ಕಂಠಪಾಠದ ಬದಲಿಗೆ ಪ್ರಾಯೋಗಿಕ ಕಲಿಕೆ: 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ AI ಪಠ್ಯಕ್ರಮ ಪರಿಚಯಿಸಿದ NCERT
ನವದೆಹಲಿ: ದೈನಂದಿನ ಜೀವನದಲ್ಲಿ ಟೆಕ್ನಾಲಜಿ ಬಳಕೆ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ, ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಬೇಕಾಗಿರುವ ಎಐ ಅಂದರೆ ಈ ಕೃತಕ ಬುದ್ಧಿಮತ್ತೆ ಬಗ್ಗೆ ಜ್ಞಾನ ಮೂಡಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಮಹತ್ವದ ಹೆಜ್ಜೆಯಿಟ್ಟಿದೆ.
ಹೌದು, 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ 20 ಗಂಟೆಗಳ ಎನ್‌ಸಿಇಆರ್‌ಟಿ ಎಐ ಪಠ್ಯಕ್ರಮವನ್ನು ಹೊಸದಾಗಿ ಬಿಡುಗಡೆ ಮಾಡಲಾಗಿದೆ.

ಐಐಟಿ ಮದ್ರಾಸ್ ಮತ್ತು ಐಐಟಿ ಜೋಧ್‌ಪುರದ ಬೋಧಕವರ್ಗದ ತಜ್ಞರ ಸಹಯೋಗದೊಂದಿಗೆ ಈ ಮಾಡ್ಯೂಲ್ ಅನ್ನು ಸಿದ್ಧಪಡಿಸಲಾಗಿದೆ. ಕೃತಕ ಬುದ್ಧಿಮತ್ತೆಯ ಬಗ್ಗೆ ಯಾವುದೇ ಜ್ಞಾನವಿಲ್ಲದ ವಿದ್ಯಾರ್ಥಿಗಳೂ ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ, ದೈನಂದಿನ ನಿಜವಾದ ಉದಾಹರಣೆಗಳ ಮೂಲಕ ಈ ಪಠ್ಯವನ್ನ ವಿನ್ಯಾಸಗೊಳಿಸಿರುವುದು ಇದರ ವಿಶೇಷತೆಯಾಗಿದೆ.
ದೈನಂದಿನ ಉದಾಹರಣೆಗಳ ಮೂಲಕ ಎಐ ಕಲಿಕೆ
ಈ ಹೊಸ ಎಐ ಮಾಡ್ಯೂಲ್ ಅನ್ನು ಐದು ಪ್ರಮುಖ ಘಟಕಗಳಾಗಿ ವಿಂಗಡಿಸಲಾಗಿದೆ. ಮೊದಲ ಘಟಕದಲ್ಲಿ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಕಲಿಕೆ ಮತ್ತು ಸಾಮಾನ್ಯ ಮೇಶಿನ್‌ಗಳ ನಡುವಿನ ವ್ಯತ್ಯಾಸವನ್ನ ತಿಳಿಸಲಾಗುತ್ತದೆ.
ಉದಾಹರಣೆಗೆ, ಒತ್ತಡಕ್ಕೆ ಪ್ರತಿಕ್ರಿಯಿಸುವ ಪ್ರೆಶರ್ ಕುಕ್ಕರ್, ನಿಗದಿತ ನಿಯಮಗಳ ಅಡಿ ಕಾರ್ಯನಿರ್ವಹಿಸುವ ಫಾಸ್ಟ್‌ಟ್ಯಾಗ್ ಹಾಗೂ ಹಿಂದಿನ ಉದಾಹರಣೆಗಳಿಂದ ಕಲಿತು ಮುಂದಿನ ಪದವನ್ನು ಊಹಿಸುವ ಸ್ಮಾರ್ಟ್‌ಫೋನ್ ಕೀಬೋರ್ಡ್‌ಗಳ ನಡುವಿನ ವ್ಯತ್ಯಾಸವನ್ನ ವಿವರಿಸಲಾಗಿದೆ.
ಅಲ್ಲದೆ, ಎಐ ಭಾಷಾಂತರ ಆ್ಯಪ್‌ಗಳು ಸಂಸ್ಕೃತಿ ಮತ್ತು ನಾಣ್ಣುಡಿಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಹೇಗೆ ಎಡವುತ್ತವೆ ಎಂಬುದನ್ನು ಭೋಪಾಲ್‌ನ ವಿದ್ಯಾರ್ಥಿನಿಯೊಬ್ಬಳ ಉದಾಹರಣೆ ಮೂಲಕ ವಿವರಿಸಲಾಗಿದೆ.
ಮೇಶಿನ್ ಲರ್ನಿಂಗ್ ಮತ್ತು ತಪ್ಪುಗಳ ವಿಶ್ಲೇಷಣೆ
ಎರಡನೇ ಮತ್ತು ಮೂರನೇ ಘಟಕವು ಮೇಶಿನ್ ಲರ್ನಿಂಗ್ ಮತ್ತು ತಪ್ಪುಗಳ ವಿಶ್ಲೇಷಣೆಯ ಮೇಲೆ ಕೇಂದ್ರೀಕರಿಸಿದೆ. ಎಐ ಉಪಕರಣಗಳು ಹೇಗೆ ಕಲಿಯುತ್ತವೆ? ತರಬೇತಿ ಪಡೆಯದ ವಸ್ತುಗಳನ್ನ ಗುರುತಿಸುವಾಗ ಅವು ಹೇಗೆ ವಿಫಲವಾಗುತ್ತವೆ ಎಂಬುದನ್ನ ತರಗತಿಯ ಚಟುವಟಿಕೆಗಳ ಮೂಲಕ ಹೇಳಿಕೊಡಲಾಗುತ್ತದೆ.
ಕೆಲವೊಮ್ಮೆ ಎಐ ನೀಡುವ ಉತ್ತರಗಳು ಅತ್ಯಂತ ನಿಖರ ಎಂಬಂತೆ ಕಂಡರೂ, ಅವು ತಪ್ಪು ಮಾಹಿತಿಯಿಂದ ಕೂಡಿರಬಹುದು. ಹೀಗಾಗಿ ವಿದ್ಯಾರ್ಥಿಗಳು 'ಹ್ಯಾಲುಸಿನೇಷನ್ ಹಂಟ್ʼ ಎಂಬ ಚಟುವಟಿಕೆಯ ಮೂಲಕ ಎಐ ನೀಡಿದ ಉತ್ತರಗಳನ್ನ ಕುರುಡಾಗಿ ನಂಬುವ ಮುನ್ನ ಅದರ ಮೂಲವನ್ನ ಹೇಗೆ ಪರಿಶೀಲಿಸಬೇಕು, ಕೃತಕವಾಗಿ ಸೃಷ್ಟಿಸಲಾದ ಫೇಕ್ ವಿಡಿಯೋ/ಫೋಟೋಗಳನ್ನ ಹೇಗೆ ಪತ್ತೆಹಚ್ಚಬೇಕು ಎಂಬುದನ್ನ ಕಲಿಯಲಿದ್ದಾರೆ.
ಡೇಟಾ ಸುರಕ್ಷತೆ ಮತ್ತು ಪ್ರಾಯೋಗಿಕ ಜ್ಞಾನ
ನಾಲ್ಕನೇ ಮತ್ತು ಐದನೇ ಘಟಕದಲ್ಲಿ ಆನ್‌ಲೈನ್ ಲೋಕದ 'ಡೇಟಾ ಸುರಕ್ಷತೆ' ಹಾಗೂ ಆಧುನಿಕ ಎಐ ಟೂಲ್‌ಗಳ ಬಳಕೆಯ ಬಗ್ಗೆ ತಿಳಿಸಲಾಗಿದೆ. ಯಾವುದೇ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡುವಾಗ, ಅದು ಯಾವೆಲ್ಲಾ ಡೇಟಾ ಸಂಗ್ರಹಿಸುತ್ತದೆ? ಅದನ್ನ ಯಾರೊಂದಿಗೆ ಹಂಚಿಕೊಳ್ಳುತ್ತದೆ? ಎಂಬುದನ್ನ ಪ್ರಶ್ನಿಸುವ ಹಕ್ಕು ವಿದ್ಯಾರ್ಥಿಗಳಿಗಿದೆ ಎಂದು ವಿವರಿಸಲಾಗಿದೆ.
ಎಐ ಅನ್ನ ನಮ್ಮ ಆಲೋಚನಾ ಶಕ್ತಿಗೆ ಪರ್ಯಾಯವಾಗಿ ಬಳಸಬಾರದು, ಬದಲಾಗಿ ನಮ್ಮ ಕೆಲಸವನ್ನು ಸುಲಭಗೊಳಿಸುವ ಸಹಾಯಕನಾಗಿ ಮಾತ್ರ ಬಳಸಬೇಕು ಎಂದು ಈ ಪಠ್ಯಕ್ರಮದಲ್ಲಿ ಸ್ಪಷ್ಟವಾಗಿ ಎಚ್ಚರಿಸಲಾಗಿದೆ.
ಡಿಜಿಟಲ್ ಸಾಧನಗಳಿಲ್ಲದ ಗ್ರಾಮೀಣ ಶಾಲಾ ಮಕ್ಕಳೂ ಸಹ, ಪೆನ್ನು-ಪೇಪರ್ ಬಳಸಿ ಎಐ ಪ್ರಾಂಪ್ಟ್‌ಗಳನ್ನ ಬರೆಯುವ ಮೂಲಕ ತರಗತಿಯಲ್ಲಿ ರೋಲ್ ಪ್ಲೇ ಮುಖಾಂತರ ಎಐ ಕಾರ್ಯನಿರ್ವಹಣೆಯನ್ನು ಕಲಿಯಬಹುದು.
ಶಿಕ್ಷಣ ತಜ್ಞರ ಮೆಚ್ಚುಗೆ
ಎನ್‌ಸಿಇಆರ್‌ಟಿಯ ಈ ಹೊಸ ನಡೆಯನ್ನ ಶಿಕ್ಷಣ ತಜ್ಞರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ದೆಹಲಿಯ ಮೌಂಟ್ ಅಬು ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲೆ ಜ್ಯೋತಿ ಅರೋರಾ, "9ನೇ ತರಗತಿಯಿಂದಲೇ ಎಐ ಶಿಕ್ಷಣವನ್ನ ಪರಿಚಯಿಸುತ್ತಿರುವುದು ಅತ್ಯಂತ ಪ್ರಗತಿಪರ ಹೆಜ್ಜೆಯಾಗಿದೆ. ಇದು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಹಾಗೂ ತಂತ್ರಜ್ಞಾನದ ನೈತಿಕ ಬಳಕೆಯನ್ನ ಉತ್ತೇಜಿಸುತ್ತದೆ" ಎಂದಿದ್ದಾರೆ.
ಈ ಪಠ್ಯವನ್ನು ಸಿದ್ಧಪಡಿಸಿದ ತಜ್ಞರ ತಂಡವು ವಿದ್ಯಾರ್ಥಿಗಳಿಗೆ ಒಂದು ಸ್ಪಷ್ಟ ಸಂದೇಶ ರವಾನಿಸಿದೆ: "ಇದನ್ನು ಕಂಠಪಾಠ ಮಾಡಲು ಸಿದ್ಧಪಡಿಸಿದ ಪಠ್ಯವಲ್ಲ. ಇದು ನೀವು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಹಾಗೂ ಅಭ್ಯಾಸ ಮಾಡಬೇಕಾದ ಕೌಶಲವಾಗಿದೆ."


Click it and Unblock the Notifications
