ಅಮೇಥಿಯಲ್ಲಿ ನರೇಂದ್ರ ಮೋದಿ ಜಬರ್ದಸ್ತ್ ಭಾಷಣ
ಲಕ್ನೋ, ಮೇ.5 : "ನಾನು ಸೋತರ ಚಹಾ ಮಾರಲು ಹೋಗುವೆ, ರಾಹುಲ್ ಗಾಂಧಿ ಸೋತರೆ ಎಲ್ಲಿ ಹೋಗುತ್ತಾರೆ?" ಎಂದು ರಾಹುಲ್ ಗಾಂಧಿ ಸ್ವಕ್ಷೇತ್ರ ಅಮೇಥಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಸ್ವಕ್ಷೇತ್ರ ಅಮೇಥಿಯಲ್ಲಿ ಸೋಮವಾರ ಪ್ರಚಾರ ಸಭೆ ನಡೆಸಿ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಪರವಾಗಿ ಮತಯಾಚನೆ ಮಾಡಿದರು.
ತಮ್ಮ ಅರ್ಧತಾಸಿಗೂ ಹೆಚ್ಚುಹೊತ್ತಿನ ಭಾಷಣದಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಉತ್ತರ ಪ್ರದೇಶದ ಸರ್ಕಾರವನ್ನು ಕಟು ಶಬ್ದಗಳನ್ನು ಬಳಸಿ ಟೀಕಿಸಿದ ಮೋದಿ, ನಮಗೆ ಏಳು ತಿಂಗಳ ಅವಕಾಶ ನೀಡಿ, ಅಮೇಥಿಯನ್ನು ದೇಶದಲ್ಲೇ ಮಾದರಿ ನಗರವಾಗಿ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು. "ನನ್ನ ಚಿಕ್ಕತಂಗಿ ಸ್ಮೃತಿ ಇರಾನಿ ಅವರಿಗೆ ಮೇ7ರಂದು ನಡೆಯುವ ಚುನಾವಣೆಯಲ್ಲಿ ಮತನೀಡಿ" ಎಂದು ಮನವಿ ಮಾಡಿದರು.

ಉತ್ತರ ಪ್ರದೇಶ ರಾಜ್ಯದ ಅಮೇಥಿಯಲ್ಲಿ ಮೇ 7ರಂದು ಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಸ್ಮೃತಿ ಇರಾನಿ, ಕಾಂಗ್ರೆಸ್ ನಿಂದ ರಾಹುಲ್ ಗಾಂಧಿ ಮತ್ತು ಆಮ್ ಆದ್ಮಿ ಪಕ್ಷದಿಂದ ಕುಮಾರ್ ವಿಶ್ವಾಸ್ ಕಣಕ್ಕೆ ಇಳಿಸಿದ್ದಾರೆ. ಕಾಂಗ್ರೆಸ್ ಯುವರಾಜನ ಸ್ವ ಕ್ಷೇತ್ರದಲ್ಲಿ ಗೆಲುವು ಯಾರಿಗೆ ಎಂಬ ಕುತೂಹಲ ದೇಶದ ಜನರಿಗಿದೆ. ಸೋಮವಾರ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಬುಧವಾರ ಮತದಾನ ನಡೆಯಲಿದೆ.
ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು
* ದೇಶದಲ್ಲಿ ಹಲವು ಹಂತದ ಚುನಾವಣೆ ಮುಕ್ತಾಯಗೊಂಡಿದೆ. ನಾನು ದೇಶದ ತುಂಬಾ ಸಂಚರಿಸಿ ಜನರ ಆಶೀರ್ವಾದ ಪಡೆಯಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ನಾವು ಹಲವು ಚುನಾವಣೆಯನ್ನು ನೋಡಿದ್ದೇವೆ. ಆದರೆ, ಈ ಬಾರಿಯ ಚುನಾವಣೆ ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನು ಬುಡಮೇಲು ಮಾಡಲಿದೆ.
* ಕಾಂಗ್ರೆಸ್ ಪಕ್ಷ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಸದ್ಯ ಕಾಂಗ್ರೆಸ್ ಪಕ್ಷವನ್ನು ಯಾರೂ ರಕ್ಷಿಸಲು ಸಾಧ್ಯವಿಲ್ಲ. ಅಮೇಥಿಯಲ್ಲಿ ಅಮ್ಮ-ಮಗನ ಆಡಳಿತ ಈ ಬಾರಿ ಕೊನೆಗೊಳ್ಳಬೇಕು. ಅದಕ್ಕಾಗಿ ನೀವು ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು.
* ನನ್ನ ಚಿಕ್ಕತಂಗಿ ಸ್ಮೃತಿ ಇರಾನಿ ಅವರನ್ನು ರಾಹುಲ್ ಗಾಂಧಿ ಅವರನ್ನು ಸೋಲಿಸಲು ಕಳಿಸಿಲ್ಲ. ಅಮೇಥಿ ಜನರ ಸೇವೆ ಮಾಡಲು ಕಳಿಸಿದ್ದೇವೆ. ಆದರೆ, ರಾಹುಲ್ ಗಾಂಧಿಗೆ ಈಗಾಗಲೇ ಚಿಂತೆ ಆರಂಭವಾಗಿದೆ. ಅಮೇಥಿಯ ಅಭಿವೃದ್ಧಿ ಮಾಡದ ರಾಹುಲ್ ಗಾಂಧಿಗೆ ಈ ಬಾರಿ ಸೋಲಿಯ ಭಯ ಕಾಡುತ್ತಿದೆ.
Nothing can save the Mother-Son government. Those who have voted in previous phases have already rejected them: Narendra Modi in Amethi
— narendramodi_in (@narendramodi_in) May 5, 2014 * ಅಮೇಥಿಯಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಕಳುಹಿಸಿ. ಮುಂದಿನ ಏಳು ತಿಂಗಳಿನಲ್ಲಿ ನಾನು ಅಮೇಥಿಯನ್ನು ಹೇಗೆ ಅಭಿವೃದ್ಧಿ ಪಡಿಸುತ್ತೇನೆಂದರೆ, ವಿಶ್ವದ ವಿಶ್ವವಿದ್ಯಾಲಯಗಳು ಅಧ್ಯಯನ ನಡೆಸಲು ಇಲ್ಲಿಗೆ ಆಗಮಿಸಬೇಕು. ಜಿಲ್ಲೆ ಹೇಗೆ ಅಭಿವೃದ್ಧಿಯಾಗಬೇಕು ಎಂದು ಕೇಳಿದರೆ ಎಲ್ಲರೂ ಅಮೇಥಿಯತ್ತ ಕೈ ತೋರಿಸಬೇಕು ಹಾಗೆ ಮಾಡುತ್ತೇನೆ ಎಂದು ಮೋದಿ ಹೇಳಿದರು.
* ಅಮ್ಮ-ಮಗನ ಆಡಳಿತ ನೋಡಿ ನಮಗೆ ಸಾಕಾಗಿದೆ. ನಮಗೆ ಬದಲಾವಣೆ ಬೇಕು, ನಾವು ಬದಲಾವಣೆಯನ್ನು ಬಯಸುತ್ತೇವೆ. ನೀವು ಒಂದೇ ವೇದಿಕೆಯಲ್ಲಿ ಸ್ಮೃತಿ ಇರಾನಿ ಮತ್ತು ರಾಹುಲ್ ಗಾಂಧಿ ಕುಟುಂಬದವರನ್ನು ನಿಲ್ಲಿಸಿ. ಸ್ಮೃತಿ ಇರಾನಿ ಅಮೇಥಿಯ 100 ಗ್ರಾಮಗಳ ಹೆಸರು ಹೇಳಿದರೆ, ರಾಹುಲ್ ಗಾಂಧಿ ಕುಟುಂಬ 10 ಗ್ರಾಮಗಳ ಹೆಸರು ಹೇಳುತ್ತದೆ ಇದು ಅವರ ಕಾರ್ಯವೈಖರಿ ಎಂದು ಮೋದಿ ಕುಟುಕಿದರು.
* ಕಾಂಗ್ರೆಸ್ಸಿಗರು ಸ್ಮೃತಿ ಇರಾನಿ ಯಾರು ಎಂದು ಕೇಳುತ್ತಾರೆ. ಇದಕ್ಕೆ ನಾನು ಉತ್ತರ ಕೊಡುತ್ತೇನೆ ಕೇಳಿ. ಸ್ಮೃತಿ ಇರಾನಿ ನನ್ನ ಚಿಕ್ಕ ತಂಗಿ. ಅವಳನ್ನು ನಿಮ್ಮ ಸೇವೆ ಮಾಡಲು ಅಮೇಥಿಗೆ ನಾನು ಕಳಿಸಿದ್ದೇನೆ, ಆಕೆಯನ್ನು ಬೆಂಬಲಿಸಿ ಎಂದು ಮೋದಿ ಕರೆ ನೀಡಿದರು.
* ತಮ್ಮ ಪುತ್ರನನ್ನು ರಾಜಕೀಯವಾಗಿ ತಯಾರು ಮಾಡಲು ಸೋನಿಯಾ ಮೇಡಂ ಅವರು 10 ವರ್ಷಗಳ ಶ್ರಮ ಪಟ್ಟಿದ್ದಾರೆ. ಆದರೆ ಅವರ ಶ್ರಮವೆಲ್ಲಾ ಸದ್ಯ ನೀರಿನಲ್ಲಿ ಮುಳುಗಿ ಹೋಗುತ್ತಿದೆ.
I challenge them to show any letter written to the State Govt. that Amethi's work is not done: Narendra Modi to Congress
— narendramodi_in (@narendramodi_in) May 5, 2014 * ನಾನು ಚುನಾವಣೆಯಲ್ಲಿ ಸೋತರೆ ಟೀ ಮಾರಲು ಹೋಗುತ್ತೇನೆ. ರಾಹುಲ್ ಗಾಂಧಿ ಏನು ಮಾಡುತ್ತಾರೆ. ಬಡತನ, ಕಷ್ಟ ಎಂಬುದು ನಮ್ಮ ರಾಹುಲ್ ಭಯ್ಯಾಗೆ ತಿಳಿದಿದೆಯೇ ಎಂದು ಮೋದಿ ವಾಗ್ದಾಳಿ ನಡೆಸಿದರು. ನಾನು ಲೂಟಿ ಮಾಡಲು ಬಂದಿಲ್ಲ, ನಿಮ್ಮ ಸೇವೆ ಮಾಡಲು ಬಂದಿದ್ದೇನೆ ಎಂದು ಹೇಳಿದರು.
* ಅಮೇಥಿಯಲ್ಲಿ ಪ್ರಚಾರ ನಡೆಸಲು ಬಂದ ಅಮ್ಮ-ಮಗ ಭ್ರಷ್ಟಾಚಾರ, ನಿರುದ್ಯೋಗ, ಅಮೇಥಿ ಅಭಿವೃದ್ಧಿ ಮುಂತಾದ ವಿಷಯಗಳ ಬಗ್ಗೆ ಮಾತನಾಡಿಲ್ಲ. ಜನರಿಗೆ ಉತ್ತರ ಕೊಡಲು ಆಗದವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರದಲ್ಲಿರಬಾರದು, ಅವರನ್ನು ಅಧಿಕಾರದಿಂದ ಕಿತ್ತೊಗೆಯಿರಿ ಎಂದು ಮೋದಿ ಕರೆ ನೀಡಿದರು.
* ಅಮೇಥಿಯಲ್ಲಿ ನ್ಯಾಯಯುತವಾದ ಚುನಾವಣೆ ನಡೆಸುವುದು ಆಯೋಗದ ಹೊಣೆ. ದೆಹಲಿಯಿಂದ ನಿಮಗೆ ನೀಡಲು ಹಲವಾರು ಕೊಡುಗೆಗಳು ಬಂದಿವೆ. ಆದರೆ, ನಮ್ಮ ಆಮೇಥಿಯ ಜನರು ಸ್ವಾಭಿಮಾನಿಗಳು. ಅವರು ಯಾವುದೇ ಕೊಡುಗೆಗಳಿಂದ ಆಕರ್ಷಿತರಾಗದೆ ಬಿಜೆಪಿಗೆ ಮತ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದು ಮೋದಿ ಹೇಳಿದರು.
* ಮೇ 7 ರಂದು ಅಮೇಥಿಯಲ್ಲಿ ಮತದಾನವಿದೆ. ಅಂದು ನಿಮ್ಮ ಹೃದಯದಲ್ಲಿ ಕಮಲವಿರಬೇಕು. ನಿಮ್ಮ ಕೈಯಲ್ಲಿ ಕಮಲವಿರಬೇಕು. ದೇಶದ ಅಭಿವೃದ್ಧಿ ಅಮೇಥಿಯಿಂದಲೇ ಆರಂಭವಾಗಲಿ ಎಲ್ಲರೂ ಧೃಡ ಸರ್ಕಾರಕ್ಕಾಗಿ ಬಿಜೆಪಿಗೆ ಮತನೀಡಿ ಎಂದು ಕರೆ ನೀಡಿದರು.












Click it and Unblock the Notifications