ವಿರೋಧ ಪಕ್ಷಗಳ ಸಭೆ; ಶರದ್ ಪವಾರ್ ಗೈರಾಗಲಿದ್ದಾರೆಯೇ?
ಬೆಂಗಳೂರು, ಜುಲೈ 17; ಬೆಂಗಳೂರಿನಲ್ಲಿ ಆರಂಭಗೊಂಡಿರುವ ವಿರೋಧ ಪಕ್ಷಗಳ ಸಭೆಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಗೈರಾಗಲಿದ್ದಾರೆಯೇ?. ಸಭೆಯಲ್ಲಿ ಪಾಲ್ಗೊಳ್ಳಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಗರಕ್ಕೆ ಸೋಮವಾರ ಮಧ್ಯಾಹ್ನ ಆಗಮಿಸಿದ್ದಾರೆ.
82 ವರ್ಷದ ಶರದ್ ಪವಾರ್ ವಿರೋಧ ಪಕ್ಷಗಳ ಸಭೆಯಿಂದ ದೂರ ಉಳಿಯಲಿದ್ದಾರೆ ಎಂಬ ವರದಿಗಳನ್ನು ಎನ್‌ಸಿಪಿ ಪಕ್ಷ ತಳ್ಳಿ ಹಾಕಿದೆ. ಪುತ್ರಿ ಸುಪ್ರಿಯಾ ಸುಳೆ ಜೊತೆ ಶರದ್ ಪವಾರ್ ಸಭೆಗೆ ಆಗಮಿಸಲಿದ್ದು, ಸೋಮವಾರ ಸಂಜೆಯ ವೇಳಗೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ.

ಬಿಹಾರದ ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಮೊದಲ ಸಭೆಯಲ್ಲಿಯೂ ಶರದ್ ಪವಾರ್ ಪಾಲ್ಗೊಂಡಿದ್ದರು. ಆದರೆ ಈಗ ಅಜಿತ್ ಪವಾರ್ ನಡೆಯ ಬಳಿಕ ವಿರೋಧ ಪಕ್ಷಗಳ ಸಭೆಯಿಂದ ಅವರು ದೂರ ಉಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಎನ್‌ಸಿಪಿ ಈ ವರದಿಗಳನ್ನು ತಳ್ಳಿಹಾಕಿದೆ. ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಶರದ್ ಪವಾರ್ ವಿವಿಧ ಪಕ್ಷಗಳ ಮನವೊಲಿಕೆ ಮಾಡಿದ್ದರು.
2024ರ ಲೋಕಸಭೆ ಚುನಾವಣೆಗೆ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಸಂಘಟಿಸುವಲ್ಲಿ ಶರದ್ ಪವಾರ್ ಪ್ರಮುಖ ಪಾತ್ರವಹಿಸಿದ್ದಾರೆ. ಎನ್‌ಸಿಪಿ ಹೊರತುಪಡಿಸಿ ಬೇರೆ-ಬೇರೆ ಪಕ್ಷಗಳು ಸಹ ಶರದ್ ಪವಾರ್ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿವೆ.
ಶಿವಸೇನೆ ಭಾಗಿಯಾಗಲಿದೆ; ಬೆಂಗಳೂರಿನಲ್ಲಿ ನಡೆಯುತ್ತಿರುವ ವಿರೋಧ ಪಕ್ಷಗಳ ಸಭೆಯಲ್ಲಿ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಪಾಲ್ಗೊಳ್ಳಲಿದ್ದಾರೆ. "ಶರದ್ ಪವಾರ್ ವಿರೋಧ ಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಾವೆಲ್ಲರೂ ಒಂದಾಗಿಯೇ ಇದ್ದೇವೆ" ಎಂದು ಶಿವಸೇನೆ ನಾಯಕ ಸಂಜಯ್ ರಾವ್ ಹೇಳಿದ್ದಾರೆ.
ಎನ್‌ಸಿಪಿಯಿಂದ ಹೊರಬಂದು ಮಹಾರಾಷ್ಟ್ರದ ಏಕನಾಥ ಶಿಂಧೆ ಸರ್ಕಾರಕ್ಕೆ ಬೆಂಬಲ ನೀಡಿದ ಅಜಿತ್ ಪವಾರ್ ನಡೆಯ ಬಳಿಕ ಶರದ್ ಪವಾರ್ ವಿರೋಧ ಪಕ್ಷಗಳ ಸಭೆಯಿಂದ ದೂರ ಉಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಪೂರಕ ಎಂಬಂತೆ ಭಾನುವಾರ ರಾತ್ರಿ ಅಜಿತ್ ಪವಾರ್ ಶರದ್ ಪವಾರ್ ಭೇಟಿ ಮಾಡಿದ್ದರು.
ಸದ್ಯ ಶರದ್ ಪವಾರ್ ಮುಂಬೈನಲ್ಲಿಯೇ ಇದ್ದಾರೆ. ಅಜಿತ್ ಪವಾರ್ ಮತ್ತೊಮ್ಮೆ ಅವರ ಭೇಟಿಗಾಗಿ ಆಗಮಿಸಿದ್ದಾರೆ. 24 ಗಂಟೆಗಳ ಅವಧಿಯಲ್ಲಿ ಉಭಯ ನಾಯಕರು 2ನೇ ಬಾರಿಗೆ ಭೇಟಿಯಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಅಜಿತ್ ಪವಾರ್ ಶರದ್ ಪವಾರ್ ಆಶೀರ್ವಾದ ಪಡೆಯಲು ಆಗಮಿಸಿದ್ದರು. ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಪ್ರಫುಲ್ ಪಟೇಲ್ ಹೇಳಿದ್ದಾರೆ. ವಿರೋಧ ಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳಲು ಶರದ್ ಪವಾರ್ ಇಂದು ರಾತ್ರಿ ಅಥವ ಮಂಗಳವಾರ ಬೆಳಗ್ಗೆ ಬೆಂಗಳೂರು ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ.
2024ರ ಲೋಕಸಭೆ ಚುನಾವಣೆಯ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ ಕರೆದಿರುವ ವಿರೋಧ ಪಕ್ಷಗಳ ಸಭೆಯಲ್ಲಿ 24 ಪಕ್ಷಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಾಂಗ್ರೆಸ್ ನಾಯಕಿ, ಸೋನಿಯಾ ಗಾಂಧಿ ಮತ್ತು ನಾಯಕ ರಾಹುಲ್ ಗಾಂಧಿ ಸೋಮವಾರ ಮಧ್ಯಾಹ್ನ ಬೆಂಗಳೂರು ನಗರಕ್ಕೆ ಆಗಮಿಸಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್, ಎಎಪಿಯ ಅರವಿಂದ ಕೇಜ್ರಿವಾಲ್, ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಮುಖ ನಾಯಕರು.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬೆಂಗಳೂರಿನಲ್ಲಿ ನಡೆಯುವ ಸಭೆಯಿಂದ ದೂರ ಉಳಿಯಲಿದ್ದಾರೆ.












Click it and Unblock the Notifications