ಮೇಲೇರಿದ ಮೇಕ್ ಇನ್ ಇಂಡಿಯಾ: ಸಿ295 ಜೋಡಣಾ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ ಮತ್ತು ಸ್ಪೇನ್ ಪ್ರಧಾನಿ ಸ್ಯಾಂಚೆಜ್
ಬೆಂಗಳೂರು, ಅಕ್ಟೋಬರ್ 28: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಿ ಪೆದ್ರೋ ಸ್ಯಾಂಚೆಜ್ ಅಕ್ಟೋಬರ್ 28ರ ಸೋಮವಾರದಂದು ಗುಜರಾತಿನ ವಡೋದರಾದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್)ನಲ್ಲಿ ಸಿ295 ವಿಮಾನಗಳ ಅಂತಿಮ ಜೋಡಣಾ ಘಟಕವನ್ನು ಉದ್ಘಾಟಿಸಲಿದ್ದಾರೆ.
ಸ್ಯಾಂಚೆಜ್ ಅವರು ಅಕ್ಟೋಬರ್ 27ರಿಂದ ಅಕ್ಟೋಬರ್ 29ರ ತನಕ ಭಾರತದ ಪ್ರವಾಸದಲ್ಲಿದ್ದು, ಈ ಅಧಿಕೃತ ಭೇಟಿಯ ಸಂದರ್ಭದಲ್ಲಿ ನೂತನ ಕಾರ್ಖಾನೆಯ ಉದ್ಪಾಟನೆ ನೆರವೇರಲಿದೆ. ಭಾರತ ಸರ್ಕಾರ ಪ್ರಸ್ತುತ ಯೋಜನೆಯನ್ನು ಏರೋಸ್ಪೇಸ್ ವಲಯದಲ್ಲಿ ತನ್ನ ಮಹತ್ವಾಕಾಂಕ್ಷಿ 'ಮೇಕ್ ಇನ್ ಇಂಡಿಯಾ' ಯೋಜನೆಯ ಬಹುಮುಖ್ಯ ಯೋಜನೆ ಎಂದು ಬಣ್ಣಿಸಿದೆ. ಇದು ಭಾರತದಲ್ಲಿ ಖಾಸಗಿ ವಲಯದಿಂದ ನಿರ್ಮಾಣವಾಗಲಿರುವ ಮೊದಲ ಮಿಲಿಟರಿ ವಿಮಾನವಾಗಲಿದೆ.

ಭಾರತೀಯ ವಾಯು ಸೇನೆ (ಐಎಎಫ್) ಟಿಎಎಸ್ಎಲ್ ಸಂಸ್ಥೆ ಏರ್‌ಬಸ್ ಸ್ಪೇನ್ ಜೊತೆ ಸಹಯೋಗದಿಂದ ವಡೋದರಾ ಘಟಕದಲ್ಲಿ ನಿರ್ಮಿಸಲಿರುವ ಏರ್‌ಬಸ್ ಸಿ295 ಸಾಗಾಣಿಕಾ ವಿಮಾನವನ್ನು ಬಳಸಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಎರಡು ವರ್ಷಗಳ ಹಿಂದೆ, ಅಕ್ಟೋಬರ್ 30ರಂದು ಈ ಯೋಜನೆಗೆ ಚಾಲನೆ ನೀಡಿದರು. ಮೋದಿಯವರು ಸೋಮವಾರದಂದು ಸ್ಯಾಂಚೆಜ್ ಅವರೊಡನೆ ನೂತನ ಘಟಕವನ್ನು ಉದ್ಘಾಟಿಸಲಿದ್ದಾರೆ ಎಂದು ಗುಜರಾತ್ ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ. ಉದ್ಘಾಟನಾ ಸಮಾರಂಭವನ್ನು ಭಾರತದ ವಿದೇಶಾಂಗ ಸಚಿವಾಲಯವೂ ಖಚಿತಪಡಿಸಿದೆ.
ಹೊಸ ವಿಮಾನಗಳ ಸೇರ್ಪಡೆ: ಸೆಪ್ಟೆಂಬರ್ 2021ರಲ್ಲಿ ಭಾರತ ಏರ್‌ಬಸ್ ಡಿಫೆನ್ಸ್ ಆ್ಯಂಡ್ ಸ್ಪೇಸ್ ಸಂಸ್ಥೆಯೊಡನೆ 56 ಸಿ295 ವಿಮಾನಗಳನ್ನು ಖರೀದಿಸಲು ಅಂದಾಜು 21,000 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ನೂತನ ವಿಮಾನಗಳು ಭಾರತೀಯ ವಾಯು ಸೇನೆಯ ಹಳೆಯದಾದ ಅವ್ರೋ-748 ವಿಮಾನಗಳ ಬದಲು ಸೇರ್ಪಡೆಯಾಗಲಿವೆ.
ಏರ್‌ಬಸ್ ಮೊದಲ 16 ವಿಮಾನಗಳನ್ನು ನೇರವಾಗಿ ಸ್ಪೇನ್‌ನ ಸೆವಿಲ್ಲೆಯಲ್ಲಿನ ತನ್ನ ಉತ್ಪಾದನಾ ಘಟಕದಿಂದಲೇ ಭಾರತಕ್ಕೆ ಒದಗಿಸಲಿದೆ. ಇನ್ನುಳಿದ 40 ವಿಮಾನಗಳನ್ನು ಎರಡು ಸಂಸ್ಥೆಗಳ ನಡುವಿನ ಒಪ್ಪಂದದ ಅಂಗವಾಗಿ, ಟಿಎಎಸ್ಎಲ್ ಘಟಕದಲ್ಲಿ ಭಾರತದಲ್ಲೇ ನಿರ್ಮಿಸಲಾಗುತ್ತದೆ. ಸೆಪ್ಟೆಂಬರ್ 2023ರಲ್ಲಿ, ಏರ್‌ಬಸ್ ಸಂಸ್ಥೆ ಸೆವಿಲ್ಲೆಯಲ್ಲಿ ನಿರ್ಮಿಸಿರುವ ತನ್ನ ಮೊದಲ ಸಿ295 ವಿಮಾನವನ್ನು ಭಾರತೀಯ ವಾಯು ಸೇನೆಗೆ ಒದಗಿಸಿದೆ.
ಏರ್‌ಬಸ್ ಸಂಸ್ಥೆಯ ಹೇಳಿಕೆಯೊಂದರ ಪ್ರಕಾರ, 'ಮೇಕ್ ಇನ್ ಇಂಡಿಯಾ' ಯೋಜನೆಯಡಿ ವಡೋದರಾದಲ್ಲಿ ನಿರ್ಮಿಸುವ ಮೊದಲ ಸಿ295 ವಿಮಾನ ಸೆಪ್ಟೆಂಬರ್ 2026ರಲ್ಲಿ ಲಭ್ಯವಾಗುವ ನಿರೀಕ್ಷೆಗಳಿವೆ. ಅಂತಿಮ ವಿಮಾನವನ್ನು ಆಗಸ್ಟ್ 2031ರಲ್ಲಿ ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಗುತ್ತದೆ. ಈ ವಿಮಾನಗಳ ಬಿಡಿಭಾಗಗಳ ಉತ್ಪಾದನೆ ಈಗಾಗಲೇ ಹೈದರಾಬಾದಿನ ಒಂದು ಘಟಕದಲ್ಲಿ ಆರಂಭಗೊಂಡಿದೆ ಎಂದು ಈ ಹೇಳಿಕೆ ವಿವರಿಸಿದೆ.
ಸಿ-295ಎಂಡಬ್ಲ್ಯು ಮಿಲಿಟರಿ ಸಾಗಾಣಿಕಾ ವಿಮಾನ: ಏರ್‌ಬಸ್ ಸಿ295 ಒಂದು ಮುಂದಿನ ತಲೆಮಾರಿನ ಸಾಗಾಣಿಕಾ ವಿಮಾನವಾಗಿದ್ದು, ಇದು ವಿಶಾಲ ಶ್ರೇಣಿಯ ಬಳಕೆಗಾಗಿ ನಿರ್ಮಾಣಗೊಂಡಿದೆ. ಈ ವಿಮಾನವನ್ನು ಯೋಧರು ಮತ್ತು ಪೂರೈಕೆಗಳ ಸಾಗಾಣಿಕೆ ನಡೆಸಲು, ಸಮುದ್ರದ ಕಣ್ಗಾವಲು ಕೈಗೊಳ್ಳಲು, ಗುಪ್ತಚರ ಮಾಹಿತಿ ಕಲೆಹಾಕಲು ಮತ್ತು ತುರ್ತು ವೈದ್ಯಕೀಯ ಸ್ಥಳಾಂತರಿಸುವಿಕೆಯಂತಹ ಕಾರ್ಯಾಚರಣೆಗಳನ್ನು ನಡೆಸಲು ಬಳಸಬಹುದಾಗಿದೆ.
ಸಿ295 ವಿಮಾನ ಗರಿಷ್ಠ 9 ಟನ್ ತನಕ ವಸ್ತುಗಳು ಅಥವಾ 71 ಸೈನಿಕರನ್ನು ಹೊತ್ತು, ಗರಿಷ್ಠ 260 ನಾಟ್ (ಅಂದಾಜು ಪ್ರತಿ ಗಂಟೆಗೆ 483 ಕಿಲೋಮೀಟರ್) ವೇಗದಲ್ಲಿ ಸಾಗಬಲ್ಲದು. ಈ ವಿಮಾನವನ್ನು ಸೇನಾಪಡೆ ಮತ್ತು ಪೂರೈಕೆಗಳ ಏರ್‌ಡ್ರಾಪ್ ನಡೆಸಲು ಬಳಸಬಹುದಾಗಿದೆ. ಅದರೊಡನೆ, ವೈದ್ಯಕೀಯ ಅಥವಾ ಗಾಯಾಳುಗಳ ಕ್ಷಿಪ್ರ ಸ್ಥಳಾಂತರ ನಡೆಸಲು ಈ ವಿಮಾನ ಸೂಕ್ತವಾಗಿದೆ.
ಸಿ295 ವಿಮಾನ ವಿಶೇಷ ಕಾರ್ಯಾಚರಣೆಗಳು, ವಿಪತ್ತು ಪರಿಹಾರ, ಹಾಗೂ ಸಮುದ್ರದ ಕಣ್ಗಾವಲು ನಡೆಸಲು ಬಹಳಷ್ಟು ಸಮರ್ಥವಾಗಿದೆ. 24.46 ಮೀಟರ್ ಉದ್ದದ ಈ ವಿಮಾನ, ಸಿ-17 ಗ್ಲೋಬ್ ಮಾಸ್ಟರ್ 3 ಅಥವಾ ಐಎಲ್-76 ವಿಮಾನಗಳು ಕಾರ್ಯಾಚರಿಸಲು ಸಾಧ್ಯವಾಗದಂತಹ, ಸಣ್ಣದಾದ, ಕಠಿಣವಾದ ಏರ್ ಸ್ಟ್ರಿಪ್‌ಗಳಲ್ಲೂ ಟೇಕಾಫ್ ಮತ್ತು ಲ್ಯಾಂಡಿಂಗ್ ನಡೆಸಬಲ್ಲದಾಗಿದೆ.
ಈ ಸಾಮರ್ಥ್ಯದ ಕಾರಣದಿಂದ, ಸಿ295 ವಿಮಾನ ಭಾರತ-ಚೀನಾ ಗಡಿಯ ದುರ್ಗಮ ಪ್ರದೇಶಗಳಿಗೂ ಅವಶ್ಯಕ ವಸ್ತುಗಳನ್ನು ಪೂರೈಸಬಲ್ಲದಾಗಿದೆ. ಇದು ದೇಪ್ಸಂಗ್ ಬಯಲಿನ ದೌಲತ್ ಬೇಗ್ ಓಲ್ಡೀ (ಡಿಬಿಓ) ಯಂತಹ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್ (ಎಎಲ್‌ಜಿ) ಗಳಲ್ಲೂ ಇಳಿದು, ಮೇಲೇರಬಲ್ಲದು. ಪ್ರಯಾಗ್‌ರಾಜ್ ನಲ್ಲಿರುವ 24 ಉಪಕರಣಗಳ ಡಿಪೋ ಸಿ-295 ವಿಮಾನಗಳ ಬಿಡಿಭಾಗಗಳು ಮತ್ತು ಉಪಕರಣಗಳ ಪ್ರಮುಖ ಸಂಗ್ರಹಾಗಾರವಾಗಿ ಕಾರ್ಯ ನಿರ್ವಹಿಸಲಿದೆ.
ಏರ್‌ಬಸ್ ಇಂಡಿಯಾ ಮುಖ್ಯಸ್ಥರ ಪ್ರಕಾರ, 30ನೇ ಸಿ-295 ವಿಮಾನದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ವೇಳೆಗೆ ಭಾರತ ಸ್ವತಂತ್ರವಾಗಿ ಈ ವಿಮಾನವನ್ನು ನಿರ್ಮಿಸುವ ಸಾಮರ್ಥ್ಯ ಗಳಿಸಿಕೊಳ್ಳಲಿದೆ. ಆ ಬಳಿಕ, ಸಿ-295 ವಿಮಾನದ ನಿರ್ಮಾಣಕ್ಕೆ ಏರ್‌ಬಸ್ ಸಂಸ್ಥೆಯ ನೆರವಿನ ಅಗತ್ಯ ಬೀಳುವುದಿಲ್ಲ. ಅದರೊಡನೆ, ಸಿ-295 ವಿಮಾನದ ನಿರ್ವಹಣೆ, ದುರಸ್ತಿ, ಮತ್ತು ಕೂಲಂಕಷ ಪರೀಕ್ಷೆ (ಎಂಆರ್‌ಒ) ನಡೆಸುವ ಘಟಕವನ್ನು ಸ್ಥಾಪಿಸುವ ಕುರಿತು ಮಾತುಕತೆ ನಡೆಸಲಾಗುತ್ತಿದೆ.
ಈ ಎಂಆರ್‌ಒ ಘಟಕ ಕೇವಲ ಭಾರತೀಯ ವಾಯು ಸೇನೆಯ ಸಿ-295 ವಿಮಾನಗಳಿಗೆ ಮಾತ್ರ ಬೆಂಬಲ ನೀಡುವುದಿಲ್ಲ. ಈ ಘಟಕ ಭಾರತೀಯ ವಾಯುಪಡೆಯ ವಿಮಾನಗಳೊಡನೆ, ಯುಎಇ, ಫಿಲಿಪೈನ್ಸ್ ಹಾಗೂ ಥೈಲ್ಯಾಂಡ್, ಉಜ್ಬೆಕಿಸ್ತಾನ್, ಹಾಗೂ ಇಂಡೋನೇಷ್ಯಾ ಸೇರಿದಂತೆ, ದಕ್ಷಿಣ ಏಷ್ಯಾದ ಸಿ-295 ವಿಮಾನಗಳನ್ನು ಬಳಸುವ ವಾಯು ಸೇನೆಗಳಿಗೂ ಸೇವೆ ಒದಗಿಸಲಿದೆ.
ಬರಹ: ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications