ಇಸ್ಲಾಂನಲ್ಲಿ ಮಾಂಸ ಸೇವನೆ ಕಡ್ಡಾಯವಲ್ಲ, ಮುಸ್ಲಿಮರೇ ಗೋಮಾಂಸ ತ್ಯಜಿಸಿ
ಇಸ್ಲಾಂ ಧರ್ಮದಲ್ಲಿ ಎಲ್ಲೂ ಮುಸ್ಲಿಮರು ಮಾಂಸ ತಿನ್ನಬೇಕೆಂದು ಹೇಳಿಲ್ಲ. ಎಲ್ಲಾ ಮುಸ್ಲಿಮರು ಮಾಂಸಾಹಾರ ತ್ಯಜಿಸುವುದು ಸೂಕ್ತ, ದೇಶದೆಲ್ಲೆಡೆ ಗೋಹತ್ಯೆ ನಿಷೇಧಗೊಳ್ಳಲಿ ಎಂದು ಮಾಜಿ ಉತ್ತರಪ್ರದೇಶದ ಸಚಿವ ಅಜಂಖಾನ್ ಕರೆ ನೀಡಿದ್ದಾರೆ.
ನವದೆಹಲಿ, ಮಾ 27 (ಪಿಟಿಐ) : ವಿವಾದವನ್ನು ಮೈಗೂಡಿಸಿಕೊಂಡು ಬಂದಿರುವ ಉತ್ತರ ಪ್ರದೇಶದ ಮಾಜಿ ಸಚಿವರೊಬ್ಬರು ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಮಾಂಸ ತ್ಯಜಿಸಿ ಎಂದು ಕರೆನೀಡಿದ್ದಾರೆ.
ಏಳು ಬಾರಿ ಶಾಸಕರಾಗಿರುವ ಮತ್ತು ಕಳೆದ ಅಖಿಲೇಶ್ ಯಾದವ್ ಸರಕಾರದಲ್ಲಿ ಸಚಿವರಾಗಿದ್ದ 'ಎಮ್ಮೆ' ಖ್ಯಾತಿಯ ಅಜಂ ಖಾನ್, ಹಿಂದೂಸ್ಥಾನದಲ್ಲಿ ಗೋಹತ್ಯೆ ನಿಷೇಧಗೊಳಿಸಬೇಕೆಂದು ಆಗ್ರಹಿಸಿದ್ದಾರೆ. (ಗೋ ಹತ್ಯೆ ಮಾಡುವವರ ಕೈ ಕಾಲು ಮುರಿವೆ)

ಅಕ್ರಮ ಕಸಾಯಿಖಾನೆ ಮತ್ತು ಸಕ್ರಮ ಕಸಾಯಿಖಾನೆ ಎಂದೇನೂ ಇಲ್ಲ, ಅಕ್ರಮ ಕಸಾಯಿಖಾನೆಯಲ್ಲೂ ಪ್ರಾಣಿಗಳನ್ನು ವಧೆ ಮಾಡುವುದು ಸಕ್ರಮದಲ್ಲೂ ಅದನ್ನೇ ಮಾಡುವುದು. ದೇಶದಲ್ಲಿ ಕಸಾಯಿಖಾನೆಯನ್ನು ಬಂದ್ ಮಾಡುವುದೇ ಸೂಕ್ತ ಎಂದು ಅಜಂಖಾನ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಾಂಸ ಮಾರಾಟಗಾರರು ಕರೆ ನೀಡಿರುವ ಮುಷ್ಕರದ ಬಗ್ಗೆ ಪ್ರತಿಕ್ರಿಯಿಸುತ್ತಾ ಅಜಂ ಖಾನ್, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಗೋಹತ್ಯೆ ಕಾನೂನುಬದ್ದ. ದೇಶದ ಎಲ್ಲಾ ಭಾಗದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಲಿ.
ಇಸ್ಲಾಂ ಧರ್ಮದಲ್ಲಿ ಎಲ್ಲೂ ಮುಸ್ಲಿಮರು ಮಾಂಸ ತಿನ್ನಬೇಕೆಂದು ಹೇಳಿಲ್ಲ, ದೇಶದ ಎಲ್ಲಾ ಮುಸ್ಲಿಮರು ಮಾಂಸಾಹಾರ ತ್ಯಜಿಸುವುದು ಸೂಕ್ತ ಎಂದು ಅಜಂಖಾನ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆ ಬಂದ್ ಮಾಡುವ ಯೋಗಿ ಆದಿತ್ಯನಾಥ್ ಸರಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಅಜಂಖಾನ್, ಮುಖ್ಯಮಂತ್ರಿಗಳ ಲಾಜಿಕ್ ಅರ್ಥವಾಗುವುದಿಲ್ಲ. ಅನುಮತಿ ಪಡೆದ ಕಸಾಯಿಖಾನೆಗಳಲ್ಲಿ ಪ್ರಾಣಿಗಳನ್ನು ವಧೆ ಮಾಡುವುದಿಲ್ಲವೇ ಎಂದು ಅಜಂಖಾನ್, ಉತ್ತರಪ್ರದೇಶ ಸರಕಾರವನ್ನು ಪ್ರಶ್ನಿಸಿದ್ದಾರೆ.
ಅಜಂಖಾನ್ ಎಮ್ಮೆ ಕಥೆ: ಫೆಬ್ರವರಿ 1, 2014ರಂದು ಉತ್ತರಪ್ರದೇಶದ ನಗರಾಭಿವೃದ್ದಿ ಸಚಿವರಾಗಿದ್ದ ಅಜಂಖಾನ್ ಅವರ ರಾಂಪುರದ ಫಾರಂಹೌಸಿನಿಂದ ಏಳು ಎಮ್ಮೆಗಳು ಕಾಣೆಯಾಗಿದ್ದವು.
ಇದರಿಂದ ಸಿಡಿಮಿಡಿಗೊಂಡಿದ್ದ ಅಜಂಖಾನ್, ಇಡೀ ಜಿಲ್ಲಾಡಳಿತವನ್ನೇ ಎಮ್ಮೆ ಹುಡುಕುವ ಕೆಲಸಕ್ಕೆ ನಿಯೋಜಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಹಿಡಿದು ಎಲ್ಲರೂ ಎಮ್ಮೆಯ ಹಿಂದೆ ಬಿದ್ದಿದ್ದರು.
ಇಡೀ ವಿದ್ಯಮಾನ ರಾಷ್ಟ್ರಮಟ್ಟದಲ್ಲಿ ನಗೆಪಟಾಲಿಗೆ ಗುರಿಯಾದರೂ ಕ್ಯಾರೇ ಮಾಡದ ಅಜಂಖಾನ್, ಪೊಲೀಸರಿಗೆ ಫರ್ಮಾನು ಹೊರಡಿಸುತ್ತಲೇ ಇದ್ದರು.
ಫುಟ್ ಪ್ರಿಂಟ್, ಶ್ವಾನದಳವನ್ನು ಬಳಸಿಕೊಂಡರೂ ಎಮ್ಮೆ ಪತ್ತೆಯಾಗಿರಲಿಲ್ಲ. ಕೆಲವು ದಿನಗಳ ನಂತರ ಅಜಂಖಾನ್ ಎಮ್ಮೆಗಳು ಪತ್ತೆಯಾದವು. ಅಂದಿನಿಂದ ಅಜಂಖಾನ್ ಅವರನ್ನು 'ಎಮ್ಮೆ ಸಚಿವ' ಎಂದೂ ಕರೆಯುವುದುಂಟು.












Click it and Unblock the Notifications