ಅ. 30ರ ಮೋದಿ ಮಿಜೋರಾಂ ಭೇಟಿ ರದ್ದು, ಕಾಂಗ್ರೆಸ್ ಹೇಳಿದ್ದೇನು?
ನವದೆಹಲಿ, ಅಕ್ಟೋಬರ್ 29: ಮಿಜೋರಾಂ ರಾಜ್ಯದ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ನವೆಂಬರ್ 7ರಂದು ನಡೆಯುವ ಚುನಾವಣೆಗೆ ಬಿಜೆಪಿಯ ಸ್ಟಾರ್ ಕ್ಯಾಂಪೇನರ್‌ಗಳಲ್ಲಿ ಮೊದಲಿಗರು ಪ್ರಧಾನಿ ನರೇಂದ್ರ ಮೋದಿ. ಡಿಸೆಂಬರ್ 3ರಂದು ಚುನಾವಣಾ ಮತ ಎಣಿಕೆ ನಡೆಯಲಿದೆ.
ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆ ಪ್ರಚಾರ ಆರಂಭವಾಗಿದೆ. ಬಿಜೆಪಿಯ ಸ್ಟಾರ್ ಪ್ರಚಾರಕ ನರೇಂದ್ರ ಮೋದಿ ಅಕ್ಟೋಬರ್ 30ರಂದು ಮಮಿತ್‌ನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಕಾರ್ಯಕ್ರಮಗಳ ಪಟ್ಟಿಯ ಅನ್ವಯ ಅವರ ಭೇಟಿ ರದ್ದಾಗಿದೆ.

ಈ ಕುರಿತು ಕಾಂಗ್ರೆಸ್ ಆರೋಪಗಳನ್ನು ಮಾಡಿದೆ. ಮಿಜೋರಾಂ ಪಕ್ಕದ ಮಣಿಪುರದಲ್ಲಿ ಗಲಭೆಗಳು ನಡೆಯುತ್ತಿದ್ದರೂ ಪ್ರಧಾನಿಯಾಗಿ ನರೇಂದ್ರ ಮೋದಿ ಒಮ್ಮೆಯೂ ಭೇಟಿ ಕೊಟ್ಟಿಲ್ಲ. ಆದ್ದರಿಂದ ಈಗ ಮಿಜೋರಾಂಗೆ ಸಹ ಅವರು ಭೇಟಿ ನೀಡುತ್ತಿಲ್ಲ ಎಂದು ಹೇಳಿದೆ.
ನರೇಂದ್ರ ಮೋದಿ ಐಜ್ವಾಲ್‌ನಿಂದ ಸುಮಾರು 80 ಕಿ. ಮೀ. ದೂರದಲ್ಲಿರುವ ಮಮಿತ್‌ನಲ್ಲಿ ಅಕ್ಟೋಬರ್ 30ರಂದು ಪ್ರಚಾರ ಸಮಾವೇಶ ನಡೆಬೇಕಿತ್ತು. ಆದರೆ ಮೋದಿ ಭೇಟಿ ರದ್ದಾಗಿದೆ. ಈ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷರು ಸಹ ಖಚಿತ ಪಡಿಸಿದ್ದಾರೆ. ಅಂದು ಮೋದಿ ಬೇರೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ರಾಜ್ಯಕ್ಕೆ ಭೇಟಿ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ದಿನಾಂಕ ನಿಗದಿಯಾಗಿಲ್ಲ; ಮಿಜೋರಾಂ ರಾಜ್ಯ ಬಿಜೆಪಿ ಘಟಕ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲಿಗರು. ಆದರೆ ಅಕ್ಟೋಬರ್ 30ರಂದು ಅವರ ರಾಜ್ಯ ಭೇಟಿ ರದ್ದಾಗಿದೆ. ಅವರ ಬದಲು ಬದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡುವ ನಿರೀಕ್ಷೆ ಇದೆ. ಆದರೆ ಅವರು ದಿನಾಂಕವನ್ನು ಅಂತಿಮಗೊಳಿಸಿಲ್ಲ.
ರಾಜ್ಯದಲ್ಲಿಯೇ ಮಮಿತ್ ಬಿಜೆಪಿ ಪಾಲಿಗೆ ಪ್ರಮುಖ ಪ್ರದೇಶವಾಗಿದೆ. ಆದ್ದರಿಂದ ರಾಜ್ಯ ಬಿಜೆಪಿ ಘಟಕ ಇದೇ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶವನ್ನು ಆಯೋಜನೆ ಮಾಡಿತ್ತು. ರಾಜ್ಯದಲ್ಲಿ ಬಿಜೆಪಿ ಅಂತಹ ಪ್ರಬಾಲ್ಯವನ್ನು ಹೊಂದಿಲ್ಲ. ಪಕ್ಕದ ರಾಜ್ಯದ ಗಲಭೆಯ ಪರಿಸ್ಥಿತಿ ಮಿಜೋರಾಂ ರಾಜ್ಯದ ಚುನಾವಣೆ ಮೇಲೆಯೂ ಪರಿಣಾಮ ಬೀರಲಿದೆಯೇ? ಕಾದು ನೋಡಬೇಕಿದೆ.
ಗಲಭೆ ಪೀಡಿತ ಮಣಿಪುರದಲ್ಲಿರುವ ಕುಕಿ ಸಮುದಾಯದವರು ಮಿಜೋರಾಂನ ಮಿಜೋ ಜನರು ಸಂಬಂಧಿ ಬುಡಕಟ್ಟುಗಳು. ಮಣಿಪುರದಲ್ಲಿ ಗಲಭೆ ಆರಂಭವಾಗಿ 180 ದಿನ ಕಳೆದರೂ ಸಹ ಒಮ್ಮೆಯೂ ಭೇಟಿ ನೀಡಿದ ಪ್ರಧಾನಿ ಈಗ ಚುನಾವಣಾ ಪ್ರಚಾರಕ್ಕೆ ಪಕ್ಕದ ರಾಜ್ಯಕ್ಕೆ ಭೇಟಿ ನೀಡಿಬೇಕಿತ್ತು. ಆದರೆ ಅವರು ಬರುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಮಿಜೋರಾಂಗೆ ಭೇಟಿ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, "ಪ್ರಧಾನಿ ನರೇಂದ್ರ ಮೋದಿಗೆ ಗಲಭೆ ಪೀಡಿತ ಮಮಿತ್‌ಗೆ ಭೇಟಿ ನೀಡಲು ಸಮಯವಿಲ್ಲ. ಆದರೆ ಈಗ ಮಿಜೋರಾಂಗೆ ಬಂದು ಚುನಾವಣಾ ಪ್ರಚಾರ ನಡೆಸಲು ಸಮಯ ಸಿಕ್ಕಿದೆ" ಎಂದು ದೂರಿದ್ದಾರೆ.
ಮಿಜೋರಾಂನ ಆಡಳಿತ ಪಕ್ಷ ಎಂಎನ್‌ಎಫ್‌ನ ಉಪಾಧ್ಯಕ್ಷರು ಮಾತನಾಡಿ, "ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವ ಇರುವುದು 3 ಅಥವ 4 ಕ್ಷೇತ್ರಗಳಲ್ಲಿ ಈಗ ಪ್ರಧಾನಿ ಭೇಟಿ ನೀಡಿ ಪ್ರಚಾರ ಮಾಡದಿದ್ದರೆ ಆ ಕ್ಷೇತ್ರಗಳನ್ನು ಅವರು ಕಳೆದುಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.
ಬಿಜೆಪಿ ಈಗಾಗಲೇ ಮಿಜೋರಾಂ ವಿಧಾನಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದೆ. 'ಮೋದಿ ಫಾರ್ ಮಿಜೋರಾಂ' ಎಂಬ ಘೋಷವಾಕ್ಯದಡಿ ಪಕ್ಷ ಚುನಾವಣೆಯನ್ನು ಎದುರಿಸುತ್ತಿದೆ. ರಾಜ್ಯದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ 33ರ ಮೀಸಲಾತಿ, ಮಾದಕ ದ್ರವ್ಯದ ಹಾವಳಿ ಕೊನೆಗೊಳಿಸುವ ಭರವಸೆಯನ್ನು ಪಕ್ಷ ಜನರಿಗೆ ನೀಡಿದೆ.












Click it and Unblock the Notifications