ನಾಗಾಲ್ಯಾಂಡ್ ಗುಂಡಿನ ದಾಳಿ; ಸಂಸತ್‌ನಲ್ಲಿ ಅಮಿತ್ ಶಾ ಹೇಳಿಕೆ
ನವದೆಹಲಿ, ಡಿಸೆಂಬರ್ 06; ಮಯನ್ಮಾರ್ ಗಡಿಗೆ ಹೊಂದಿಕೊಂಡಿರುವ ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದೆ. ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಒಟ್ಟು 14 ಜನರು ಮೃತಪಟ್ಟಿದ್ದಾರೆ.
ನಾಗರಿಕರನ್ನು ಉಗ್ರರು ಎಂದು ತಪ್ಪಾಗಿ ಗುರುತಿಸಿ ಯೋಧರು ಗುಂಡಿನ ದಾಳಿ ನಡೆಸಿದ್ದರು. ಓಟಿಂಗ್ ಗ್ರಾಮದ ಹಲವು ಜನರ ಗುಂಪು ಪಿಕಪ್ ವಾಹನದಲ್ಲಿ ಶನಿವಾರ ತಡರಾತ್ರಿ ಮನೆಗೆ ಮರಳುವಾಗ ಈ ಗುಂಡಿನ ದಾಳಿ ನಡೆದಿತ್ತು.
ಘಟನೆಯಲ್ಲಿ 14 ಜನರು ಮೃತಪಟ್ಟಿದ್ದಾರೆ. ನಾಗಾಲ್ಯಾಂಡ್ ಸರ್ಕಾರ ಘಟನೆ ಬಗ್ಗೆ ತನಿಖೆಗೆ ಉನ್ನತ ಮಟ್ಟದ ಎಸ್‌ಐಟಿ ರಚನೆ ಮಾಡಿದೆ. ಭಾರತೀಯ ಸೇನೆ ಸಹ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು, ತನಿಖೆಗೆ ಆದೇಶ ನೀಡಿದೆ.

ಗುಂಡಿನ ದಾಳಿ ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಎರಡು ಸೇನಾ ವಾಹನಗಳಿಗೆ ಸ್ಥಳೀಯರು ಬೆಂಕಿ ಹಚ್ಚಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಮೋನ್ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.
ಈ ಘಟನೆ ಬಗ್ಗೆ ರಾಜ್ಯಾದ್ಯಂತ ಚರ್ಚೆಗಳು ನಡೆಯುತ್ತಿವೆ. ಸಂಸತ್ ಚಳಿಗಾಲದ ಅಧಿವೇಶನದಲ್ಲಿಯೂ ಈ ವಿಚಾರ ಪ್ರಸ್ತಾಪವಾಗುವ ನಿರೀಕ್ಷೆ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಘಟನೆ ಬಗ್ಗೆ ಹೇಳಿಕೆ ನೀಡಲಿದ್ದಾರೆ.
ನಿಷೇಧಿತ ಎನ್‌ಎಸ್‌ಸಿಎನ್ ಸಂಘಟನೆಯ ಯಾಂಗ್ ಅಂಗ್ ಬಣದ ಉಗ್ರರು ಮಯನ್ಮಾರ್ ಗಡಿಯಿಂದ ಒಳನುಸುಳಬಹುದು ಎಂದು ಗುಪ್ತಚರ ಇಲಾಖೆ ವರದಿ ಇತ್ತು. ಇದರಿಂದಾಗಿ ಸೇನೆ ಸನ್ನದ್ಧ ಸ್ಥಿತಿಯಲ್ಲಿತ್ತು.
ಆದರೆ ತಡರಾತ್ರಿ ಗ್ರಾಮಸ್ಥರು ಮನೆಗೆ ವಾಪಸ್ ಆಗುತ್ತಿದ್ದಾಗ ಕತ್ತಲಿನಲ್ಲಿ ತಪ್ಪಾಗಿ ಗುರುತಿಸಿ ಸೇನೆ ಗುಂಡಿನ ದಾಳಿ ನಡೆಸಿತ್ತು. 11 ನಾಗರಿಕರು ಸೇರಿ 14 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.
ಈ ಗುಂಡಿನ ದಾಳಿ ಬಳಿಕ ಆಕ್ರೋಶಗೊಂಡ ಸ್ಥಳೀಯರು ಅಸ್ಸಾಂ ರೈಫಲ್ಸ್ ಸೇನಾ ಶಿಬಿರದ ಮೇಲೆ ದಾಳಿ ಮಾಡಿದರು. ಆಗ ಸೈನಿಕರು ಜನರನ್ನು ನಿಯಂತ್ರಿಸಲು ಹಾರಿಸಿದ ಗುಂಡಿಗೆ ಮತ್ತೊಬ್ಬ ಬಲಿಯಾದ.
ಓಟಿಂಗ್ ಗ್ರಾಮದ ಜನರು ಸ್ಥಳೀಯ ಕಲ್ಲಿದ್ದಲು ಗಣಿಗೆ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿಕೊಂಡು ಪಿಕಪ್ ವಾಹನದಲ್ಲಿ ವಾಪಸ್ ಆಗುವಾಗ ಗುಂಡಿನ ದಾಳಿ ನಡೆದಿತ್ತು. ವಿಪಕ್ಷಗಳ ನಾಯಕರು ಈ ದಾಳಿಯನ್ನು ಖಂಡಿಸಿದ್ದು, ನಿರಾಯುಧ ಜನರ ಮೇಲೆ ಗುಂಡು ಹಾರಿಸಿದ ಕ್ರಮವನ್ನು ಟೀಕಿಸಿದ್ದಾರೆ.
ನಾಗಾಲ್ಯಾಂಡ್ ಬಿಜೆಪಿ ಅಧ್ಯಕ್ಷ ಮತ್ತು ರಾಜ್ಯ ಬುಡಕಟ್ಟು ವ್ಯವಹಾರಗಳ ಸಚಿವ ತೆಮ್‌ಜೆನ್ ಇಮ್ನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ, "ಮೃತರ ಕುಟುಂಬಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.
ತಲಾ 5 ಲಕ್ಷ ಪರಿಹಾರ; ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಸೋಮವಾರ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಿದ್ದಾರೆ.
ಘಟನೆ ಕುರಿತು ತನಿಖೆ ನಡೆಸಲು ಐಜಿಪಿ ನೇತೃತ್ವದಲ್ಲಿ ಉನ್ನತ ಮಟ್ಟದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಲಾಗಿದೆ. ಘಟನೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೆ. ಅಲಂ ಸಹ ವಿಷಾದ ವ್ಯಕ್ತಪಡಿಸಿದ್ದಾರೆ.
ಶಾಂತಿ ಕಾಡುವಂತೆ ಜನರಿಗೆ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ಸಚಿವ ಪಿ.ಪೈವಾಂಗ್ ನೇತೃತ್ವದಲ್ಲಿ ಡಿಜಿಪಿ ಸೇರಿದಂತೆ ಉನ್ನತ ಅಧಿಕಾರಿಗಳ ತಂಡ ಘಟನಾ ಸ್ಥಳದಲ್ಲಿದೆ. ತುರ್ತು ಸಂದರ್ಭದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹೆಲಿಕಾಪ್ಟರ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.












Click it and Unblock the Notifications