Nagaland Election Results 2023: ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಬಹುಮತ- ಇಲ್ಲಿದೆ ಚುನಾವಣಾ ಆಯೋಗದ ಅಂಕಿಅಂಶ
ಈಶಾನ್ಯ ರಾಜ್ಯವಾದ ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಕ್ಕಿದೆ ಎಂದು ಚುನಾವಣಾ ಆಯೋಗ ಅಧಿಕೃತ ಮಾಹಿತಿ ನೀಡಿದೆ.
ನವದೆಹಲಿ, ಮಾರ್ಚ್ 02: ಈಶಾನ್ಯ ರಾಜ್ಯವಾದ ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಕ್ಕಿದೆ ಎಂದು ಚುನಾವಣಾ ಆಯೋಗ ಅಧಿಕೃತ ಮಾಹಿತಿ ನೀಡಿದೆ. ನಾಗಾಲ್ಯಾಂಡ್‌ನ 60 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಎನ್‌ಡಿಪಿಪಿ ಮೈತ್ರಿಕೂಟವು 34 ಗೆಲುವು ಸಾಧಿಸುವ ಮೂಲಕ ಮತ್ತೆ ಸರ್ಕಾರವನ್ನು ರಚಿಸಲಿದೆ.
ಈ ಕುರಿತು ಸುದ್ದಿಸಂಸ್ಥೆ 'ಎಎನ್‌ಐ'ಗೆ ಪ್ರಕ್ರಿಯಿಸಿರುವ ಕೇಂದ್ರ ಕಾನೂನು ಸಚಿವ ಕರೆನ್ ರಿಜಿಜು, 'ಈಶಾನ್ಯದಲ್ಲಿ ಬಿಜೆಪಿ ಗೆಲ್ಲುತ್ತಿದೆ. ಜನರ ಬೆಂಬಲವನ್ನು ಗಳಿಸುತ್ತಿದೆ. ಇದಕ್ಕೆ ಸರಳ ಕಾರಣವೆಂದರೆ, ಪ್ರಧಾನಿ ಮೋದಿ ಅವರು ಮಾಡಿದ ಕೆಲಸಗಳು ಸಾರ್ವಜನಿಕರನ್ನು ತಲುಪುತ್ತಿದೆ. ಚುನಾವಣೆಗಳಲ್ಲಿ ನಾವು ಜನರ ವಿಶ್ವಾಸ ಗಳಿಸುತ್ತಿದ್ದೇವೆ ಎಂದರ್ಥ. ಈಶಾನ್ಯದ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿಯ ಪ್ರಭಾವ ಮಾತ್ರ ಕಾಣಿಸುತ್ತದೆ ' ಎಂದು ಹೇಳಿದ್ದಾರೆ.

ನಾಗಾಲ್ಯಾಂಡ್ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎನ್‌ಡಿಪಿಪಿ ಅಭ್ಯರ್ಥಿ ಹೆಕಾನಿ ಜಖಾಲು ಅವರು ದಿಮಾಪುರ್-3 ಕ್ಷೇತ್ರದಲ್ಲಿ 1,536 ಮತಗಳ ಅಂತರದಿಂದ ಗೆದ್ದು ನಾಗಾಲ್ಯಾಂಡ್‌ನ ಮೊದಲ ಮಹಿಳಾ ಶಾಸಕರಾದರು. ಈ ವರ್ಷ ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಲ್ವರು ಮಹಿಳಾ ಅಭ್ಯರ್ಥಿಗಳಲ್ಲಿ ಜಖಲು ಕೂಡ ಒಬ್ಬರು.
ಚುನಾವಣಾ ಆಯೋಗದ ಅಧಿಕೃತ ಫಲಿತಾಂಶ
ಎನ್‌ಡಿಪಿಪಿ, ಬಿಜೆಪಿ ಮತ್ತು ಆರ್‌ಪಿಐನ ಎನ್‌ಡಿಎ ಮೈತ್ರಿಕೂಟ 32 ಸ್ಥಾನಗಳಲ್ಲಿ ಜಯಗಳಿಸಿದೆ. ನಾಗಾಲ್ಯಾಂಡ್‌ನಲ್ಲಿ ಬಹುಮತ ಗಳಿಸಬೇಕೆಂದರೆ 31 ಸೀಟುಗಳನ್ನು ಗೆಲ್ಲಬೇಕು. ಎನ್‌ಡಿಪಿಪಿ 24 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 11 ಸ್ಥಾನಗಳನ್ನು ಗೆದ್ದಿದೆ. ಆರ್‌ಪಿಐ ಎರಡು ಸ್ಥಾನಗಳಲ್ಲಿ ಜಯಗಳಿಸಿದೆ.

ಪ್ರಧಾನಿ ಮೋದಿ ಟ್ವೀಟ್
ಆಶೀರ್ವಾದ ಮಾಡಿದ್ದಕ್ಕಾಗಿ ನಾಗಾಲ್ಯಾಂಡ್ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ. ಇದು ಎಚ್‌ಡಿಪಿಪಿ ಹಾಗೂ ಬಿಜೆಪಿ ಮೈತ್ರಿಕೂಟವು ರಾಜ್ಯಕ್ಕೆ ಸೇವೆ ಸಲ್ಲಿಸಲು ಮತ್ತೊಂದು ಜನಾದೇಶವಾಗಿದೆ. ಡಬಲ್ ಇಂಜಿನ್ ಸರ್ಕಾರ ರಾಜ್ಯದ ಪ್ರಗತಿಗೆ ಶ್ರಮಿಸುತ್ತದೆ. ಈ ಫಲಿತಾಂಶವನ್ನು ಖಚಿತಪಡಿಸಿದ ನಮ್ಮ ಪಕ್ಷದ ಕಾರ್ಯಕರ್ತರ ಶ್ರಮಕ್ಕಾಗಿ ನಾನು ಶ್ಲಾಘಿಸುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ತ್ರಿಪುರಾ ಹಾಗೂ ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಪಕ್ಷದ ಹಿರಿಯ ನಾಯಕರ ಸಭೆ ನಡೆಯಲಿದೆ. ಪ್ರಧಾನಿ ಮೋದಿ ಅವರು ತ್ರಿಪುರಾ ಹಾಗೂ ನಾಗಾಲ್ಯಾಂಡ್ ಗೆಲುವಿಗೆ ಅಭಿನಂದನೆ ಸಲ್ಲಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.












Click it and Unblock the Notifications