Infosys Narayana Murthy: ಭಾರತ vs ಇಂಗ್ಲೆಂಡ್ ಪಂದ್ಯ ನೋಡಿ ಟ್ರೋಲ್ ಆದ ನಾರಾಯಣ ಮೂರ್ತಿ
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಕೊನೆಯ ಪಂದ್ಯ ನಡೆದಿದೆ. ಪಂದ್ಯ ನೋಡಲು ಅನೇಕ ಉದ್ಯಮಿಗಳು, ಗಣ್ಯರು ಕೂಡ ವಾಂಖೆಡೆ ಕ್ರೀಡಾಂಗಣದಲ್ಲಿ ಹಾಜರಿದ್ದರು. ಇನ್ಫೋಸಿಸ್ ನಾರಾಯಣ ಮೂರ್ತಿ ಕೂಡ ಮೈದಾನದಲ್ಲಿ ಪಂದ್ಯವನ್ನು ವೀಕ್ಷಣೆ ಮಾಡಿದ್ದು ಟ್ರೋಲ್‌ಗೆ ಕಾರಣವಾಗಿದೆ.
ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಅವರು ನೀಡಿದ್ದ ಹೇಳಿಕೆ ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು, ಈ ಹೇಳಿಕೆಯನ್ನು ಇಟ್ಟುಕೊಂಡು ಸಾಕಷ್ಟು ಟ್ರೋಲ್ ಕೂಡ ಮಾಡಲಾಗಿತ್ತು. ಈಗ ಅವರು ವಾಂಖೆಡೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿರುವುದು ಮತ್ತೆ ಟ್ರೋಲ್‌ಗೆ ಕಾರಣವಾಗಿದೆ.

ಅಚ್ಚರಿಗೊಂಡ ನೆಟ್ಟಿಗರು
ನಾರಾಯಣ ಮೂರ್ತಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿರುವುದು ಹಲವರ ಅಚ್ಚರಿಗೆ ಕಾರಣವಾಗಿದ್ದರೆ ಇನ್ನೂ ಕೆಲವರು ಅವರ ಹೇಳಿಕೆಯನ್ನು ಉಲ್ಲೇಖಿಸಿ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಕೆಲಸ ಮಾಡುವುದನ್ನು ಬಿಟ್ಟು ನಾರಾಯಣ ಮೂರ್ತಿ ಸ್ಟೇಡಿಯಂನಲ್ಲಿ ಏನು ಮಾಡುತ್ತಿದ್ದಾರೆ ಎಂದು ಹಲವರು ಕಾಲೆಳೆದಿದ್ದಾರೆ.
ಬೇರೆಯವರಿಗೆ 70 ಗಂಟೆ ಕೆಲಸ ಮಾಡಲು ಹೇಳಿ ನೀವು ಮಾತ್ರ ಹೀಗೆ ಪಂದ್ಯ ನೋಡುತ್ತಾ ಎಂಜಾಯ್ ಮಾಡುತ್ತಿದ್ದೀರಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.ಹೀಗೆ ಮಾಡುವ ಕೆಲಸ ಬಿಟ್ಟು ಕ್ರಿಕೆಟ್ ನೋಡಿದರೆ 70 ಗಂಟೆ ದುಡಿಮೆ ಹೇಗೆ ಆಗುತ್ತದೆ ಎಂದು ಇನ್ನೂ ಕೆಲವರು ವ್ಯಂಗ್ಯವಾಡಿದ್ದಾರೆ.
ಇನ್ನೂ ಕೆಲವರು ಟ್ರೋಲ್ ಮಾಡಿದವರ ವಿರುದ್ಧವೇ ಕಿಡಿ ಕಾರಿದ್ದು ನಾರಾಯಣ ಮೂರ್ತಿ ಅವರ ಸಾಧನೆ ಬಗ್ಗೆ ಗೊತ್ತಿಲ್ಲದೆ ಈ ರೀತಿ ಟ್ರೋಲ್ ಮಾಡುವುದು ಸರಿಯಲ್ಲ ಅಂದಿದ್ದಾರೆ. ಅವರು 70 ಗಂಟೆ ದುಡಿಯಲು ಹೇಳಿದ್ದು ನಿಮ್ಮ ಏಳಿಗೆಗಾಗಿ, ಮೊದಲು ಅವರ ಸಾಧನೆಯ ಬಗ್ಗೆ ತಿಳಿಯಿರಿ. 10,000 ರೂಪಾಯಿ ಬಂಡವಾಳ ಹಾಕಿ ಕಟ್ಟಿದ ಕಂಪನಿಯನ್ನು ಸಾವಿರಾರು ಕೋಟಿ ರೂಪಾಯಿಗೆ ತಂದು ನಿಲ್ಲಿಸಿದ್ದಾರೆ. ಅವರ ಬಗ್ಗೆ ಟೀಕಿಸುವ ಮುನ್ನ ಅವರು ಸಾಧಿಸಿರುವುದರಲ್ಲಿ ಸ್ವಲ್ಪವಾದರೂ ಮಾಡಿ ಎಂದು ಸವಾಲು ಹಾಕಿದ್ದಾರೆ.
ವಾಂಖೆಡೆಯಲ್ಲಿ ಗಣ್ಯರ ದಂಡು
ಭಾರತ ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಕೊನೆಯ ಪಂದ್ಯ ನೋಡಲು ವಾಂಖೆಡೆಯಲ್ಲಿ ಗಣ್ಯರ ದಂಡೇ ನೆರೆದಿತ್ತು. ನಾರಾಯಣ ಮೂರ್ತಿ, ಸುಧಾ ಮೂರ್ತಿ, ಅಕ್ಷತಾ, ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್, ಬಾಲಿವುಡ್ ನಟ ಅಮೀರ್ ಖಾನ್, ಮುಖೇಶ್ ಅಂಬಾನಿ, ರಾಜೀವ್ ಶುಕ್ಲಾ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು.












Click it and Unblock the Notifications