ನೆಹರೂ ಕಾಲದ 'ನ್ಯಾಷನಲ್ ಹೆರಾಲ್ಡ್'ಗೆ ಬೆಂಗಳೂರಲ್ಲಿ ಪುನರ್ಜನ್ಮ
ಬೆಂಗಳೂರು, ಜೂನ್ 6: ಭಾರತದ ಪ್ರಥಮ ಪ್ರಧಾನಿ ಜವಹರ್ ಲಾಲ್ ನೆಹರೂ 1938ರಲ್ಲಿ ಆರಂಭಿಸಿದ ಪತ್ರಿಕೆ 'ನ್ಯಾಷನಲ್ ಹೆರಾಲ್ಡ್' ಜೂನ್ 12ರಂದು ಮರುಚಾಲನೆ ಪಡೆದುಕೊಳ್ಳಲಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಬೆಂಗಳೂರಿನಲ್ಲಿ ಪತ್ರಿಕೆ ರೀಲಾಂಚ್ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.
ಕಾಂಗ್ರೆಸ್ ಮತ್ತು ನೆಹರೂ ಕುಟುಂಬದಿಂದ ಹೊರ ಬರುತ್ತಿದ್ದ ನ್ಯಾಷನಲ್ ಹೆರಾಲ್ಡ್ ಈ ಹಿಂದೆ ನಷ್ಟದ ಕಾರಣಕ್ಕೆ ತನ್ನ ಮುದ್ರಣವನ್ನು ನಿಲ್ಲಿಸಿತ್ತು. ಇದೀಗ 2018ರಲ್ಲಿ ಚುನಾವಣೆ ಎದುರಿಸಲಿರುವ ಕರ್ನಾಟಕದಲ್ಲೇ ಈ ಸಂಸ್ಥೆಗೆ ಪುನರ್ಜನ್ಮ ನೀಡಲು ಪಕ್ಷ ನಿರ್ಧರಿಸಿದೆ.

ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಸಂಸ್ಥೆಗೆ ಮರು ಚಾಲನೆ ನೀಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ. ಮೊದಲಿಗೆ ಆನ್ಲೈನ್ ಪತ್ರಿಕೆಯಾಗಿ ಇದು ಕಾರ್ಯರೂಪಕ್ಕೆ ಬರಲಿದೆ. ನಂತರ ದಿನಗಳಲ್ಲಿ ಮುದ್ರಣ ಪ್ರತಿಯನ್ನೂ ಗ್ರಾಹಕರ ಕೈಗಿಡಲು ಕಾಂಗ್ರೆಸ್ ನಿರ್ಧರಿಸಿದೆ.
ಇನ್ನು ಜೂನ್ 20ರಂದು ನವದೆಹಲಿಯಲ್ಲಿ ಅಧಿಕೃತವಾಗಿ ಮುದ್ರಣ ಪ್ರತಿಯನ್ನು ಬಿಡುಗಡೆ ಮಾಡಲಾಗುತ್ತದೆ. ಇದರಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಲಿದ್ದಾರೆ. ಸಂಸ್ಥೆಯ ಕೇಂದ್ರ ಕಚೇರಿ ನವದೆಹಲಿಯಲ್ಲೇ ಇರಲಿದೆ, ಆದರೆ ಕರ್ನಾಟಕದಲ್ಲಿ ಅಧಿಕಾರದಲ್ಲಿರುವುದರಿಂದ ಇಲ್ಲಿ ಚಾಲನೆ ನೀಡಲು ನಿರ್ಧರಿಸಲಾಗಿದೆ.
ಇನ್ನು ಸಂಸ್ಥೆಯ ವೆಬ್ಸೈಟ್ nationalherald.comಗೆ ಕಳೆದ ವರ್ಷ ಚಾಲನೆ ನೀಡಲಾಗಿತ್ತು. ನೀಲಭ್ ಮಿಶ್ರಾ ಸಂಪಾದಕತ್ವದಲ್ಲಿ ಈ ವೆಬ್ಸೈಟ್ ಕಾರ್ಯಚರಿಸುತ್ತಿದೆ.
ಇದೇ ಸಂಸ್ಥೆಯ ಹೆಸರಿನಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಭೂಮಿ ಮತ್ತು ಹಣಕಾಸು ವಂಚನೆ ಎಸಗಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದು, ಅದರಲ್ಲಿ ಅಮ್ಮ ಮತ್ತು ಮಗ ವಿಚಾರಣೆ ಎದುರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications