NDTV Survey: ಭ್ರಷ್ಟಾಚಾರಕ್ಕಿಂತ ನಿರುದ್ಯೋಗ, ಬಡತನವೇ ಮತದಾರರ ದೊಡ್ಡ ಸಮಸ್ಯೆಗಳು
ನವದೆಹಲಿ, ಮೇ. 02: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಎನ್‌ಡಿಟಿವಿ ಮತದಾರರ ಮನಸ್ಥಿತಿಯನ್ನು ಅಳೆಯಲು ಸಮೀಕ್ಷೆ ನಡೆಸಿದ್ದು, ಕರ್ನಾಟಕದ ಮತದಾರರಿಗೆ ನಿರುದ್ಯೋಗವು ಪ್ರಮುಖ ಸಮಸ್ಯೆಯಾಗಿದ್ದು, ನಂತರದ ಸ್ಥಾನದಲ್ಲಿ ಬಡತನವಿದೆ. ಜೊತೆಗೆ ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಬಹುಪಾಲು ಜನರು ನಂಬುತ್ತಾರೆ ಎಂದು ತಿಳಿಸಿದೆ.
ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (CSDS) ಸಹಯೋಗದೊಂದಿಗೆ ಸಾರ್ವಜನಿಕ ಅಭಿಪ್ರಾಯ ಸಮೀಕ್ಷೆಯನ್ನು ಎನ್‌ಡಿಟಿವಿ ನಡೆಸಿದೆ. ಈ ಸಮೀಕ್ಷೆಯು ಮೇ 10 ರ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಮತದಾರರ ಮನಸ್ಥಿತಿಯನ್ನು ತಿಳಿಯುವ ಪ್ರಯತ್ನವಾಗಿದೆ. ಈ ಸಮೀಕ್ಷೆಯನ್ನು ಏಪ್ರಿಲ್ 20 ಮತ್ತು 28 ರ ನಡುವೆ ನಡೆಸಲಾಗಿದೆ.

ಸಮೀಕ್ಷೆಗೆ ಒಳಗಾದವರಲ್ಲಿ ಶೇಕಡಾ 28 ರಷ್ಟು ಜನರು ನಿರುದ್ಯೋಗ ಈ ಚುನಾವಣೆಯಲ್ಲಿ ಕರ್ನಾಟಕದ ದೊಡ್ಡ ಸಮಸ್ಯೆ ಎಂದು ನಂಬಿದ್ದಾರೆ ಎಂದು ಅಧ್ಯಯನವು ಬಹಿರಂಗಪಡಿಸುತ್ತದೆ. ಬಡತನವು ಎರಡನೆಯದಾಗಿದ್ದು, ಶೇಕಡಾ 25 ರಷ್ಟು ಜನರು ಇದು ರಾಜ್ಯದ ಮುಖ್ಯ ಸಮಸ್ಯೆ ಎಂದಿದ್ದಾರೆ.
ಯುವ ಮತದಾರರಿಗೆ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದ್ದರೆ, ಗ್ರಾಮೀಣ ಕರ್ನಾಟಕದ ಮತದಾರರಿಗೆ ಬಡತನ ದೊಡ್ಡ ಸಮಸ್ಯೆಯಾಗಿದೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 67 ರಷ್ಟು ಜನರು ಕಳೆದ ಐದು ವರ್ಷಗಳಲ್ಲಿ ತಮ್ಮ ಪ್ರದೇಶಗಳಲ್ಲಿ ಬೆಲೆ ಏರಿಕೆಯಾಗಿದೆ ಎಂದು ಹೇಳುತ್ತಾರೆ.

ಸಮೀಕ್ಷೆಗೆ ಒಳಗಾದವರಲ್ಲಿ ಅರ್ಧಕ್ಕಿಂತ ಹೆಚ್ಚು (51%) ಜನರು ಭ್ರಷ್ಟಾಚಾರ ಹೆಚ್ಚಿದೆ ಎಂದು ನಂಬುತ್ತಾರೆ. 35% ಜನರು ಭ್ರಷ್ಟಾಚಾರ ಹಾಗೆಯೇ ಉಳಿದಿದೆ ಎಂದು ಹೇಳುತ್ತಾರೆ. ಗಮನಾರ್ಹವಾಗಿ, 2019 ರ ಕೊನೆಯ ಚುನಾವಣೆಯಿಂದ ಭ್ರಷ್ಟಾಚಾರವು ಹೆಚ್ಚಿದೆ ಎಂದು 41% ಸಾಂಪ್ರದಾಯಿಕ ಬಿಜೆಪಿ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದಾರೆ.
ಸಮೀಕ್ಷೆಯು ಮಾರ್ಚ್‌ನಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಿರುವ ಮತ್ತು ಮುಸ್ಲಿಮರ 4 ಪ್ರತಿಶತ ಇತರ ಹಿಂದುಳಿದ ವರ್ಗಗಳ ಕೋಟಾವನ್ನು ರದ್ದುಗೊಳಿಸುವ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕೋಟಾವನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕುರಿತು ಮತದಾರರಲ್ಲಿ ಪ್ರಶ್ನೆ ಕೇಳಿದೆ.
ಸಮೀಕ್ಷೆ ನಡೆಸಿದವರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಮಾತ್ರ ಹೊಸ ಮೀಸಲಾತಿ ನಿರ್ಧಾರಗಳ ಬಗ್ಗೆ ತಿಳಿದಿದ್ದಾರೆ. ಹೊಸ ಮೀಸಲಾತಿ ನೀತಿಯನ್ನು ಬೆಂಬಲಿಸುವವರು ಹೆಚ್ಚಾಗಿ ಬಿಜೆಪಿಗೆ ಒಲವು ತೋರಿದರೆ, ಅದನ್ನು ವಿರೋಧಿಸುವವರು ಕಾಂಗ್ರೆಸ್ ಬೆಂಬಲಿಗರು ಎಂದು ಸಮೀಕ್ಷೆ ಹೇಳಿದೆ.
ಟಿಪ್ಪು ಸುಲ್ತಾನ್‌ನನ್ನು ಇಬ್ಬರು ಒಕ್ಕಲಿಗ ನಾಯಕ ಉರಿಗೌಡ, ನಂಜೇಗೌಡ ಕೊಂದಿದ್ದಾರೆ ಎಂಬ ವಿವಾದದ ಕುರಿತು, ಸಮೀಕ್ಷೆಯು ಪ್ರತಿ ಮೂವರಲ್ಲಿ ಒಬ್ಬರಿಗೆ ವಿಷಯದ ಬಗ್ಗೆ ತಿಳಿದಿದೆ ಮತ್ತು 74% ರಷ್ಟು ಪ್ರತಿಕ್ರಿಯೆ ವಿವಾದವು ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಿದೆ ಎಂದು ಭಾವಿಸುತ್ತಾರೆ ಎಂದು ಹೇಳಿದೆ.
ಈ ಅಭಿಪ್ರಾಯ ಸಂಗ್ರಹದಲ್ಲಿ ನಿರ್ಣಯಿಸಲಾದ ಮತ್ತೊಂದು ಪ್ರಮುಖ ಅಂಶವೆಂದರೆ "ಪ್ರಾದೇಶಿಕ ತಾರತಮ್ಯ". ಹೆಚ್ಚಿನ ಜನರು (41%) ಉತ್ತರ ಕರ್ನಾಟಕಕ್ಕೆ ತಾರತಮ್ಯ ಮಾಡಲಾಗುತ್ತಿದೆ ಎಂದು ನಂಬಿದ್ದಾರೆ. ಅಲ್ಲದೆ, ಇತರ ಪ್ರದೇಶಗಳಿಗಿಂತ ಬೆಂಗಳೂರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು 66% ಜನರು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ಮತ್ತು ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯ ಕಾರ್ಯವೈಖರಿಯನ್ನು ನಿರ್ಣಯಿಸಲು ಮತದಾರರನ್ನು ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವವರಲ್ಲಿ ರಸ್ತೆಗಳು, ವಿದ್ಯುತ್ ಸರಬರಾಜು ಮತ್ತು ಕುಡಿಯುವ ನೀರಿನ ಸುಧಾರಣೆಯಾಗಿಲ್ಲ ಎಂದು ಹೇಳಿರುವವರೇ ಹೆಚ್ಚು. ಸರ್ಕಾರಿ ಆಸ್ಪತ್ರೆಗಳು ಮತ್ತು ಶಾಲೆಗಳು ಯಾವುದೇ ಸುಧಾರಣೆ ಹೊಂದಿಲ್ಲ ಎಂದು ಹೆಚ್ಚಿನ ಮತದಾರರು ಆರೋಪಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಒಟ್ಟಾರೆ ಕಾರ್ಯಕ್ಷಮತೆಯ ಬಗ್ಗೆ, 27% ರಷ್ಟು ಜನರು ಕರ್ನಾಟಕದ ಬಿಜೆಪಿ ಸರ್ಕಾರದ ಬಗ್ಗೆ "ಸಂಪೂರ್ಣವಾಗಿ ತೃಪ್ತಿ ಹೊಂದಿದ್ದೇವೆ" ಎಂದು ಹೇಳಿದ್ದಾರೆ. 24% ಜನರು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ 36% ಜನರು ಅಲ್ಪ ತೃಪ್ತಿ ಎಂದಿದ್ದು, ಕೇಂದ್ರದಲ್ಲಿ ಪಕ್ಷದ ಸರ್ಕಾರಕ್ಕೆ 42% ಜನರು ಅಲ್ಪ ತೃಪ್ತಿ ಎಂದಿದ್ದಾರೆ.
ಕಲ್ಯಾಣ ಯೋಜನೆಗಳು ಮತದಾರರ ಮೇಲೆ ದೊಡ್ಡ ಪರಿಣಾಮ ಬೀರಿವೆ ಮತ್ತು ಕೇಂದ್ರ ಮತ್ತು ರಾಜ್ಯ ಎರಡೂ ಯೋಜನೆಗಳ ಫಲಾನುಭವಿಗಳು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಇನ್ನು, ಯಾದೃಚ್ಛಿಕವಾಗಿ ಆಯ್ಕೆಯಾದ 21 ವಿಧಾನಸಭಾ ಕ್ಷೇತ್ರಗಳಲ್ಲಿ 82 ಮತಗಟ್ಟೆಗಳಲ್ಲಿ ಒಟ್ಟು 2,143 ಮತದಾರರನ್ನು ಸಮೀಕ್ಷೆಗಾಗಿ ಸಂದರ್ಶಿಸಲಾಗಿದೆ.












Click it and Unblock the Notifications