ಮೋದಿ ಸಾಕ್ಷ್ಯಚಿತ್ರ; ಬಿಬಿಸಿ ವಿರುದ್ಧ 10 ಸಾವಿರ ಕೋಟಿ ರೂ. ಮಾನನಷ್ಟ ಮೊಕದ್ದಮೆ; ಸಮನ್ಸ್ ಜಾರಿಗೊಳಿಸಿದ ಹೈಕೋರ್ಟ್
ಭಾರತ, ಭಾರತದ ನ್ಯಾಯಾಂಗ ಮತ್ತು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಷ್ಠೆಗೆ 'ಇಂಡಿಯಾ: ದ ಮೋದಿ ಕ್ವೆಶ್ಚನ್' ಹೆಸರಿನ ಸಾಕ್ಷ್ಯಚಿತ್ರ ಮಸಿ ಬಳಿದಿದೆ ಎಂದು ಆರೋಪಿಸಿ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಂಪನಿ (ಬಿಬಿಸಿ) ವಿರುದ್ಧ 10 ಸಾವಿರ ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
ಈ ಕುರಿತ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬಿಬಿಸಿಗೆ ಸಮನ್ಸ್ ಜಾರಿಗೊಳಿಸಿದೆ. ನ್ಯಾಯಮೂರ್ತಿ ಸಚಿನ್ ದತ್ತಾ ಇದ್ದ ಏಕ ಸದಸ್ಯ ಪೀಠ ಸೆಪ್ಟೆಂಬರ್‌ನಲ್ಲಿ ವಿಚಾರಣೆ ನಡೆಸುವುದಕ್ಕಾಗಿ ಪ್ರಕರಣವನ್ನು ಪಟ್ಟಿ ಮಾಡಿದೆ.

ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಂಪನಿ (ಬಿಬಿಸಿ) ವಿರುದ್ಧ ಗುಜರಾತ್ ಮೂಲದ ಲಾಭರಹಿತ ಖಾಸಗಿ ಸಂಸ್ಥೆ ಜಸ್ಟಿಸ್ ಆನ್ ಟ್ರಯಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.
ಇಂಡಿಯಾ: ದ ಮೋದಿ ಕ್ವೆಶ್ಚನ್ ಸಾಕ್ಷ್ಯಚಿತ್ರವು ಮಾನಹಾನಿಕಾರ ವಿಷಯಗಳನ್ನು ಒಳಗೊಂಡಿದೆ. ದೇಶ, ನ್ಯಾಯಾಂಗ ಪ್ರತಿಷ್ಠೆಯ ಮೇಲೆ ಮತ್ತು ಭಾರತದ ಪ್ರಧಾನಮಂತ್ರಿ ವಿರುದ್ಧ ಪ್ರಚೋದನೆ ನೀಡುವಂತಹ ಅಂಶಗಳನ್ನು ಒಳಗೊಂಡಿದೆ ಎಂದು ಅರ್ಜಿದಾರರ ಪರ ವಕೀಲ ಹರೀಶ್ ಸಾಳ್ವೆ ವಾದಿಸಿದರು.

ಇದಕ್ಕೂ ಮುನ್ನ ಬಿಜೆಪಿ ನಾಯಕ ಬಿನಯ್ ಕುಮಾರ್ ಸಿಂಗ್ ಅವರು ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮಾನನಷ್ಟ ಪ್ರಕರಣದ ಕುರಿತು ದೆಹಲಿ ಜಿಲ್ಲಾ ನ್ಯಾಯಾಲಯ ಬಿಬಿಸಿಗೆ ಸಮನ್ಸ್ ಜಾರಿಗೊಳಿಸಿತ್ತು. ಸದ್ಯ ಭಾರತ ಸರ್ಕಾರವು ಈ ಸಾಕ್ಷ್ಯಚಿತ್ರವನ್ನು ನಿಷೇಧಿಸಿದೆ.
ಭಾರತ ಸರ್ಕಾರ ದೇಶದಲ್ಲಿ ಸಾಕ್ಷ್ಯಚಿತ್ರ ನಿಷೇಧಿಸಿದ್ದರೂ, ವಿಕಿಪೀಡಿಯ ಪುಟ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ಲಿಂಕ್‌ಗಳನ್ನು ಒದಗಿಸುತ್ತದೆ ಮತ್ತು ಸಾಕ್ಷ್ಯಚಿತ್ರದ ವಸ್ತುವಿಷಯ ಇಂಟರ್ನೆಟ್ ಆರ್ಕೈವ್‌ನಲ್ಲಿ ಇನ್ನೂ ಲಭ್ಯವಿದೆ ಎಂದು ಬಿನಯ್ ಕುಮಾರ್ ಸಿಂಗ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಆದರೆ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಬಿಬಿಸಿ, ಅರ್ಜಿ ಆಲಿಸಲು ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ ಇಲ್ಲ ಎಂದಿತ್ತು. ಆ ಪ್ರಕರಣದ ವಿಚಾರಣೆಯೂ ಮೇ 26ರಂದು ನಡೆಯಲಿದೆ.
ಕಳೆದ ಏಪ್ರಿಲ್‌ನಲ್ಲಿ ಸಾಕ್ಷ್ಯಚಿತ್ರದ ಪ್ರದರ್ಶನ ಆಯೋಜಿಸಿದ್ದಕ್ಕಾಗಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ರಾಷ್ಟ್ರೀಯ ಕಾರ್ಯದರ್ಶಿ ಲೋಕೇಶ್ ಚುಗ್ ಅವರನ್ನು ವಿವಿಯಿಂದ ಅಮಾನತುಗೊಳಿಸಿದ್ದ ದೆಹಲಿ ವಿಶ್ವವಿದ್ಯಾಲಯದ (ಡಿಯು) ಆದೇಶವನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿತ್ತು.
ಆರ್‌ಎಸ್‌ಎಸ್ ಮತ್ತು ವಿಎಚ್ಪಿ ವಿರುದ್ಧ ಸಾಕ್ಷ್ಯಚಿತ್ರ ಅಥವಾ ಇತರ ಯಾವುದೇ ವಿಷಯವನ್ನು ಪ್ರಕಟಿಸದಂತೆ ತಡೆಯಲು ಬಿಬಿಸಿ, ವಿಕಿಪೀಡಿಯ, ಇಂಟರ್‌ನೆಟ್ ಆರ್ಕೈವ್ ವಿರುದ್ಧ ತಡೆಯಾಜ್ಞೆ ನೀಡುವಂತೆ
ಆರ್‍ಎಸ್‍ಎಸ್ ಮತ್ತು ವಿಎಚ್ಪಿ ವಿರುದ್ಧ ಸಾಕ್ಷ್ಯಚಿತ್ರ ಅಥವಾ ಇತರ ಯಾವುದೇ ವಿಷಯವನ್ನು ಪ್ರಕಟಿಸದಂತೆ ತಡೆಯಲು ಬಿಬಿಸಿ, ವಿಕಿಮೀಡಿಯಾ ಮತ್ತು ಇಂಟರ್ನೆಟ್ ಆರ್ಕೈವ್ ವಿರುದ್ಧ ತಡೆಯಾಜ್ಞೆ ನೀಡುವಂತೆ ಬಿಜೆಪಿ ನಾಯಕ ಬಿನಯ್ ಕುಮಾರ್ ಸಿಂಗ್ ಕೋರಿದ್ದರು. ಅದರ ಅರ್ಜಿ ವಿಚಾರಣೆಯನ್ನು ಮೇ 26ರಂದು ದೆಹಲಿ ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ.












Click it and Unblock the Notifications