ಮುಂಬೈನ ಬೃಹತ್ ವಸತಿ ಕಟ್ಟಡಕ್ಕೆ ಬೆಂಕಿ: 7 ಮಂದಿ ಸಾವು, 51 ಮಂದಿಗೆ ಗಾಯ, ವಿವರ
ಮುಂಬೈ, ಅಕ್ಟೋಬರ್ 06: ಶುಕ್ರವಾರ ನಸುಕಿನ ಜಾವ ಮುಂಬೈ ಉಪನಗರವಾದ ಗೋರೆಗಾಂವ್ ಪಶ್ಚಿಮದಲ್ಲಿರುವ ಬಹುಮಹಡಿ ವಸತಿ ಕಟ್ಟಡದಲ್ಲಿ ದಿಢೀರನೇ ವ್ಯಾಪಕ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕನಿಷ್ಠ 7 ಮಂದಿ ಪ್ರಾಣ ಬಿಟ್ಟಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಬೆಂಕಿ ಅವಘಡದಲ್ಲಿ ಸುಮಾರು 51 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ.
ಮುಂಬೈ ಗೋರೆಗಾಂವ್‌ನ ಎಂಜಿ ರಸ್ತೆಯಲ್ಲಿರುವ ಜೈ ಭವಾನಿ ಕಟ್ಟಡದಲ್ಲಿ ಶುಕ್ರವಾರ ನಸುಕಿನ ಜಾವ 3.30ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಸುಮಾರು ನಾಲ್ಕು ಗಂಟೆಗಳ ನಂತರ ಅಂದರೆ ಬೆಳಗ್ಗೆ 6:54 ರ ಸುಮಾರಿಗೆ ಬೆಂಕಿ ನಂದಿಸಲಾಗಿದೆ.

ಕಟ್ಟಡದ ನೆಲ ಮಹಡಿಯಲ್ಲಿದ್ದ ಮಳಿಗೆಗಳು, ಹಾಳಾದ ವಸ್ತುಗಳು, ವಾಹನಗಳು, ಮೀಟರ್ ಕ್ಯಾಬಿನ್, ಚಿಂದಿ, ಪ್ಲೈವುಡ್ ನಂತರಹ ವಸ್ತುಗಳಿಗೆ ಬೆಂಕಿ ತಗುಲಿದೆ. ಅದರು ನೋಡ ನೋಡುತ್ತಿದ್ದಂತೆಯೇ ಸುಮಾರು 2000 ಚದರ ಅಡಿ ವ್ಯಾಪ್ತಿಸಿ ಕಟ್ಟಡ ತುಂಬಾ ಆವರಿಸಿಕೊಂಡಿದೆ. ಬಾಗಿಲು, ಕಿಟಕಿಗಳು ನಾಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ 51 ಮಂದಿಯಲ್ಲಿ 36 ಮಂದಿಯನ್ನು ಬಾಳಾಸಾಹೇಬ್ ಠಾಕ್ರೆ ವೈದ್ಯಕೀಯ ಕಾಲೇಜು (ಎಚ್‌ಬಿಟಿ) ಆಸ್ಪತ್ರೆಗೆ ದಾಖಲಾಗಿದೆ. 15 ಮಂದಿ ಕೂಪರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ತ್ವರಿತವಾಗಿ ಕಸ್ತೂರಬಾ ಆಸ್ಪತ್ರೆಗೆ ರವಾನಿಸಲಾಗಿದೆ.

ಅಗ್ನಿಶಾಮಕ ಅಧಿಕಾರಿ ಪ್ರತಿಕ್ರಿಯೆ
ಮೃತರ ಪೈಕಿ ಇಬ್ಬರು ಅಪ್ರಾಪ್ತರಾಗಿದ್ದು, ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಎಂದು ಗುರುತಿಸಲಾಗಿದೆ. 2006ರಲ್ಲಿ ಕೊಳೆಗೇರಿ ಪುನರ್ವಸತಿ ಯೋಜನೆಯಡಿ ಕಟ್ಟಡ ನಿರ್ಮಿಸಲಾಗಿದೆ. ಅಗ್ನಿಶಾಮಕ ವ್ಯವಸ್ಥೆ ಇಲ್ಲ. ಲಿಫ್ಟ್ ಹಳೆಯದಾಗಿತ್ತು ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ರವೀಂದ್ರ ಅಂಬಲ್ಗೇಕರ್ ವಿವರಿಸಿದ್ದಾರೆ.
ಈ ದುರಂತ ವಿಚಾರ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಸಂತ್ರಸ್ತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50,000 ರೂ. ಘೋಷಿಸಿದ್ದಾರೆ. ಮುಂಬೈನ ಗೋರೆಗಾಂವ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ಪ್ರಾಣ ಹಾನಿಯಾಗಿರುವುದು ನೋವು ತಂದಿದೆ ಎಂದು ಪ್ರಧಾನಿ ಸಂತಪಾ ಸೂಚಿಸಿದ್ದಾರೆ. ಗಾಯಾಳುಗಳು ಬೇಗ ಗುಣಮುಖವಾಗುವಂತೆ ಅವರು ಪ್ರಾರ್ಥಿಸುವುದಾಗಿ ಹೇಳಿದರು.
ಶಿಂಧೆ ಸರ್ಕಾರದಿಂದ 5 ಲಕ್ಷ ಪರಿಹಾರ
ಪಿಎಂಎನ್‌ಆರ್‌ಎಫ್‌ನಿಂದ 2 ಲಕ್ಷ ರೂ.ಗಳನ್ನು ಮೃತರ ಕುಟುಂಬಗಳಿಗೆ ನೀಡಲಾಗುವುದು. ಗಾಯಾಳುಗಳಿಗೆ 50,000 ರೂಪಾಯಿ ಘೋಷಣೆ ಆಗಿದೆ.
ಇತ್ತ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಹ ಮೃತರಿಗೆ ಸಂತಾಪ ಸೂಚಿಸಿದ್ದು, ಪೊಲೀಸರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದ್ದಾರೆ. ಶಿಂಧೆ ಸರ್ಕಾರ ಮೃತರ ಕುಟುಂಬಕ್ಕೆ ₹5 ಲಕ್ಷ ಆರ್ಥಿಕ ಸಹಾಯ ಘೋಷಿಸಿದೆ.
ದೇವೇಂದ್ರ ಫಡ್ನವಿಸ್ ಸಂತಾಪ
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸಾಮಾಜಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, 'ಮುಂಬೈನ ಗೋರೆಗಾಂವ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಜೀವಹಾನಿಯ ಬಗ್ಗೆ ತಿಳಿದು ನೋವಾಗಿದೆ. ನಾವು ಎಲ್ಲಾ ಸಹಾಯ, ಸಹಕಾರ ನೀಡಲಿದ್ದೇವೆ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಕಂಬನಿ ಮಿಡಿದರು.
ಘಟನೆ ಕುರಿತು ಸ್ಲಂ ಪುನರ್ವಸತಿ ಪ್ರಾಧಿಕಾರ, ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಮತ್ತು ಅಗ್ನಿಶಾಮಕ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು. ಮುಂದಿನ ಎರಡೇ ವಾರಗಳಲ್ಲಿ ವರದಿ ಸಲ್ಲಿಸಲಾಗುವುದು ಎಂದು ಮಹಾರಾಷ್ಟ್ರ ಸಚಿವ ಲೋಧಾ ಹೇಳಿದ್ದಾರೆ.












Click it and Unblock the Notifications