ವಿಘ್ನೇಶ್-ನಯನತಾರಾ ಬಾಡಿಗೆ ತಾಯ್ತನ ಪ್ರಕರಣ; ಕಾನೂನು ಉಲ್ಲಂಘಿಸಿಲ್ಲ ಎಂದ ವರದಿ
ಚೆನ್ನೈ, ಅ. 27: ಬಾಡಿಗೆ ತಾಯ್ತನ ಪ್ರಕರಣದಲ್ಲಿ ವಿವಾದಕ್ಕೆ ಗುರಿಯಾಗಿದ್ದ ನಟಿ ನಯನತಾರಾ ಮತ್ತು ನಿರ್ದೇಶಕ ಪತಿ ವಿಘ್ನೇಶ್ ಶಿವನ್‌ಗೆ ಸರ್ಕಾರ ಕ್ಲೀನ್ ಚಿಟ್ ನೀಡಿದೆ.
ತಮಿಳುನಾಡು ಆರೋಗ್ಯ ಇಲಾಖೆ ಬುಧವಾರ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್‌ಗೆ ಕ್ಲೀನ್ ಚಿಟ್ ನೀಡಿದ್ದು, ದಂಪತಿ ಬಾಡಿಗೆ ತಾಯ್ತನದ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದು, ನವಜಾತ ಅವಳಿ ಗಂಡು ಮಕ್ಕಳ ವಿವಾದಕ್ಕೆ ಅಂತ್ಯ ಹಾಡಿದೆ.
ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಕರಣದ ತನಿಖೆಗಾಗಿ ಈ ತಿಂಗಳ ಆರಂಭದಲ್ಲಿ ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಮಾರ್ಚ್ 11, 2016 ರಂದು ನಯನತಾರಾ ಮತ್ತು ವಿಘ್ನೇಶ್ ತಮ್ಮ ವಿವಾಹವನ್ನು ನೋಂದಾಯಿಸಿದ್ದಾರೆ ಎಂದು ಕಂಡುಹಿಡಿದಿದೆ. ಅವರ ಕುಟುಂಬ ವೈದ್ಯರು 2020 ರಲ್ಲಿ ಪತ್ರವೊಂದರಲ್ಲಿ ಬಾಡಿಗೆ ತಾಯ್ತನಕ್ಕೆ ಶಿಫಾರಸು ಮಾಡಿದ್ದರು ಎಂಬುದನ್ನು ತಿಳಿಸಿದೆ.
"ಬಾಡಿಗೆ ತಾಯಿಯು ಸೂಕ್ತ ವಯಸ್ಸಿನವಳಾಗಿದ್ದಾರೆ. ಮದುವೆಯಾಗಿದ್ದಾಳೆ ಮತ್ತು ಮಗುವನ್ನು ಹೊಂದಿದ್ದಾರೆ. ಇದೆಲ್ಲವೂ ಕಾನೂನಿನ ಅಡಿಯಲ್ಲಿ ಕಡ್ಡಾಯವಾಗಿದೆ" ಎಂದು ಸಮಿತಿಯು ಹೇಳಿದೆ, ಉದ್ದೇಶಿತ ದಂಪತಿಯ ವಯಸ್ಸು ಅರ್ಹತೆಯ ಮಾನದಂಡದಲ್ಲಿದೆ" ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ನಯನತಾರಾ - ವಿಘ್ನೇಶ್ ಶಿವನ್ ಕಾನೂನು ಉಲ್ಲಂಘಿಸಿಲ್ಲ
"ಆಗಸ್ಟ್ 2020 ರಲ್ಲಿ ಓಸೈಟ್ಸ್ ಮತ್ತು ವೀರ್ಯವನ್ನು ಪಡೆಯಲಾಗಿದೆ. ಆಸ್ಪತ್ರೆಯಲ್ಲಿ ರಚಿಸಲಾದ ಭ್ರೂಣಗಳನ್ನು ಕ್ರಯೋಪ್ರೆಸರ್ವ್ ಮಾಡಲಾಗಿದೆ. ನವೆಂಬರ್ 2021 ರಲ್ಲಿ ಬಾಡಿಗೆ ತಾಯ್ತನದ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಮಾರ್ಚ್ 2022 ರಲ್ಲಿ ಬಾಡಿಗೆ ತಾಯಿಯ ಗರ್ಭಾಶಯದಲ್ಲಿ ಭ್ರೂಣಗಳನ್ನು ಅಳವಡಿಸಲಾಯಿತು. ಆಕೆ ಅಕ್ಟೋಬರ್‌ನಲ್ಲಿ ಹೆರಿಗೆಯಾಗಿದ್ದಾರೆ" ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಕ್ಟೋಬರ್‌ನಲ್ಲಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಸಿ-ಸೆಕ್ಷನ್ ಮೂಲಕ ಬಾಡಿಗೆ ತಾಯಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಆಸ್ಪತ್ರೆಯ ಪರವಾನಿಗೆ ರದ್ದತಿ ಬಗ್ಗೆ ಆಸ್ಪತ್ರೆಗೆ ಸರ್ಕಾರದ ನೋಟಿಸ್
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅಡಿಯಲ್ಲಿ ಬಾಡಿಗೆ ತಾಯ್ತನ ಕಾನೂನು ಮತ್ತು ನಿಯಮಗಳನ್ನು ಅನುಸರಿಸಿದ್ದಕ್ಕಾಗಿ ತನಿಖಾ ಸಮಿತಿಯು ದಂಪತಿಗೆ ಕ್ಲೀನ್ ಚಿಟ್ ನೀಡಿದೆ.
ಆದರೂ, ದಂಪತಿಗೆ ನೀಡಿದ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಯು ಸರಿಯಾದ ದಾಖಲೆಗಳನ್ನು ನಿರ್ವಹಿಸದಿರುವುದನ್ನು ಸಮಿತಿ ಕಂಡುಹಿಡಿದಿದ್ದು, ಆಸ್ಪತ್ರೆಯ ಪರವಾನಿಗೆಯನ್ನು ಏಕೆ ರದ್ದುಗೊಳಿಸಬಾರದು ಎಂದು ವಿವರಣೆ ಕೋರಿ ಆಸ್ಪತ್ರೆಗೆ ನೋಟಿಸ್ ಕಳುಹಿಸಿದೆ.

ಅಕ್ಟೋಬರ್‌ನಲ್ಲಿ ಅವಳಿ ಮಕ್ಕಳ ಬಗ್ಗೆ ಘೋಷಣೆ
ಈ ವರ್ಷ ಜೂನ್‌ನಲ್ಲಿ ಚೆನ್ನೈನ ಹೊರಗಿನ ಮಹಾಬಲಿಪುರಂನಲ್ಲಿ ನಯನತಾರಾ ವಿಘ್ನೇಶ್ ಶಿವನ್ ವಿವಾಹವಾಗಿದ್ದರು. ಬಳಿಕ ಅಕ್ಟೋಬರ್ 9 ರಂದು ತಮಗೆ ಅವಳಿ ಮಕ್ಕಳು ಜನಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು. ಬಳಿಕ ವಿವಾದ ಉಂಟಾಗಿತ್ತು.
ವಿವಾದದ ಬೆನ್ನಲ್ಲೇ ತಮಿಳುನಾಡು ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಸಚಿವ ಮಾ ಸುಬ್ರಮಣಿಯನ್ ತನಿಖಾ ಸಮಿತಿ ರಚಿಸಿದ್ದರು. "ದಂಪತಿ ಹೋದ ಆಸ್ಪತ್ರೆ ಗುರುತಿಸಲಾಗಿದೆ. ದಂಪತಿ ಕಾನೂನನ್ನು ಉಲ್ಲಂಘಿಸಿದ್ದಾರೆಯೇ ಎಂದು ತನಿಖೆ ಮಾಡಲು ಇಬ್ಬರು ಸ್ತ್ರೀರೋಗತಜ್ಞರೊಂದಿಗೆ, ಜಂಟಿ ನಿರ್ದೇಶಕ ಶ್ರೇಣಿಯ ಅಧಿಕಾರಿಯ ನೇತೃತ್ವದ ಮೂವರು ಸದಸ್ಯರ ತಂಡವನ್ನು ರಚಿಸಲಾಗಿದೆ. ಸಮಿತಿಯು ಒಂದು ವಾರದವರೆಗೆ ಸಮಸ್ಯೆಯ ಬಗ್ಗೆ ವಿಚಾರಣೆ ನಡೆಸುತ್ತದೆ" ಎಂದಿದ್ದರು.

ವಾಣಿಜ್ಯ ಬಾಡಿಗೆ ತಾಯ್ತನದ ಮೇಲೆ ಸಂಪೂರ್ಣ ನಿಷೇಧ
ಕೇಂದ್ರ ಸರ್ಕಾರವು ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ, 2021 ಅನ್ನು ಅನುಮೋದಿಸಿತ್ತು, ಇದು ಈ ವರ್ಷದ ಜನವರಿ 25 ರಂದು ಜಾರಿಗೆ ಬಂದಿತು. ಈ ಕಾನೂನು ವಾಣಿಜ್ಯ ಬಾಡಿಗೆ ತಾಯ್ತನದ ಮೇಲೆ ಸಂಪೂರ್ಣ ನಿಷೇಧವನ್ನು ಹೇರುತ್ತದೆ ಮತ್ತು ಪರಹಿತಚಿಂತನೆಯ ಬಾಡಿಗೆ ತಾಯ್ತನವನ್ನು ಮಾತ್ರ ಅನುಮತಿಸುತ್ತದೆ.
ಇದರಲ್ಲಿ ವೈದ್ಯಕೀಯ ವೆಚ್ಚಗಳು ಮತ್ತು ಬಾಡಿಗೆದಾರರ ವಿಮಾ ರಕ್ಷಣೆಯನ್ನು ಹೊರತುಪಡಿಸಿ, ಯಾವುದೇ ಇತರ ಶುಲ್ಕಗಳು ಅಥವಾ ವೆಚ್ಚಗಳು ಒಳಗೊಳ್ಳುವುದಿಲ್ಲ. ಹೊಸ ಕಾಯಿದೆಯ ಪ್ರಕಾರ, ಬಾಡಿಗೆ ತಾಯಿಯು ದಂಪತಿಯ ಸಂಬಂಧಿಯಾಗಿರಬೇಕು ಮತ್ತು ಅಗತ್ಯ ವೈದ್ಯಕೀಯ ವೆಚ್ಚಗಳಿಗೆ ಮಾತ್ರ ಪಾವತಿ ಮಾಡಬೇಕು.
ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ 2021 ಮತ್ತು ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ನಿಯಂತ್ರಣ) ಕಾಯಿದೆ 2021 ಎರಡೂ ಜನವರಿ 25, 2022 ರಂದು ಜಾರಿಗೆ ಬಂದವು.












Click it and Unblock the Notifications