ಭ್ರಷ್ಟಾಚಾರ, ಬಾಕಿ ಪ್ರಕರಣಗಳ ರಾಶಿ, ನ್ಯಾಯಾಧೀಶರ ಕೊರತೆ: ನ್ಯಾಯಾಂಗದ 'ಕಟು ಸತ್ಯ' ಬಿಚ್ಚಿಟ್ಟ NCERT ಪಠ್ಯಪುಸ್ತಕ
ನವದೆಹಲಿ: ಭ್ರಷ್ಟಾಚಾರ, ನ್ಯಾಯಾಲಯಗಳಲ್ಲಿ ದಶಕಗಳಿಂದ ಬಾಕಿ ಉಳಿದಿರುವ ಲಕ್ಷಾಂತರ ಪ್ರಕರಣಗಳು ಮತ್ತು ಅಗತ್ಯವಿರುವಷ್ಟು ನ್ಯಾಯಾಧೀಶರ ಕೊರತೆ.. ಇವು ಭಾರತೀಯ ನ್ಯಾಯಾಂಗ ವ್ಯವಸ್ಥೆ ಪ್ರಸ್ತುತ ಎದುರಿಸುತ್ತಿರುವ ಅತ್ಯಂತ ಪ್ರಮುಖ ಸವಾಲುಗಳು ಎಂದು 8ನೇ ತರಗತಿಯ ಹೊಸ ಎನ್‌ಸಿಇಆರ್‌ಟಿ (NCERT) ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ದೇಶದ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳ ನೈಜ ಸ್ಥಿತಿಗತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಿದೆ. ಹೊಸ ಪಠ್ಯಪುಸ್ತಕದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ (Corruption in the judiciary) ಎಂಬ ವಿಶೇಷ ವಿಭಾಗವನ್ನು ಸೇರಿಸಲಾಗಿದೆ. ನ್ಯಾಯಾಧೀಶರು ಕೇವಲ ನ್ಯಾಯಾಲಯದ ಒಳಗೆ ಮಾತ್ರವಲ್ಲ, ನ್ಯಾಯಾಲಯದ ಹೊರಗಡೆಯೂ ಸಾರ್ವಜನಿಕವಾಗಿ ತಮ್ಮ ನಡವಳಿಕೆಯನ್ನು ನಿಯಂತ್ರಿಸುವ ಕಠಿಣ ನೀತಿಸಂಹಿತೆಗೆ (Code of conduct) ಬದ್ಧರಾಗಿರಬೇಕು ಎಂದು ಪುಸ್ತಕದಲ್ಲಿ ಎಳೆಎಳೆಯಾಗಿ ವಿವರಿಸಲಾಗಿದೆ.

ಹಿಂದಿನ ಆವೃತ್ತಿಯ ಪಠ್ಯಪುಸ್ತಕಗಳು ಕೇವಲ ನ್ಯಾಯಾಲಯಗಳ ರಚನೆ ಹೇಗಿದೆ, ಅವುಗಳ ಪಾತ್ರವೇನು ಎಂಬುದನ್ನು ಮಾತ್ರ ತಿಳಿಸುತ್ತಿದ್ದವು. ಆದರೆ, ಇದೀಗ ಸಂಪೂರ್ಣವಾಗಿ ಪರಿಷ್ಕೃತಗೊಂಡಿರುವ 'ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ' ಎಂಬ ಅಧ್ಯಾಯವು, ನ್ಯಾಯಾಲಯಗಳ ಶ್ರೇಣಿ ಮತ್ತು ಜನಸಾಮಾನ್ಯರಿಗೆ ನ್ಯಾಯದ ಲಭ್ಯತೆಯನ್ನು ವಿವರಿಸುವುದರ ಜೊತೆಗೆ, ನ್ಯಾಯಾಂಗ ವ್ಯವಸ್ಥೆಯು ಪ್ರಸ್ತುತ ಎದುರಿಸುತ್ತಿರುವ ನೈಜ ಹಾಗೂ ಕಠಿಣ ಸವಾಲುಗಳನ್ನು ವಿದ್ಯಾರ್ಥಿಗಳಿಗೆ ತೆರೆದಿಡುತ್ತಿದೆ.
ಪಠ್ಯದಲ್ಲಿನ ಉಲ್ಲೇಖವೇನು?
"ಜನಸಾಮಾನ್ಯರು ನ್ಯಾಯಾಂಗದ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರವನ್ನು ಅನುಭವಿಸುತ್ತಿದ್ದಾರೆ. ಬಡವರು, ಶೋಷಿತರು ಮತ್ತು ಹಿಂದುಳಿದ ವರ್ಗದವರಿಗೆ ಇದು ನ್ಯಾಯದ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತದೆ. ಹೀಗಾಗಿ, ಡಿಜಿಟಲೀಕರಣ ಹಾಗೂ ತಂತ್ರಜ್ಞಾನದ ಬಳಕೆ ಸೇರಿದಂತೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ಭ್ರಷ್ಟಾಚಾರದ ಪ್ರಕರಣಗಳು ಎದುರಾದಾಗ ಅದರ ವಿರುದ್ಧ ತ್ವರಿತ ಹಾಗೂ ನಿರ್ಣಾಯಕ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ" ಎಂದು ಪಠ್ಯದಲ್ಲಿ ವಿವರಿಸಲಾಗಿದೆ.
ಬಾಕಿ ಉಳಿದಿರುವ ಪ್ರಕರಣಗಳು
ದೇಶದ ವಿವಿಧ ಹಂತದ ನ್ಯಾಯಾಲಯಗಳಲ್ಲಿ ವಿಲೇವಾರಿಯಾಗದೆ ಕೊಳೆಯುತ್ತಿರುವ ಪ್ರಕರಣಗಳ ಆತಂಕಕಾರಿ ಅಂಕಿ-ಅಂಶಗಳನ್ನು ಸಹ ಪಠ್ಯಪುಸ್ತಕದಲ್ಲಿ ಅಧಿಕೃತವಾಗಿ ನೀಡಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಅಂದಾಜು 81,000, ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ 62.40 ಲಕ್ಷ ಮತ್ತು ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಬರೋಬ್ಬರಿ 4.70 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ ಎಂಬ ಅಂಕಿ-ಅಂಶವನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ. ಇಷ್ಟು ದೊಡ್ಡ ಮಟ್ಟದ ಪ್ರಕರಣಗಳು ಬಾಕಿ ಇರಲು ನ್ಯಾಯಾಧೀಶರ ಕೊರತೆಯೇ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.
ನ್ಯಾಯಾಂಗದ ಆಂತರಿಕ ಹೊಣೆಗಾರಿಕೆಯ ಕಾರ್ಯವಿಧಾನಗಳನ್ನು ಎತ್ತಿತೋರಿಸಿರುವ ಪಠ್ಯವು, 'ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯ (CPGRAMS) ಮೂಲಕ ಸಾರ್ವಜನಿಕರು ದೂರುಗಳನ್ನು ಸ್ವೀಕರಿಸುವ ಪ್ರಕ್ರಿಯೆಯನ್ನು ಉಲ್ಲೇಖಿಸಿದೆ. ಪುಸ್ತಕದ ಅಂಕಿ-ಅಂಶಗಳ ಪ್ರಕಾರ, 2017 ರಿಂದ 2021 ರ ನಡುವೆ ಈ ವ್ಯವಸ್ಥೆಯ ಮೂಲಕ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಕುರಿತಾಗಿ 1,600ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದೆ.
ಮಾಜಿ ಸಿಜೆಐ ಗವಾಯಿ ಹೇಳಿಕೆ ಉಲ್ಲೇಖ
ನ್ಯಾಯಾಂಗದ ಮೇಲಿನ ಸಾರ್ವಜನಿಕರ ವಿಶ್ವಾಸದ ಬಗ್ಗೆ 2025ರ ಜುಲೈ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ (CJI) ಬಿ.ಆರ್. ಗವಾಯಿ ಅವರು ನೀಡಿದ್ದ ಹೇಳಿಕೆಯೊಂದನ್ನು ಸಹ ಈ ಪಠ್ಯಪುಸ್ತಕದಲ್ಲಿ ಉಲ್ಲೇಖಿಸಿರುವುದು ವಿಶೇಷವಾಗಿದೆ. "ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಮತ್ತು ದುರ್ನಡತೆಯ ನಿದರ್ಶನಗಳು ಸಾರ್ವಜನಿಕರ ವಿಶ್ವಾಸದ ಮೇಲೆ ಭಾರೀ ನಕಾರಾತ್ಮಕ ಪ್ರಭಾವ ಬೀರಿದೆ. ಆದಾಗ್ಯೂ, ಜನರಲ್ಲಿ ಈ ನಂಬಿಕೆಯನ್ನು ಮರುನಿರ್ಮಾಣ ಮಾಡುವ ಹಾದಿಯು, ಇಂತಹ ಸಮಸ್ಯೆಗಳನ್ನು ಬೇರುಸಹಿತ ಪರಿಹರಿಸಲು ತೆಗೆದುಕೊಳ್ಳುವ ತ್ವರಿತ, ನಿರ್ಣಾಯಕ ಮತ್ತು ಪಾರದರ್ಶಕ ಕ್ರಮಗಳಲ್ಲಿದೆ. ಪಾರದರ್ಶಕತೆ ಮತ್ತು ಹೊಣೆಗಾರಿಕೆ ಎಂಬುದು ಪ್ರಜಾಸತ್ತಾತ್ಮಕ ಮೌಲ್ಯಗಳಾಗಿವೆ" ಎಂಬ ಅವರ ಮಾತುಗಳನ್ನು ಪುಸ್ತಕದಲ್ಲಿ ಮುದ್ರಿಸಲಾಗಿದೆ.
ಒಟ್ಟಾರೆಯಾಗಿ, ಕೇವಲ ಸಕಾರಾತ್ಮಕ ಅಂಶಗಳನ್ನು ಮಾತ್ರವಲ್ಲದೆ, ದೇಶದ ಪ್ರಜಾಪ್ರಭುತ್ವದ ಆಧಾರ ಸ್ತಂಭವಾಗಿರುವ ನ್ಯಾಯಾಂಗ ವ್ಯವಸ್ಥೆಯ ಲೋಪಗಳು, ಸವಾಲುಗಳನ್ನು ಸಹ ಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಮಹತ್ವದ ಹೆಜ್ಜೆಯನ್ನು ಶಿಕ್ಷಣ ಇಲಾಖೆ ಹಾಗೂ ಎನ್‌ಸಿಇಆರ್‌ಟಿ ಇಟ್ಟಿದೆ.
-
CBSE ಶಾಲೆಗಳಲ್ಲಿ ಋತುಚಕ್ರ ನೈರ್ಮಲ್ಯ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಹೊಸ ನಿಯಮ ಜಾರಿ -
UPSC ಪೂರ್ವಭಾವಿ ಪರೀಕ್ಷೆ ಮುಗಿದ ತಕ್ಷಣವೇ ಕೀ ಉತ್ತರಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ನಿರ್ಧಾರ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
ಸರ್ಕಾರಿ PU ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಬರೋಬ್ಬರಿ 9,383 ರೂ. ಲಕ್ಷ ಅನುದಾನ ಮಂಜೂರು -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ













Click it and Unblock the Notifications