ನೀಟ್ ಸಮಸ್ಯೆ ಪ್ರಸ್ತಾಪಿಸಲು ವಿಪಕ್ಷಗಳು ಸಜ್ಜು; ಸಿದ್ಧವಾಗಿದ್ದೇನೆ ಎಂದ ಸರ್ಕಾರ
ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ (NEET) ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದ್ದು, ಶುಕ್ರವಾರ ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಪ್ರತಿಪಕ್ಷಗಳು ತಿಳಿಸಿವೆ.
ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಗೆ ದಿನವನ್ನು ಮೀಸಲಿಟ್ಟಿದ್ದರೂ ಸಹ, ಸರ್ಕಾರವನ್ನು ಮೂಲೆಗುಂಪು ಮಾಡುವ ಆಲೋಚನೆಯಾಗಿದೆ. ಚರ್ಚೆಯ ಸಮಯದಲ್ಲಿ ಈ ವಿಷಯದ ಬಗ್ಗೆ ಯಾವುದೇ ಪ್ರಶ್ನೆಗಳು ಬಂದರೂ ಉತ್ತರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಕೇಂದ್ರೀಯ ತನಿಖಾ ದಳದ ತನಿಖೆಯನ್ನು ಪ್ರಾರಂಭಿಸುವುದರಿಂದ ಹಿಡಿದು ವಿಶೇಷ ಸಮಿತಿಯನ್ನು ರಚಿಸುವವರೆಗೆ ನೀಟ್ ಸಮಸ್ಯೆಯ ಬಗ್ಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸಮಿತಿಯ ವರದಿ ಶೀಘ್ರವೇ ಬರುವ ನಿರೀಕ್ಷೆ ಇದೆ. ಅಲ್ಲದೆ, ಈ ಅಧಿವೇಶನದಲ್ಲಿ ವಂಚನೆ ಮತ್ತು ಕಾಗದ ಸೋರಿಕೆ ವಿರುದ್ಧ ಕಠಿಣ ನಿಯಮಗಳು ಜಾರಿಗೆ ಬರಲಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ದೃಢವಾದ ಶಿಕ್ಷಣ ವ್ಯವಸ್ಥೆಗೆ ಅಡಿಪಾಯ ಹಾಕಲಾಗುವುದು ಎನ್ನಲಾಗಿದೆ.
ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಲು ಸಚಿವರು ಸಜ್ಜು
ಸಂಸತ್‌ನಲ್ಲಿ ನೀಟ್ ಅಕ್ರಮದ ವಿಷಯ ಬಂದರೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಧರ್ಮೇಂದ್ರ ಪ್ರಧಾನ್ ಸೋಮವಾರ ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸಿದಾಗ ವಿಪಕ್ಷಗಳು ನೀಟ್ ಅಕ್ರಮ ಪ್ರಸ್ತಾಪಿಸಿದ್ದವು.
ಶುಕ್ರವಾರ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಭಾಷಣದಲ್ಲಿ ನೀಟ್ ಕುರಿತು ಭಾರಿ ಚರ್ಚೆಯಾಗಿದೆ. ಸರ್ಕಾರ ನ್ಯಾಯಯುತ ತನಿಖೆಗೆ ಬದ್ಧವಾಗಿದೆ ಎಂದು ದ್ರೌಪದಿ ಮುರ್ಮು ಹೇಳಿದರು.
ಪ್ರತಿಪಕ್ಷಗಳು ಸರ್ಕಾರದ ಮೇಲೆ ಆಕ್ರಮಣ ಮಾಡಲು ಸಜ್ಜಾಗಿವೆ ಎಂದಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ "ಲೋಕಸಭಾ ಚುನಾವಣೆಯ ಜನಾದೇಶವು ಪ್ರಧಾನಿಯವರ ವೈಯಕ್ತಿಕ, ರಾಜಕೀಯ ಮತ್ತು ನೈತಿಕ ಸೋಲು. ಇದನ್ನು ಪ್ರತಿಪಕ್ಷಗಳು ಅವರಿಗೆ ಪ್ರತಿದಿನ ನೆನಪಿಸುತ್ತವೆ," ಎಂದರು.
ಗುರುವಾರ ಸಂಜೆ ನಡೆದ ಸಭೆಯಲ್ಲಿ ಸಂಸತ್‌ನಲ್ಲಿ ನೀಟ್ ಬಗ್ಗೆ ಪ್ರಶ್ನೆ ಮಾಡಲು ಪ್ರತಿಪಕ್ಷಗಳು ನಿರ್ಣಯಿಸಿವೆ. ಜೂನ್ 4ರಂದು ಫಲಿತಾಂಶ ಪ್ರಕಟವಾದಾಗಿನಿಂದ ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭನೆ ಮಾಡುತ್ತಿದ್ದಾರೆ.
ಶುಕ್ರವಾರ ಮಧ್ಯಾಹ್ನ ಕಾಂಗ್ರೆಸ್ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ನೀಟ್ ಪರೀಕ್ಷೆಯನ್ನು ನಡೆಸುತ್ತಿರುವ ಎನ್‌ಟಿಎ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ಕಚೇರಿಗೆ ನುಗ್ಗಿ ಅದನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿತು.












Click it and Unblock the Notifications