್ಲೇ ಪತ್ತೆಯಾಗಿರುವ ಹೊಸ ತಳಿಯ ಬಗ್ಗೆ ಜನರು ಜಾಗೃತಿ ವಹಿಸಬೇಕಾಗಿದೆ.

ಓಮಿಕ್ರಾನ್ ಹೊಸ ತಳಿಯು ಅಪಾಯಕಾರಿಯೇ?
ಕೊರೊನಾವೈರಸ್ ಸೋಂಕಿನ ಓಮಿಕ್ರಾನ್ ರೂಪಾಂತರಿಯ ಹೊಸ ತಳಿಯು ಎಷ್ಟರ ಮಟ್ಟಿಗೆ ಅಪಾಯಕಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಬಿಎಫ್.7 ತಳಿಯ ಹರಡುವಿಕೆ ವೇಗದ ಬಗ್ಗೆ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಸೋಂಕು ಆರಂಭಿಕ ಹಂತದಲ್ಲಿದೆ ಎಂದು ನಂಬಲಾಗಿದೆ. ಇದು ನಿರ್ಣಾಯಕ ಹಂತಕ್ಕೆ ಇನ್ನೂ ತಲುಪಿಲ್ಲ,.ಅದಾಗ್ಯೂ BF.7 ತಳಿಯು ಕೋವಿಡ್-19 ಲಸಿಕೆಯಿಂದ ಪಡೆದುಕೊಂಡಿರುವ ಪ್ರತಿರಕ್ಷಣೆಯ ಪದರವನ್ನೂ ಮೀರಿ ಹರಡುವ ಮತ್ತು ಅಪಾಯವನ್ನು ಸೃಷ್ಟಿಸುವ ಆತಂಕವಿದೆ ಎಂದಿದ್ದಾರೆ.

ಓಮಿಕ್ರಾನ್ ಹೊಸ ತಳಿ ಅಂಟಿದ ರೋಗಿಗಳಲ್ಲಿ ಈ ಲಕ್ಷಣ ಪತ್ತೆ
ಕೊರೊನಾವೈರಸ್ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳೇ ಹೊಸ ತಳಿಯು ಅಂಟಿಕೊಂಡ ರೋಗಿಗಳಲ್ಲಿ ಗೋಚರಿಸುತ್ತವೆ. ಇದರ ಜೊತೆಗೆ ದೇಹದ ನೋವು ಹೆಚ್ಚಾಗಿ ಕಾಡುತ್ತದೆ. ಎರಡು ಅಥವಾ ಮೂರು ಡೋಸ್ ಲಸಿಕೆ ಪಡೆದುಕೊಂಡವರಲ್ಲಿಯೂ ಸೋಂಕು ಅಪಾಯವನ್ನು ಸೃಷ್ಟಿಸುವ ಭೀತಿಯಿದೆ. ಹೊಸ ತಳಿಯು ಅಂಟಿಕೊಂಡಿರುವ ರೋಗಿಗಳಲ್ಲಿ ಈ ಲಕ್ಷಣಗಳು ಸರ್ವೇ ಸಾಮಾನ್ಯಾಗಿ ಬಿಟ್ಟಿವೆ.
* ಈ ಸೋಂಕನ್ನು ಉಂಟುಮಾಡಲು ಕಡಿಮೆ ಕಣಗಳು ಸಾಕು ಎಂದು ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರು ಹೇಳುತ್ತಿದ್ದಾರೆ.
* ದಟ್ಟಣೆ
* ಗಂಟಲು ಕೆರತ
* ಆಯಾಸ
* ಕೆಮ್ಮು
* ಮೂಗು ಸ್ರವಿಸುವಿಕೆ

ದೀಪಾವಳಿ ಹೊಸ್ತಿಲಿನಲ್ಲಿ ಕೋವಿಡ್-19 ಹೊಸ ಅಲೆ
ಕೊರೊನಾವೈರಸ್ ಸೋಂಕಿನ ಓಮಿಕ್ರಾನ್ ರೂಪಾಂತರದ ಬಿಎಫ್.7 ತಳಿಯಿಂದ ದೀಪಾವಳಿ ಹೊಸ್ತಿಲಿನಲ್ಲಿ ಹೊಸ ಅಲೆಯು ಹುಟ್ಟಿಕೊಳ್ಳುವ ಅಪಾಯವಿದೆ. ಕೋವಿಡ್-19 ಸೋಂಕು ಹರಡದಂತೆ ಸಾಧ್ಯವಾದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ ಎಂದು ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications