ಮುನ್ನಾಭಾಯಿ ಎಂಬಿಬಿಎಸ್‌ನಂತೆ ವೈದ್ಯಕೀಯ ಸೀಟುಗಳ ಮಾರಾಟ ದಂಧೆ ಪತ್ತೆ
ನವದೆಹಲಿ,ಜುಲೈ.19: ವೈದ್ಯಕೀಯ ಕೋರ್ಸ್‌ಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆ ಬರೆದುಕೊಟ್ಟು ನಿಗದಿತ ಸೀಟುಗಳನ್ನು ಮಾರಾಟ ಮಾಡಿ ಅಂತರಾಜ್ಯ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಎಂಟು ಜನರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ.
ಈ ಮೋಸದ ಕಾರ್ಯಾಚರಣೆಯು ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಹರಿಯಾಣದಾದ್ಯಂತ ಹರಡಿತ್ತು. ಬಾಲಿವುಡ್ ಬ್ಲಾಕ್ ಬಾಸ್ಟರ್ ಸಿನಿಮಾ ಮುನ್ನಾಭಾಯಿ ಎಂಬಿಬಿಎಸ್ ಮಾದರಿಯಲ್ಲಿ ಈ ಸೀಟು ಮಾರಾಟ ದಂಧೆ ಕೆಲಸ ಮಾಡಿದೆ. ಪರಿಣಿತ ಉತ್ತರ ಪತ್ರಿಕೆ ಬರೆಯುವವರು ವಿದ್ಯಾರ್ಥಿಗಳನ್ನು ಯಾಮಾರಿಸಿ ದೊಡ್ಡ ಮೊತ್ತದ ಹಣಕ್ಕೆ ಉತ್ತರ ಪತ್ರಿಕೆಗಳನ್ನು ಬರೆದಿದ್ದಾರೆ ಎನ್ನಲಾಗಿದೆ.
ಪ್ರತಿ ಸೀಟಿನ ಬೆಲೆ 20 ಲಕ್ಷ ರುಪಾಯಿಗೆ ಮಾತನಾಡಿ ಅದರಲ್ಲಿ 5 ಲಕ್ಷ ರುಪಾಯಿಯನ್ನು ವಿದ್ಯಾರ್ಥಿಯಂತೆ ನಟಿಸಿ ನೀಟ್ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಪ್ರಶ್ನೆ ಪತ್ರಿಕೆಯನ್ನು ಬೆರೆದ ವ್ಯಕ್ತಿಗೆ ನೀಡಲಾಗಿದೆ. ಉಳಿದ ಹಣವನ್ನು ಮಧ್ಯವರ್ತಿಗಳು ಮತ್ತು ಇತರರು ಹಂಚಿಕೊಂಡಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಈ ಪ್ರಕರಣದಲ್ಲಿ 11 ಮಂದಿಯ ಹೆಸರನ್ನು ಸಿಬಿಐ ಗುರುತು ಮಾಡಿಕೊಂಡಿದ್ದು, ಈವರೆಗೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಶೋಧ ನಡೆಯುತ್ತಿದೆ. ದಂಧೆಯ ಮಾಸ್ಟರ್ ಮೈಂಡ್ ಆದ ಸಪ್ದರ್ ಜಂಗ್‌ನ ಸುಶೀಲ್ ರಂಜನ್ ಎಂಬಾತನು ಉತ್ತರ ಪತ್ರಿಕೆಗೆ ಬರೆಯುವವರನ್ನು ನೇಮಿಸಿದ್ದನು ಮತ್ತು ಹಣವನ್ನು ಸಂಗ್ರಹಿಸಿದ್ದನು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಪ್ರಕರಣದ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಲು ಸಿಬಿಐ ಸಂಸ್ಥೆಯು ಪರೀಕ್ಷಾ ಅಭ್ಯರ್ಥಿಗಳೊಂದಿಗೆ ವಿಚಾರಣೆ ನಡೆಸಲಾಗುತ್ತಿದೆ. ಇದರಲ್ಲಿ ಕೋಚಿಂಗ್ ಸಂಸ್ಥೆಗಳ ಪಾತ್ರವೂ ಇರುವುದರ ಬಗ್ಗೆ ತನಿಖೆಯಲ್ಲಿ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ದಂಧೆಯು ಮಾರ್ಫ್ ಮಾಡಿದ ಛಾಯಾಚಿತ್ರಗಳನ್ನು ಬಳಸಿಕೊಂಡು ನೀಟ್ ಗುರುತಿನ ಚೀಟಿಗಳನ್ನು ತಿರುಚುವಲ್ಲಿ ಯಶಸ್ವಿಯಾಗಿದೆ. ಆದ್ದರಿಂದ ಪತ್ರಿಕೆಗೆ ಉತ್ತರಿಸುವವರು ಪರೀಕ್ಷಾ ಹಾಲ್‌ನಲ್ಲಿ ಪ್ರವೇಶವನ್ನು ಪಡೆದಿದ್ದರು. ಆರೋಪಿಗಳು ಅಭ್ಯರ್ಥಿಗಳ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಸಂಗ್ರಹಿಸಿ ಬಯಸಿದ ಪರೀಕ್ಷಾ ಕೇಂದ್ರಗಳನ್ನು ಪಡೆಯಲು ಅಗತ್ಯ ಬದಲಾವಣೆಗಳನ್ನು ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಜುಲೈ 17 ರಂದು ನಡೆದ ನೀಟ್ ಪದವಿಪೂರ್ವ ಪರೀಕ್ಷೆಯು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನಡೆಸಲಾಗಿತ್ತು. ಇದು ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪತಿ ಔಷಧ ಮತ್ತು ನರ್ಸಿಂಗ್ ಕೋರ್ಸ್‌ಗಳಿಗೆ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ಕಡ್ಡಾಯ ಪರೀಕ್ಷೆಯಾಗಿದೆ.












Click it and Unblock the Notifications